Advertisement

ಮತಗಳ ಹೋಲಿಕೆ ಪ್ರಮಾಣ ಹೆಚ್ಚಳ

01:09 AM Apr 09, 2019 | mahesh |

ಹೊಸದಿಲ್ಲಿ: ಚುನಾವಣ ಪ್ರಕ್ರಿಯೆಯ ವಿಶ್ವಾಸಾರ್ಹತೆ ಹೆಚ್ಚಿಸುವ ನಿಟ್ಟಿನಲ್ಲಿ ಇವಿಎಂಗಳಲ್ಲಿನ ಮತಗಳು ಮತ್ತು ಮತ ದೃಢೀಕರಣ ಯಂತ್ರಗಳಲ್ಲಿನ (ವಿವಿಪ್ಯಾಟ್‌) ಮತಗಳ ಹೋಲಿಕೆಯ ಪ್ರಮಾಣವನ್ನು ಹೆಚ್ಚಿಸುವಂತೆ ಸುಪ್ರೀಂ ಕೋರ್ಟ್‌ ಸೋಮವಾರ ಮಹತ್ವದ ಆದೇಶ ನೀಡಿದೆ. ಅದರಂತೆ, ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯಲ್ಲಿನ ಒಂದು ಯಂತ್ರದ ಮತಗಳನ್ನು ಹೋಲಿಸುವ ಬದಲಿಗೆ ಈ ಲೋಕಸಭೆ ಚುನಾವಣೆಯಲ್ಲಿ 5 ಮತಗಟ್ಟೆಗಳಲ್ಲಿನ ತಲಾ ಒಂದು ಯಂತ್ರಗಳ ಮತ ಗಳನ್ನು ಹೋಲಿಕೆ ಮಾಡಲಾಗುತ್ತದೆ. ಆದರೆ, ಈ ಪ್ರಕ್ರಿಯೆಯಿಂದಾಗಿ ಚುನಾವಣಾ ಫ‌ಲಿತಾಂಶ ಪ್ರಕಟನೆ ಒಂದು ಗಂಟೆ ವಿಳಂಬವಾಗುವ ಸಾಧ್ಯತೆಯಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ.

Advertisement

ನ್ಯಾಯಾಲಯ ನೀಡಿರುವ ಈ ತೀರ್ಪಿನಿಂದಾಗಿ ವಿಪಕ್ಷಗಳ ಕೋರಿಕೆಗೆ ಪೂರ್ಣ ಪ್ರಮಾಣದಲ್ಲಿ ಯಶಸ್ಸು ಸಿಕ್ಕಿಲ್ಲ. ಏಕೆಂದರೆ, ಶೇ.50ರಷ್ಟು ಇವಿಎಂಗಳು ಹಾಗೂ ವಿವಿಪ್ಯಾಟ್‌ಗಳ ಮತಗಳನ್ನು ಹೋಲಿಕೆ ಮಾಡಬೇಕು ಎಂದು 21 ವಿಪಕ್ಷಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು. ಆದರೆ, ಶೇ.50ರಷ್ಟು ಹೋಲಿಕೆ ಮಾಡಲು ಭಾರಿ ಸಂಖ್ಯೆಯ ಸಿಬಂದಿ ಬೇಕಾಗುತ್ತದೆ ಹಾಗೂ ಮೂಲಸೌಕರ್ಯ ಸಮಸ್ಯೆ ಗಳೂ ಇರುವ ಕಾರಣ, ಅದು ಸಾಧ್ಯವಿಲ್ಲ ಎಂದು ಸಿಜೆಐ ರಂಜನ್‌ ಗೊಗೋಯ್‌ ನೇತೃತ್ವದ ನ್ಯಾಯಪೀಠ ಹೇಳಿದೆ.

