ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಬೆಕ್ಕುಗಳಲ್ಲಿ ಕಂಡುಬರುವ ಫೆಲೈನ್ ಪ್ಯಾನ್ ಲ್ಯುಕೊಪೀನಿಯಾ ವೈರಸ್ ಹಾವಳಿ ಹೆಚ್ಚಳಗೊಂಡಿದೆ. ಇದು ಬೆಕ್ಕುಗಳಲ್ಲಿ ಸಾಮಾನ್ಯ ರೋಗವಾಗಿದ್ದರೂ ನಿಯಂತ್ರಣಕ್ಕಾಗಿ ಲಸಿಕೆ ಹಾಕಿಸಿಕೊಳ್ಳುವುದು ಅಗತ್ಯವಾಗಿದೆ.
6 ತಿಂಗಳ ಹಿಂದೆ ಈ ವೈರಸ್ ಜಿಲ್ಲೆಯಲ್ಲಿ ವ್ಯಾಪಿಸುತ್ತಿರುವುದು ಪತ್ತೆಯಾಗಿತ್ತು. ಇದೀಗ ಹಾವಳಿ ಹೆಚ್ಚುತ್ತಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವೈರಸ್ ಸೋಂಕು ಬೆಕ್ಕಿನ ದೇಹದಲ್ಲಿ ಬಿಳಿ ರಕ್ತ ಕಣಗಳ ಕೊರತೆಗೆ ಕಾರಣವಾಗುತ್ತದೆ. ಇದು ಫೆಲೈನ್ ಪ್ಯಾನ್‌ಲ್ಯುಕೊಪೀನಿಯಾ ವೈರಸ್ (ಎಫ್ ಪಿಎಲ್ ವಿ) ಎಂಬ ಪಾರ್ವೋವೈರಸ್ ಕುಟುಂಬದ ವೈರಸ್ ನಿಂದ ಉಂಟಾಗುತ್ತದೆ. ಬೆಕ್ಕುಗಳ ಪರಸ್ಪರ ಸಂಪರ್ಕದಿಂದ ಈ ಸೋಂಕು ಹರಡುತ್ತದೆ ಮತ್ತು ಲಸಿಕೆ ಹಾಕಿಸಿಕೊಳ್ಳುವುದೊಂದೇ ಪರಿಹಾರವಾಗಿದೆ.
ಬೆಕ್ಕಿನಲ್ಲಿ ಹೆಚ್ಚಿನ ಜ್ವರ, ವಾಂತಿ, ಅತಿಸಾರ (ಹೆಚ್ಚಾಗಿ ರಕ್ತಸಿಕ್ತವಾಗಿ), ಹಸಿವಿನ ಕೊರತೆ, ಅನೋರೆಕ್ಸಿಯಾ ಮತ್ತು ನಿರ್ಜಲೀಕರಣದ ಲಕ್ಷಣಗಳು ಕಾಣಿಸುತ್ತವೆ. ಬೆಕ್ಕುಗಳ ಮರಣವೂ ಸಂಭವಿಸುತ್ತದೆ. ಇದು ಬೆಕ್ಕುಗಳಿಂದ ಇತರ ಯಾವುದೇ ಪ್ರಾಣಿ ಅಥವಾ ಮನುಷ್ಯರಿಗೆ ಹರಡುವುದಿಲ್ಲ. ಆದರೂ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ತಿಳಿಸುತ್ತಾರೆ.
ಬೆಕ್ಕುಗಳಲ್ಲಿ ಇಂತಹ ಲಕ್ಷಣಗಳು ಕಂಡುಬಂದಲ್ಲಿ ಪಶುವೈದ್ಯರಲ್ಲಿ ತೋರಿಸಿ, ಲಸಿಕೆ ಹಾಕಿಸುವುದು ಅಗತ್ಯ. ಬೆಕ್ಕುಗಳಿಗೆ ಟ್ರೈಕ್ಯಾಟ್, ಫೆಲಿಜೆನ್ ಅಥವಾ ಫೆಲೋಸೆಲ್ ಲಸಿಕೆಯನ್ನು ನೀಡಬೇಕು. ಆದರೆ ಪ್ರಸ್ತುತ ಸರಕಾರ ಜಾನುವಾರುಗಳಿಗೆ ಮಾತ್ರ ಲಸಿಕೆಗಳನ್ನು ಪೂರೈಸುತ್ತಿದೆ. ಆದರೆ ಖಾಸಗಿ ವೈದ್ಯಕೀಯ ಅಂಗಡಿಗಳಲ್ಲಿ ಲಸಿಕೆಗಳನ್ನು ಪಡೆದು ಪಶುವೈದ್ಯರ ಸಹಾಯ ಪಡೆದು ಲಸಿಕೆ ನೀಡುವುದು ಪೂರಕ. –
ಡಾ| ಅರುಣ್ ಕುಮಾರ್ ಶೆಟ್ಟಿ, ಉಪನಿರ್ದೇಶಕ, ಜಿಲ್ಲಾ ಪಶುಸಂಗೋಪನ ಇಲಾಖೆ