Advertisement

ಸಂಸ್ಕೃತ ವಿವಿ ಕುಲಪತಿ ನಿವೃತ್ತ ವಯಸ್ಸು 67ಕ್ಕೆ ಏರಿಕೆ

03:45 AM Mar 24, 2017 | Team Udayavani |

ವಿಧಾನಸಭೆ: ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿಗಳ ನಿವೃತ್ತಿ ವಯಸ್ಸನ್ನು 65 ವರ್ಷದಿಂದ 67 ವರ್ಷಕ್ಕೆ ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕ-2017ಕ್ಕೆ ವಿದಾನಸಭೆಯಲ್ಲಿ ಗುರುವಾರ ಅನುಮೋದನೆ ನೀಡಲಾಯಿತು.

Advertisement

ವಿಧೇಯಕವನ್ನು ಪರ್ಯಾವಲೋಚನೆಗೆ ಮಂಡಿಸಿದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ರಾಜ್ಯದ ಎಲ್ಲಾ ವಿವಿಗಳ ಕುಲಪತಿಗಳ ನಿವೃತ್ತಿ ವಯಸ್ಸು 67 ವರ್ಷ ಇದೆ. ಆದರೆ, ಸಂಸ್ಕೃತ ವಿವಿ ಕುಲಪತಿಗಳ ನಿವೃತ್ತಿ ವಯಸ್ಸು ಮಾತ್ರ 65 ಇದ್ದು, ಉನ್ನತ ಶಿಕ್ಷಣ ಪರಿಷತ್ತಿನ ಸಲಹೆಯಂತೆ ಅದನ್ನು 67ಕ್ಕೆ ಏರಿಸಲು ಹಾಗೂ ಇಲಾಖೆಯ ನಿಯಂತ್ರಕರ ಪದನಾಮವನ್ನು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರಗಳ ಇಲಾಖೆ ಪ್ರಧಾನ ನಿರ್ದೇಶಕರು ಎಂದು ಬದಲಾವಣೆ ಮಾಡುವ ಬಗ್ಗೆ ವಿಧೇಯಕ ಮಂಡಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಪ್ರಸ್ತುತ ಕುಲಪತಿಗಳಿಗೆ ಈ ವಯೋಮಿತಿ ಏರಿಕೆ ಅನ್ವಯವಾಗದಂತೆ ವಿಧೇಯಕಕ್ಕೆ ತಿದ್ದುಪಡಿ ಮಾಡಿ ಎಂದು ಬಿಜೆಪಿ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದಾಗ, ಒಬ್ಬ ವ್ಯಕ್ತಿಗಾಗಿ ವಿಧೇಯಕ ಮಂಡಿಸಲು ಸಾಧ್ಯವಿಲ್ಲ ಎಂದು ಸಚಿವರು ಹೇಳಿ ವಿಧೇಯಕಕ್ಕೆ ಒಪ್ಪಿಗೆ ನೀಡುವಂತೆ ಸದನವನ್ನು ಕೋರಿದರು. ಬಳಿಕ ಧ್ವನಿಮತದಿಂದ ವಿಧೇಯಕ ಅಂಗೀಕರಿಸಲಾಯಿತು.

ಸಂಸ್ಕೃತ ವಿವಿ ನೇಮಕಾತಿ ರದ್ದು: ಸಚಿವ ರಾಯರೆಡ್ಡಿ
ವಿಧಾನಸಭೆ:
ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ 49 ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆ ರದ್ದುಗೊಳಿಸುವಂತೆ ಸೂಚನೆ ನೀಡುವುದಾಗಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಸಂಸ್ಕೃತ ವಿವಿಯಲ್ಲಿ ಹೊಸ ನೇಮಕಾತಿ ಕುರಿತು ತಮ್ಮ ಇಲಾಖೆ ಅನುಮೋದನೆ ನೀಡಿಲ್ಲ. ಅಲ್ಲದೆ, ನೇಮಕಾತಿ ವಿಚಾರ ನನ್ನ ಗಮನಕ್ಕೂ ಬಂದಿಲ್ಲ. ಆದರೂ ನೇಮಕಾತಿಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳುತ್ತಿದ್ದಾರೆ. ಒಂದು ವೇಳೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದರೆ ಅದನ್ನು ರದ್ದುಗೊಳಿಸುವುದಾಗಿ ತಿಳಿಸಿದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ (ತಿದ್ದುಪಡಿ) ವಿಧೇಯಕದ ಮೇಲಿನ ಚರ್ಚೆ ವೇಳೆ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ, ಚಾಮರಾಜಪೇಟೆಯ ಸಂಸ್ಕೃತ ಪಾಠಶಾಲೆಯ ಮೂರು ಕೊಠಡಿಗಳಲ್ಲಿ ವಿವಿ ಕಚೇರಿ ಇದೆ. ಅಲ್ಲಿ ಈಗಲೇ ಇರುವ ಸಿಬ್ಬಂದಿಗೆ ಜಾಗವಿಲ್ಲ. ಈ ಮಧ್ಯೆ ಹಾಲಿ ಕುಲಪತಿ ಪದ್ಮಾ ಶೇಖರ್‌ ಅವರು ಮತ್ತೆ 49 ಹುದ್ದೆಗಳ ನೇಮಕಾತಿ ಮಾಡಿಸುತ್ತಿದ್ದಾರೆ. ಇದರಲ್ಲಿ ಭಾರೀ ಅವ್ಯವಹಾರ ನಡೆಯುತ್ತಿದ್ದು, ಒಂದು ಹುದ್ದೆಗೆ 10ರಿಂದ 18 ಲಕ್ಷ ರೂ. ನಿಗದಿಪಡಿಸಲಾಗಿದೆ ಎಂದರು.

Advertisement

ಯಾವ ಒಳ್ಳೆಯ ಉದ್ದೇಶ ಇಟ್ಟುಕೊಂಡು ಸಂಸ್ಕೃತ ವಿವಿ ಆರಂಭಿಸಲಾಗಿತ್ತೋ ಆ ಉದ್ದೇಶ ಈಡೇರಿಲ್ಲ. ಪದ್ಮಾ ಶೇಖರ್‌ ಅವರು ಕುಲಪತಿಗಳಾದ ಮೇಲೆ ಅದು ಸಂಸ್ಕೃತಿ ಇಲ್ಲದ ವಿವಿಯಾಗಿ ಪರಿವರ್ತನೆಯಾಗಿದೆ. ಸಂಸ್ಕೃತ ಸ್ಪರ್ಧೆಗಳಿಗೆ ವಿವಿಗಳಿಂದ ವಿದ್ಯಾರ್ಥಿಗಳನ್ನೇ ಕಳುಹಿಸುತ್ತಿಲ್ಲ. ಇದೀಗ ನೇಮಕಾತಿಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಬಸವರಾಜ ರಾಯರೆಡ್ಡಿ, ಅವ್ಯವಹಾರಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ನೇಮಕಾತಿ ನಡೆಯುತ್ತಿದ್ದರೆ ಅದನ್ನು ತಡೆಹಿಡಿಯುತ್ತೇನೆ. ಒಂದು ವೇಳೆ ಕುಲಪತಿಗಳು ಅವ್ಯವಹಾರ ನಡೆಸುತ್ತಿದ್ದಾರೆ ಎಂಬ ಬಗ್ಗೆ ದೂರು ಕೊಟ್ಟರೆ ಅದನ್ನು ರಾಜ್ಯಪಾಲರಿಗೆ ಕಳುಹಿಸಿ ತನಿಖೆಗೆ ಶಿಫಾರಸು ಮಾಡುತ್ತೇನೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next