ಇದೇ ವೇಳೆ, ಸುಪ್ರೀಂ ಆದೇಶಕ್ಕೆ ಪ್ರತಿಕ್ರಿಯೆ ನೀಡಿರುವ ಚುನಾವಣಾ ಆಯೋಗವು, ತತ್‌ಕ್ಷಣವೇ ಸುಪ್ರೀಂ ಕೋರ್ಟ್‌ನ ಆದೇಶವನ್ನು ಅನುಷ್ಠಾನ ಮಾಡಲು ಬೇಕಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತೇವೆ ಎಂದಿದೆ. ಸುಪ್ರೀಂ ಆದೇಶದಿಂದಾಗಿ, ಈ ಚುನಾವಣೆಯಲ್ಲಿ ಒಟ್ಟಾರೆ 10.35 ಲಕ್ಷ ಮತಗಟ್ಟೆಗಳ ಪೈಕಿ 20,600ರಲ್ಲಿ ಇವಿಎಂ-ವಿವಿಪ್ಯಾಟ್‌ ಮತಗಳ ಹೋಲಿಕೆ ಮಾಡಲಾಗುತ್ತದೆ ಎಂದೂ ಹೇಳಿದೆ.

ವಿಳಂಬ ಓಕೆ ಎಂದಿದ್ದ ವಿಪಕ್ಷಗಳು: ವಿಪಕ್ಷಗಳ ಕೋರಿಕೆಗೆ ಪ್ರತಿಕ್ರಿಯಿಸಿದ್ದ ಆಯೋಗವು, ಶೇ.50ರಷ್ಟು ವಿವಿಪ್ಯಾಟ್‌ ಹೋಲಿಕೆ ಮಾಡುತ್ತಾ ಕುಳಿತರೆ, ಫ‌ಲಿತಾಂಶ ಪ್ರಕಟವಾಗಲು 5.2 ದಿನ ಕಾಯ ಬೇಕಾಗುತ್ತದೆ ಎಂದಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ವಿಪಕ್ಷಗಳು, ಮತ ಎಣಿಕೆ 6 ದಿನ ವಿಳಂಬವಾದರೂ ಸಮಸ್ಯೆಯಿಲ್ಲ. ಚುನಾ ವಣಾ ಪ್ರಕ್ರಿಯೆ ಯಲ್ಲಿನ ವಿಶ್ವಾಸಾರ್ಹತೆ ಹೆಚ್ಚುವ ಕಾರಣ ಇದನ್ನು ಗಂಭೀರ ವಿಳಂಬ ಎಂದು ಪರಿಗಣಿಸಲಾಗದು ಎಂದಿದ್ದವು.

ಮರುಪರಿಶೀಲನೆಗೆ ಕಾಂಗ್ರೆಸ್‌ ಕೋರಿಕೆ
ಕೇವಲ 5 ಮತಗಟ್ಟೆಗಳಲ್ಲಿ ಮತಗಳ ಹೋಲಿಕೆ ಮಾಡುವ ಸುಪ್ರೀಂ ಕೋರ್ಟ್‌ ಆದೇಶವು ತೃಪ್ತಿ ತಂದಿಲ್ಲ ಎಂದು ಕಾಂಗ್ರೆಸ್‌ ಹೇಳಿದೆ. ಅಲ್ಲದೆ, ನ್ಯಾಯಾಲಯವು ತನ್ನ ತೀರ್ಪನ್ನು ಮರುಪರಿಶೀಲಿ ಸಬೇಕು ಎಂದೂ ಆಗ್ರಹಿಸಿದೆ. ಈ ಕುರಿತು ಮಾತ ನಾಡಿದ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುಜೇವಾಲಾ, “ವಿವಿಪ್ಯಾಟ್‌ಗಳನ್ನು ಸರಿಯಾಗಿ ಬಳಕೆಯೇ ಮಾಡುವುದಿಲ್ಲ ಎಂದಾದ ಮೇಲೆ ಆ ಯಂತ್ರಗಳ ಖರೀದಿಗೆ ನಾವು 18 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿರುವುದಾದರೂ ಏಕೆ ಎನ್ನುವುದು ಒಬ್ಬ ನಾಗರಿಕನಾಗಿ ನನ್ನ ಪ್ರಶ್ನೆ. ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಯಾವುದೇ ಅನುಮಾನಕ್ಕೆ ಎಡೆಮಾಡದಂತೆ ಚುನಾವಣೆ ನಡೆಯಬೇಕೆನ್ನುವುದು ನಮ್ಮ ಬಯಕೆಯಾಗಿದೆ. ಹಾಗಾಗಿ, ಸುಪ್ರೀಂ ಕೋರ್ಟ್‌ ತನ್ನ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಮನವಿ ಮಾಡುತ್ತೇನೆ’ ಎಂದಿದ್ದಾರೆ.

