Advertisement
ಹೊಸ ವರ್ಷದ ಆರಂಭದಲ್ಲಿ ಹೊಸ ಮತ್ತು ಹಳೆ ಅಡಿಕೆ ಧಾರಣೆ ಮುಮ್ಮುಖ ಮತ್ತು ಹಿಮ್ಮುಖವಾಗಿ ಚಲಿಸಿ ಸ್ಥಿರವಾಗಿ ನಿಲ್ಲದೆ ಬೆಳೆಗಾರರಿಗೆ ನಿರಾಶೆ ಮೂಡಿಸಿತ್ತು. ಆದರೆ ಎರಡು ದಿನಗಳ ಧಾರಣೆ ಬೆಳೆಗಾರರಿಗೆ ಆಶಾಕಿರಣ ಮೂಡಿಸಿದೆ.
ಪುತ್ತೂರು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಬುಧವಾರ ಹೊಸ ಅಡಿಕೆ 230ರಿಂದ 235 ರೂ. ತನಕ ಖರೀದಿ ಯಾಗಿದೆ. ಸಿಂಗಲ್ ಚೋಲ್ 275ರಿಂದ 278 ರೂ. ತನಕ ಖರೀದಿಸಲಾಗಿದೆ. ಹೊಸ ಅಡಿಕೆ ಕೆ.ಜಿ.ಗೆ 5 ರೂ. ವೃದ್ಧಿಸಿಕೊಂಡರೆ ಸಿಂಗಲ್ ಚೋಲ್ ಕೂಡ 5 ರೂ.ಗಳಷ್ಟು ಏರಿದೆ. ಡಬ್ಬಲ್ ಚೋಲ್ 290ರಿಂದ 310 ರೂ.ಗಳಷ್ಟು ಧಾರಣೆ ಹೊಂದಿದ್ದು, ಸ್ಥಿರವಾಗಿದೆ. ಹೊಸ ಪಠೊರ 150 ರೂ.ಗಳಿಂದ 190 ರೂ., ಹಳೆ ಪಠೊರ 210 ರೂ., ಕರಿಗೋಟು 100 ರೂ.ಗಳಿಂದ 140 ರೂ. ಧಾರಣೆ ಹೊಂದಿದೆ. ಬಾಹ್ಯ ಮಾರುಕಟ್ಟೆಯಲ್ಲಿ ಧಾರಣೆ ಮತ್ತಷ್ಟು ಹೆಚ್ಚಿದೆ. ಹೊಸತು 235ರಿಂದ 238 ರೂ. ತನಕ ಖರೀದಿಯಾಗಿದೆ. ಸಿಂಗಲ್ ಚೋಲ್ 275ರಿಂದ 280 ರೂ. ತನಕ ಬೇಡಿಕೆ ಇದೆ. ಆದರೆ ಡಬ್ಬಲ್ ಚೋಲ್‌ಗೆ ನಿರೀಕ್ಷಿತ ಬೇಡಿಕೆ ಸಿಕ್ಕಿಲ್ಲ ಅನ್ನುತ್ತಾರೆ ಬೆಳೆಗಾರರು.
Related Articles
ಪ್ರತಿ ವರ್ಷದ ಧಾರಣೆ ಅಂಕಿ ಅಂಶದಂತೆ ಎಪ್ರಿಲ್‌ನಲ್ಲಿ ಅಡಿಕೆ ಧಾರಣೆ ಏರುತ್ತದೆ. ಇದು ಮಾರುಕಟ್ಟೆಯಲ್ಲಿ ನಡೆಯುವ ಒಂದು ತಂತ್ರಗಾರಿಕೆ. ಇದಕ್ಕೆ ವಿರುದ್ಧವಾಗಿ ಧಾರಣೆ ಇಳಿಸುವ ತಂತ್ರ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ನಡೆಯುತ್ತದೆ. ಮಾರ್ಚ್‌ನಲ್ಲಿ ಬ್ಯಾಂಕ್ ಸಾಲಗಳನ್ನು ಪಾವತಿಸಬೇಕಿರುವ ಹೆಚ್ಚಿನ ಬೆಳೆಗಾರರು ಸಿಕ್ಕಿದ ಧಾರಣೆಗೆ ಅಡಿಕೆ ಮಾರಾಟ ಮಾಡಲು ಮುಂದಾಗುತ್ತಾರೆ. ಈ ವೇಳೆ ಧಾರಣೆ ಇಳಿಸಿ, ಅಡಿಕೆ ಖರೀದಿಸಿ ಅನಂತರ ಹೆಚ್ಚು ಬೆಲೆಗೆ ಮಾರಾಟ ಮಾಡಿ ಲಾಭ ಮಾಡಿಕೊಳ್ಳುವ ತಂತ್ರ ಇದು. ಫೆಬ್ರವರಿ, ಮಾರ್ಚ್‌ನಲ್ಲಿಯೂ ಮಾರುಕಟ್ಟೆಗೆ ಬಾರದ ಅಡಿಕೆಯನ್ನು ಅನಂತರ ದರ ಏರಿಸಿ ಖರೀದಿಸಲಾಗುತ್ತದೆ. ಆಗ ಶಾಲಾ ಶುಲ್ಕ ಪಾವತಿ ಮೊದಲಾದ ಖರ್ಚುಗಳು ಬೆಳೆಗಾರರಿಗೆ ಇರುವುದರಿಂದ ಧಾರಣೆ ಏರಿಕೆಯಿಂದ ಸ್ವಲ್ಪ ನಷ್ಟ ಅನುಭವಿಸಿದರೂ ಅಡಿಕೆಯನ್ನು ಮಾರುಕಟ್ಟೆಯತ್ತ ಆಕರ್ಷಿಸುವ ತಂತ್ರವನ್ನು ವ್ಯಾಪಾರಸ್ಥರು ಹೂಡುತ್ತಾರೆ.
Advertisement