Advertisement

ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ?

03:53 PM May 31, 2023 | Team Udayavani |

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾ ನಗರ ಪಾಲಿಕೆ ಆಸ್ತಿ ತೆರಿಗೆ ಹೆಚ್ಚಳ ಮಾಡುವುದಕ್ಕೆ ಸಿದ್ಧತೆ ಮಾಡಿಕೊಂಡಿದೆ. ಈ ಕುರಿತು ಶೀಘ್ರ ಆದೇಶ ಹೊರಬರುವ ಸಾಧ್ಯತೆ ಇದೆ.

Advertisement

ರಾಜಕೀಯ ಕಾರಣ ಸೇರಿದಂತೆ ಹಲವು ಕಾರಣಗಳಿಂದಾಗಿ ಕಳೆದ ಆರೇಳು ವರ್ಷಗಳಿಂದ ಪಾಲಿಕೆಯು ಆಸ್ತಿ ತೆರಿಗೆ ಹೆಚ್ಚಳ ಮಾಡದೆ ಹಾಗೆ ಉಳಿದಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಅಧಿಕಾರ ಗದ್ದುಗೆ ಹಿಡಿದಿದ್ದು, ಗ್ಯಾರಂಟಿ ಯೋಜನೆಗಳಿಗೆ ಹಣ ಸಂಗ್ರಹದ ದೃಷ್ಟಿಯಿಂದ ಆಸ್ತಿ ತೆರಿಗೆಯಲ್ಲಿ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ.

ಬೆಂಗಳೂರು ನಗರ ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್‌ ಅವರು ಸೋಮವಾರ ಬಿಬಿಎಂಪಿಯ ಹಿರಿಯ ಅಧಿಕಾರಿಗಳ ಜತೆಗೆ ಮೂರು ತಾಸು ಸಭೆ ನಡೆಸಿದ್ದರು. ಈ ಸಭೆಯಲ್ಲಿ ಪಾಲಿಕೆಯ ಯೋಜ ನೆಗಳು, ಕಾಮಗಾರಿ, ಕಂದಾಯ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದರು. ಜತೆಗೆ ಆಸ್ತಿ ತೆರಿಗೆ ಪಾವತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದರು. ಚುನಾವಣೆಗೂ ಮುಂಚೆ ಆಸ್ತಿ ತೆರಿಗೆಯ ಪರಿಷ್ಕರಣೆ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ಪಾಲಿಕೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ತಿ ತೆರಿಗೆ ಕುರಿತ 14 ಮಾನದಂಡಗಳು ಮತ್ತು ವಲಯವಾರು ಪೂರಕ ಮಾಹಿತಿ ಸಂಗ್ರಹಿಸಿದ್ದಾರೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ತೆರಿಗೆ ಸಂಗ್ರಹದ ವಿಧಾನ ಭಿನ್ನ ರೀತಿಯಲ್ಲಿದೆ. ಇತರ ರಾಜ್ಯಗಳಲ್ಲಿರುವ ತೆರಿಗೆ ಸಂಗ್ರಹ ವಿಧಾನ ಬಗ್ಗೆ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದಾರೆ.

ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ತೆರಿಗೆ ಹೆಚ್ಚಳ?: ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೋಮವಾರ ಬಿಬಿಎಂಪಿ‌ ಹಿರಿಯ ಅಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ ಆಸ್ತಿ ತೆರಿಗೆ ಕುರಿತಂತೆ ಪ್ರಸ್ತಾಪವಾಯಿತು. ಉಪ ಮುಖ್ಯಮಂತ್ರಿಗಳಿಗೆ ಪಾಲಿಕೆಯ ಆಸ್ತಿ ತೆರಿಗೆ ಸಂಗ್ರಹದ ಕುರಿತಂತೆ ಮಾಹಿತಿ ನೀಡಿದರು. ಇದೇ ವೇಳೆ ಡಿ.ಕೆ.ಶಿವಕುಮಾರ್‌ ಮುಂದಿನ ದಿನಗಳಲ್ಲಿ ಆಸ್ತಿ ತೆರಿಗೆ ಏರಿಸಬೇಕು ಎಂದು ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಆಸ್ತಿ ತೆರಿಗೆ ಸಂಗ್ರಹವನ್ನು ಈಗಾಗಲೇ ಸರ್ಕಾರ ಘೋಷಿಸಿರುವ 5 ಗ್ಯಾರಂಟಿ ಯೋಜನೆಗೆಗಳಿಗೆ ಬಳಸಿಕೊಳ್ಳುವ ಇರಾದೆಯನ್ನು ಸಭೆಯಲ್ಲಿ ಉಪ ಮುಖ್ಯಮಂತ್ರಿಗಳು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಶೇ.5ರಷ್ಟು ಏರಿಕೆ ಸಾಧ್ಯತೆ: ವಸತಿ ಕಟ್ಟಡಗಳಿಗೆ ಶೇ.10 ರಿಂದ 15ರಷ್ಟು ತೆರಿಗೆ ಏರಿಕೆ ಸಾಧ್ಯತೆ ಹಾಗೂ ವಾಣಿಜ್ಯ ಕಟ್ಟಡಗಳಿಗೆ ಶೇ.15 ರಿಂದ 20 ರಷ್ಟು ತೆರಿಗೆ ಏರಿಸುವ ನಿರೀಕ್ಷೆ ಇದೆ. ಪಾಲಿಕೆಯ ಕಾನೂನು ಹಾಗೂ ನಿಯಮಗಳ ಪ್ರಕಾರ ಪ್ರತಿ 3 ವರ್ಷಕ್ಕೆ ಒಮ್ಮೆ ಆಸ್ತಿ ತೆರಿಗೆಯನ್ನು ಶೇ.20 ರಿಂದ 25ರಷ್ಟು ಹೆಚ್ಚಿಸಲು ಅವಕಾಶವಿದೆ. ಆದರೆ, ಕಳೆದ ಹಲವು ವರ್ಷಗಳಿಂದ ಅಸ್ತಿ ತೆರಿಗೆ ಮೊತ್ತ ಹೆಚ್ಚಳವಾಗಿಲ್ಲ. ಆ ಹಿನ್ನೆಲೆಯಲ್ಲಿ ಬಿಬಿಎಂಪಿಯ ಆಸ್ತಿ ತೆರಿಗೆ ಗುರಿ 3500 – 4000 ಕೋಟಿ ರೂ. ಗೆ ಮಾತ್ರ ಸೀಮಿತವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಪ್ರಸಕ್ತ ಸಾಲಿನಲ್ಲಿ 4,100 ಕೋಟಿ ರೂ.ಆಸ್ತಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದೆ. ಇದಕ್ಕಾಗಿ ಪಾಲಿಕೆ ವಸತಿ ಕಟ್ಟಡಗಳಿಗೆ ಶೇ.10 ರಿಂದ 15 ಹಾಗೂ ವಾಣಿಜ್ಯ ಕಟ್ಟಡಗಳಿಗೆ ಶೇ.15ರಿಂದ 20 ರಷ್ಟು ತೆರಿಗೆ ಏರಿಕೆ ಮಾಡುವ ನಿರೀಕ್ಷೆಯಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡುವುದರಿಂದ ಪಾಲಿಕೆ ಬೊಕ್ಕಸ ಕೂಡ ಹಿರಿದಾಗಲಿದೆ. ಈ ತೆರಿಗೆಯನ್ನು ಸರ್ಕಾರ ಕೂಡ ಬಳಸಿಕೊಳ್ಳಬಹುದಾಗಿದೆ ಎನ್ನುತ್ತಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next