Advertisement

ಹಿಂದಿನ ಪ್ರಕ್ರಿಯೆ ಏನಿತ್ತು?
ವಿಧಾನಸಭೆ ಚುನಾವಣೆಯಾಗಿದ್ದಲ್ಲಿ, ಒಂದು ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯಲ್ಲಿನ ಒಂದು ಇವಿಎಂ ಮತ್ತು ವಿವಿಪ್ಯಾಟ್‌ ಯಂತ್ರಗಳಲ್ಲಿನ ಮತಗಳನ್ನು ಹೋಲಿಕೆ ಮಾಡಲಾಗುತ್ತಿತ್ತು. ಲೋಕಸಭೆ ಚುನಾವಣೆಯಾಗಿದ್ದಲ್ಲಿ, ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯಲ್ಲಿನ ತಲಾ ಒಂದು ಇವಿಎಂ ಮತ್ತು ವಿವಿಪ್ಯಾಟ್‌ ಮತಗಳ ಹೋಲಿಕೆ ಮಾಡಲಾಗುತ್ತಿತ್ತು. ಆದರೆ ಈಗ ಪ್ರತಿ ಯೊಂದು ವಿಧಾನಸಭಾ ಕ್ಷೇತ್ರದ ಐದು ಮತಗಟ್ಟೆಯಲ್ಲಿನ ತಲಾ ಒಂದು ಇವಿಎಂ ಮತ್ತು ವಿವಿಪ್ಯಾಟ್‌ ಮತಗಳ ಹೋಲಿಕೆ ಮಾಡಬೇಕಾಗು ತ್ತದೆ. ಇದಕ್ಕೆ ಆಯೋಗವೂ ಸಮ್ಮತಿ ಸೂಚಿಸಿದೆ.

ಚಿದು “ನ್ಯಾಯ್‌’ ಸವಾಲು
“ರಾಹುಲ್‌ಗಾಂಧಿ ಅವರು ಘೋಷಿಸಿರುವ ನ್ಯಾಯ್‌ ಯೋಜನೆಗೆ ದೇಶದ ಜಿಡಿಪಿಯ ಶೇ.1ಕ್ಕಿಂತಲೂ ಕಡಿಮೆ ಹಣ ಸಾಕಾಗುತ್ತದೆ. ದೇಶದ ಶೇ.20ರಷ್ಟು ಕಡುಬಡವರಿಗೆ ಇಷ್ಟೊಂದು ಮೊತ್ತವನ್ನು ಎತ್ತಿಡಲು ಸಾಧ್ಯವಿಲ್ಲ ಎಂದಾದರೆ, ಭಾರತವನ್ನು ಹೃದಯಶೂನ್ಯ ವ್ಯಕ್ತಿಗಳು ಆಳುತ್ತಿದ್ದಾರೆ ಎಂದರ್ಥ.’ ನ್ಯಾಯ್‌ ಯೋಜನೆಗೆ ಹಣ ಎಲ್ಲಿಂದ ಬರುತ್ತದೆ ಎಂಬ ಪ್ರಶ್ನೆಗೆ ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಉತ್ತರಿಸಿದ್ದು ಹೀಗೆ. ಅಷ್ಟೇ ಅಲ್ಲ, ಯಾವುದಾದರೂ ಒಬ್ಬ ಆರ್ಥಿಕ ತಜ್ಞ ನನ್ನ ಮುಂದೆ ಬಂದು, ಈ ಯೋಜನೆ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಹೇಳಲಿ ನೋಡೋಣ ಎಂದೂ ಅವರು ಸವಾಲು ಹಾಕಿದ್ದಾರೆ.

