ಬೆಂಗಳೂರು: ನಗರದಲ್ಲಿ ಕೋವಿಡ್ 19 ಸೋಂಕಿನ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆನ್‌ಲೈನ್ ಮೂಲಕ ದೂರು ನೀಡುವವರ ಸಂಖ್ಯೆ ಹೆಚ್ಚಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ, ಚರಂಡಿ ನೀರು, ಬೀದಿ ದೀಪ ಬದಲಾಯಿಸುವುದು ಹಾಗೂ ರಸ್ತೆ ಗುಂಡಿ ಸೇರಿದಂತೆ ಹಲವು ವಿಚಾರಗಳಿಗೆ ನಿತ್ಯ ದೂರುಗಳು ದಾಖಲಾಗುತ್ತವೆ. ವಿಶೇಷವೆಂದರೆ ಬಿಬಿಎಂಪಿ ಸಹಾಯ ಆ್ಯಪ್ 2.0 ಮೂಲಕ ದೂರು ನೀಡುವುದು ಹೆಚ್ಚಾಗಿದೆ. ಕಳೆದ ಎರಡು ತಿಂಗಳಲ್ಲಿ ಸಹಾಯ 2.0ಗೆ 20,591 ದೂರುಗಳು ದಾಖಲಾಗಿವೆ. ಇದರಲ್ಲಿ 17,994 ದೂರುಗಳಿಗೆ ಪರಿಹಾರ ಕಂಡುಕೊಳ್ಳಲಾಗಿದ್ದು, 2,597 ದೂರುಗಳು ಇನ್ನು ಬಾಕಿ ಇವೆ.
ಲಾಕ್‌ಡೌನ್ ಅವಧಿಯಲ್ಲೂ ಪರಿಹಾರ: ಸಹಾಯ 2.0 ಮೂಲಕ ಮೇನಲ್ಲಿ ಅತಿ ಹೆಚ್ಚು 11,916 ದೂರು ದಾಖಲಾಗಿವೆ. ಅದೇ ರೀತಿ, ಜೂನ್‌ನಲ್ಲಿ 8,675 ದೂರುಗಳು ದಾಖಲಾಗಿವೆ. ಇದುವರೆಗೆ ಸಕಾಲದ ಖಾತಾ ವಿಭಾಗಕ್ಕೆ ಸಂಬಂಧಿಸಿದಂತೆ ಒಟ್ಟು 3,570 ಅರ್ಜಿಗಳು ಸಲ್ಲಿಕೆಯಾಗಿದ್ದು, 3,438 ಅರ್ಜಿಗಳು ವಿಲೇವಾರಿಯಾಗಿವೆ. ಇನ್ನು 132 ಅರ್ಜಿಗಳು ಪ್ರಗತಿಯಲ್ಲಿವೆ. ಆರೋಗ್ಯ ವಿಭಾಗಕ್ಕೆ ಸಂಬಂಧಿಸಿ 228 ಅರ್ಜಿಗಳು ಬಾಕಿ ಇವೆ. ಅತಿ ಹೆಚ್ಚು ದೂರುಗಳು ಕಸ ವಿಲೇವಾರಿಗೆ ಸಂಬಂಧಿಸಿದ್ದಾಗಿದ್ದು, 10,122 ದೂರುಗಳು ದಾಖಲಾಗಿವೆ.
ಇವುಗಳಲ್ಲಿ 8,975 ದೂರುಗಳನ್ನು ಪರಿಹರಿಸಲಾಗಿದೆ. ಇದಕ್ಕೂ ಹೆಚ್ಚು ದೂರುಗಳು ನಗರದ ಬೀದಿ ದೀಪಗಳು, ವಿದ್ಯುತ್ ಕಂಬ ಹಾಗೂ ವಿದ್ಯುತ್ ಪೈಪ್‌ಗ್ಳಿಗೆ (ಎಲೆಕ್ಟ್ರಿಕಲ್ಸ್‌ಗೆ) ಸಂಬಂಧಿಸಿದ್ದಾಗಿವೆ. ಈ ವಿಭಾಗದಲ್ಲಿ 12,130 ದೂರುಗಳು ದಾಖಲಾಗಿದ್ದು, 9,418 ದೂರುಗಳನ್ನು ಪರಿಹರಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಕೊವೀಡ್-19ಗೆ ಸಂಬಂಧಿಸಿದಂತೆ 444 ದೂರುಗಳು ಸಹಾಯ 2.0ಗೆ ಬಂದಿವೆ. ಆದರೆ, ಇವುಗಳಲ್ಲಿ ಕೇವಲ 8 ದೂರುಗಳನ್ನಷ್ಟೇ ಪಾಲಿಕೆ ಪರಿಹರಿಸಿದ್ದು, ಇನ್ನೂ 436 ದೂರುಗಳು ಬಾಕಿ ಇವೆ.
ದೂರುಗಳಿಗೆ ಸಮರ್ಪಕ ಸ್ಪಂದನೆ: ಸೋಂಕಿಗೆ ಸಂಬಂಧಿಸಿದ ದೂರುಗಳು ಹೊಸ ಸೇರ್ಪಡೆಯಾಗಿದೆ. ಸೋಂಕು ದೃಢಪಟ್ಟವರ ಅಕ್ಕಪಕ್ಕದ ಮನೆಯವರು ಆತಂಕದಿಂದ ದೂರು ನೀಡುತ್ತಿದ್ದಾರೆ. ಇದರಲ್ಲಿ ಸಾಧ್ಯವಾದಷ್ಟು ದೂರುಗಳನ್ನು ಪರಿಹರಿಸಲಾಗುತ್ತಿದೆ. ಆರೋಗ್ಯ ವಿಭಾಗದ ಅಧಿಕಾರಿಗಳಿಗೆ ಈ ದೂರುಗಳ ಬಗ್ಗೆ ಮಾಹಿತಿ ರವಾನಿಸಲಾಗುತ್ತಿದೆ. ಸಾರ್ವಜನಿಕರು ಸಾಧ್ಯವಾದಷ್ಟು ಬಿಬಿಎಂಪಿ ಸಹಾಯ 2.0ಗೆ ದೂರು ನೀಡಿದರೆ ಉತ್ತಮ. ಈ ದೂರುಗಳನ್ನು ಸಾಧ್ಯವಾದಷ್ಟು ಬೇಗ ಪರಿಹರಿಸಲಾಗುವುದು ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಆಡಳಿತ) ಅನ್ಬುಕುಮಾರ್ ಹೇಳಿದರು.