Advertisement

ನಗರದಲ್ಲಿ ಅನಧಿಕೃತ ಪಿಜಿ ಸೆಂಟರ್‌ಗಳ ಹೆಚ್ಚಳ!

07:41 PM Jun 14, 2019 | Team Udayavani |

ಉಡುಪಿ: ಅಂತಾರಾಷ್ಟ್ರೀಯ ಶಿಕ್ಷಣ ಕೇಂದ್ರವಾಗಿ ಬೆಳೆಯುತ್ತಿರುವ ಉಡುಪಿ -ಮಣಿಪಾಲದಲ್ಲಿ ಅನಧಿಕೃತ ಪಿಜಿ ಸೆಂಟರ್‌ಗಳು ತಲೆ ಎತ್ತಿವೆ.

Advertisement

ಉಡುಪಿ -ಮಣಿಪಾಲಕ್ಕೆ ಹೊರ ರಾಜ್ಯ, ರಾಷ್ಟ್ರ ಹಾಗೂ ವಿದೇಶಗಳಿಂದ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಬಂದು ಶಿಕ್ಷಣ ಪಡೆಯುತ್ತಿದ್ದಾರೆ. ಇದನ್ನು ಬಂಡವಾಳ ವಾಗಿಸಿಕೊಂಡವರು ನೂರಾರು ಪೇಯಿಂಗ್‌ ಗೆಸ್ಟ್‌ ಸೆಂಟರ್‌ ಪ್ರಾರಂಭಿಸಿದ್ದಾರೆ. ಆದರೆ ಅವುಗಳಲ್ಲಿ ಶೇ. 95 ರಷ್ಟು ಪಿಜಿಗಳು ಅನಧಿಕೃತವಾಗಿವೆ.

ಅನುಮತಿ ಪಡೆಯದ ಪಿಜಿ
ಉಡುಪಿ ನಗರಸಭೆಯ ವ್ಯಾಪ್ತಿಯಿಂದ ಸುಮಾರು 35 ಪಿಜಿ ಮಾತ್ರ ಟ್ರೇಡ್‌ ಲೈಸೆನ್ಸ್‌ ಪಡೆದುಕೊಂಡಿದೆ. ಮನೆಗಳಲ್ಲಿ ಪಿಜಿ ಸೆಂಟರ್‌ ನಡೆಸಲು ಅವಕಾಶವಿಲ್ಲ. ಆದರೆ ಹೆಚ್ಚಿನ ಹಣದಾಸೆಯಿಂದ ಮಣಿಪಾಲ- ಉಡುಪಿ ಆಸುಪಾಸಿನ ಮನೆಗಳಲ್ಲಿ ಸ್ಥಳೀಯಾಡಳಿತದಿಂದ ಅನುಮತಿ ಪಡೆಯದೆ ಪೇಯಿಂಗ್‌ ಗೆಸ್ಟ್‌ ಉದ್ಯಮ ಪ್ರಾರಂಭಿಸಿದ್ದಾರೆ.

ದಾಖಲೆ ಬೇಕಿಲ್ಲ!
ನಗರದ ಪಿಜಿಗಳಲ್ಲಿ ಸೇರ್ಪಡೆಯಾಗಬೇಕಾದರೆ ಯಾವುದೇ ದಾಖಲೆಗಳು ಬೇಕಾಗಿಲ್ಲ. ಕೊಠಡಿ ಪಡೆದುಕೊಂಡಿರುವವರು ಎಲ್ಲಿಯವರು ಎನ್ನುವ ದಾಖಲೆಯನ್ನು ಯಾವೊಬ್ಬ ಪಿಜಿ ಮಾಲೀಕನೂ ಪಡೆದಿಲ್ಲ ಎನ್ನಲಾಗಿದೆ.
ಜತೆಗೆ ಪಿಜಿ ಕಟ್ಟಡದ ಹೊರಗಡೆ ಸಿಸಿ ಕೆಮರಾವನ್ನೂ ಅಳವಡಿಸಿಲ್ಲ.

ಪೊಲೀಸ್‌ ನಿರಾಕ್ಷೇಪಣ ಪತ್ರ ಕಡ್ಡಾಯ
ನಗರ ಸಂಸ್ಥೆಗಳು ಪಿಜಿ ಸೆಂಟರ್‌ಗಳಿಗೆ ಪರವಾನಗಿ ಕೊಡುವ ಅಧಿಕಾರ ಹೊಂದಿವೆ. ಆದರೆ ಪೊಲೀಸ್‌ ಇಲಾಖೆಯಿಂದ ನಿರಾಕ್ಷೇಪಣ ಪತ್ರವನ್ನು ತರಬೇಕು. ಈ ನಿರಾಕ್ಷೇಪಣ ಪತ್ರವೂ ಕೂಡ ಅಕ್ಕಪಕ್ಕದ ಮನೆಯವರ ಮೇಲೆ ಅವಲಂಬಿತ.

Advertisement

ಅಕ್ಕಪಕ್ಕದ ಮನೆಯವರು ಆಕ್ಷೇಪಣೆ ಸಲ್ಲಿಸದಿದ್ದರೆ ನಿರಾಕ್ಷೇಪಣ ಪತ್ರಕ್ಕೆ ತೊಂದರೆಯಾಗುವುದಿಲ್ಲ. ಇದುವರೆಗೆ ಉಡುಪಿಯಲ್ಲಿ ಗಂಭೀರ ಪ್ರಕರಣಗಳು ನಡೆಯದ ಕಾರಣ ಪಿಜಿ ಸೆಂಟರ್‌ಗಳ ಮೇಲೆ ನಗರಸಭೆ ಯಾಗಲೀ, ಪೊಲೀಸ್‌ ಇಲಾಖೆಯಾಗಲೀ ಕಠಿನವಾಗಿ ಕಾನೂನು ಪರಿಪಾಲನೆ ಕುರಿತು ಗಮನ ಹರಿಸಿಲ್ಲ.

ವಿಶೇಷ ತಪಾಸಣೆ
ನಗರಸಭೆಯ ವ್ಯಾಪ್ತಿ ಅನಧಿಕೃತ ಪಿಜಿ ಸೆಂಟರ್‌ಗಳ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಕಂದಾಯ ಅಧಿಕಾರಿಗಳ ನೇತೃತ್ವದಲ್ಲಿ ಮುಂದಿನ ವಾರದೊಳಗೆ ಅನಧಿಕೃತ ಪಿಜಿಗಳ ಮೇಲೆ ಸ್ಪೆಶಲ್‌ ರೈಡ್‌ ಮಾಡಲಾಗುತ್ತದೆ.
– ಆನಂದ ಸಿ.ಕಲ್ಲೋಳಿಕರ್‌, ಪೌರಾಯುಕ್ತ ಉಡುಪಿ ನಗರಸಭೆ

ಕಾನೂನು ಕ್ರಮ
ಜಿಲ್ಲೆಯಲ್ಲಿ ಇರುವ ಅನಧಿಕೃತ ಪಿಜಿ ಸೆಂಟರ್‌ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
– ನಿಶಾ ಜೇಮ್ಸ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next