ಆಡ್ವಾಣಿ, ಜೋಶಿ ಭೇಟಿಯಾದ ಶಾ
ಲೋಕಸಭೆ ಚುನಾವಣೆಯಲ್ಲಿ ಟಿಕೆಟ್‌ ನಿರಾಕರಿಸಿದ್ದಕ್ಕೆ ಮುನಿಸಿಕೊಂಡಿದ್ದಾರೆ ಎನ್ನಲಾಗಿರುವ ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಆಡ್ವಾಣಿ ಮತ್ತು ಮುರಳಿ ಮನೋಹರ ಜೋಶಿಯವರನ್ನು ಪಕ್ಷದ ಅಧ್ಯಕ್ಷ ಅಮಿತ್‌ ಶಾ ಸೋಮವಾರ ಭೇಟಿ ಮಾಡಿದ್ದಾರೆ. ಆದರೆ ಭೇಟಿ ವೇಳೆ ಯಾವ ವಿಚಾರ ಚರ್ಚೆಯಾಯಿತು ಎಂಬುದು ತಿಳಿದುಬಂದಿಲ್ಲ. ಜೋಶಿ ಕ್ಷೇತ್ರ ಕಾನ್‌ಪುರದಿಂದ ಸತ್ಯದೇವ್‌ ಪಚೌರಿಯನ್ನು ಕಣಕ್ಕಿಳಿಸಲಾಗಿದ್ದು, ಆಡ್ವಾಣಿಯವರ ಗಾಂಧಿನಗರ ಕ್ಷೇತ್ರದಿಂದ ಸ್ವತಃ ಅಮಿತ್‌ ಶಾ ಸ್ಪರ್ಧಿಸಿದ್ದಾರೆ. ಟಿಕೆಟ್‌ ನೀಡದ್ದಕ್ಕೆ ಆಡ್ವಾಣಿ ನೇರವಾಗಿ ಟೀಕಿಸದೇ ಇದ್ದರೂ, ಬ್ಲಾಗ್‌ನಲ್ಲಿ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇನ್ನು ಕಣಕ್ಕೆ ಇಳಿಯದಂತೆ ಪಕ್ಷ ಸೂಚಿಸಿದೆ ಎಂಬುದಾಗಿ ನೇರವಾಗಿಯೇ ಜೋಶಿ ತಮ್ಮ ಅತೃಪ್ತಿಯನ್ನು ಹೊರಹಾಕಿದ್ದರು.

ನಾಳೆ ಅಮೇಠಿಯಿಂದ ರಾಹುಲ್‌ ನಾಮಪತ್ರ
ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಉತ್ತರಪ್ರದೇಶದ ಅಮೇಠಿಯಿಂದ ಬುಧವಾರ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ನಾಮಪತ್ರ ಸಲ್ಲಿಕೆ ವೇಳೆ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರೂ ರಾಹುಲ್‌ಗೆ ಸಾಥ್‌ ನೀಡಲಿದ್ದಾರೆ. ಬಳಿಕ ಗೌರಿಗಂಜ್‌ ನಗರದಲ್ಲಿ ರಾಹುಲ್‌ ರೋಡ್‌ಶೋ ಕೂಡ ನಡೆಯಲಿದೆ. ಅಮೇಠಿಯಲ್ಲಿ ಮೇ 6ರಂದು ಮತದಾನ ನಡೆಯಲಿದ್ದು, 15 ವರ್ಷಗಳಿಂದಲೂ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ರಾಹುಲ್‌ಗೆ ಈ ಬಾರಿ ಕೇಂದ್ರ ಸಚಿವೆ ಸ್ಮತಿ ಇರಾನಿ ಪ್ರಬಲ ಪೈಪೋಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next