ಚಿಂಚೋಳಿ: ತಾಲೂಕಿನಲ್ಲಿ ಕಳೆದ ಮೂರು ದಿವಸದಿಂದ ಎಡೆಬಿಡದೇ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಜನ ಜೀವನ ಅಸ್ತವ್ಯಸ್ತವಾಗಿದೆ.
ಕೆಳದಂಡೆ ಮುಲ್ಲಾಮಾರಿ ಜಲಾಶಯ ಮತ್ತು ಚಂದ್ರಂಪಳ್ಳಿ ಜಲಾಶಯದಲ್ಲಿ ಒಳ ಹರಿವು ಹೆಚ್ಚಾಗುತ್ತಿದ್ದು, ಮುಲ್ಲಾಮಾರಿ ನದಿಗೆ ಹೆಚ್ಚುವರಿ ಹರಿ ಬಿಡಲಾಗುತ್ತಿದೆ. ಕೆಳದಂಡೆ ಮುಲ್ಲಾಮಾರಿ ಜಲಾಶಯ ಅಚ್ಚುಕಟ್ಟು ಪ್ರದೇಶದ ಚೆನ್ನೂರ, ಗಡಿಲಿಂಗದಳ್ಳಿ, ಐನಾಪುರ, ಕೊಟಗಾ, ಭೂಯ್ನಾರ, ಚೆಂಗಟಾ ಗ್ರಾಮಗಳ ಸುತ್ತಮುತ್ತಲಿನ ತಾಂಡಾಗಳಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಜಲಾಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಒಳ ಹರಿವು 359ಕ್ಯೂಸೆಕ್ ಇದ್ದು, ಹೊರ ಹರಿವು 900 ಕ್ಯೂಸೆಕ್ ಇದೆ.
ಮಂಗಳವಾರ ದಿನವಿಡಿ ಮಳೆ ಆಗುತ್ತಿರುವುದರಿಂದ ಮಳೆ ನೀರಿನ ಸಂಗ್ರಹ ನೋಡಿ ಮುಲ್ಲಾಮಾರಿ ನದಿಗೆ ರಾತ್ರಿ 9ಗಂಟೆ ನಂತರ ನೀರು ಹರಿ ಬಿಡಲಾಗುವುದು ಎಂದು ಯೋಜನೆ ಎಇಇ ಹಣಮಂತರಾವ್ ಪೂಜಾರಿ ತಿಳಿಸಿದ್ದಾರೆ. ಚಂದ್ರಂಪಳ್ಳಿ ಜಲಾಶಯ ಅಚ್ಚುಕಟ್ಟು ಪ್ರದೇಶದ ಕುಂಚಾವರಂ ವನ್ಯಜೀವಿ ಧಾಮದ ಸಂಗಾಪುರ, ಗೊಟಗೇರಪಳ್ಳಿ, ಕುಸರಂಪಳ್ಳಿ, ಗೌಸಾಬಾದ್, ವೆಂಕಟಾಪುರ, ಮಾಣಿಕಪುರ ಗ್ರಾಮಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಚಂದ್ರಂಪಳ್ಳಿ ಜಲಾಶಯದಲ್ಲಿ ಒಟ್ಟು 1.208 ಟಿಎಂಸಿ ಅಡಿ ಪೈಕಿ 0.662 ಟಿಎಂಸಿ ಅಡಿ (ಶೇ.54.80) ನೀರು ಸಂಗ್ರಹವಾಗಿದೆ. ಶೇ. 80ರಷ್ಟು ನೀರು ಸಂಗ್ರಹವಾದರೆ ಗೇಟಿನ ಮೂಲಕ ಹರಿ ಬಿಡಲಾಗುವುದು ಎಂದು ಎಇಇ ವೈಜನಾಥ ಅಲ್ಲೂರೆ ತಿಳಿಸಿದ್ದಾರೆ.
ಕುಂಚಾವರಂ ಗಡಿಪ್ರದೇಶದ ಧರ್ಮಸಾಗರ ತಾಂಡಾದ ಬಳಿ ನಾಲಾ ತುಂಬಿ ಹರಿಯುತ್ತಿರುವುದರಿಂದ ಕುರಿಗಾಹಿ ತುಂಬಿ ಹರಿಯುವ ನಾಲಾ ನೀರು ನೋಡಿ ಭಯಗೊಂಡು ದಡದಲ್ಲಿಯೇ ಕುಳಿತಿದ್ದಾಗ ತಾಂಡಾದ ಜನರು 50 ಕುರಿಗಳು ಮತ್ತು ಇಬ್ಬರು ಕುರಿಗಾಹಿಗಳ ಕೈ ಹಿಡಿದು ದಾಟಿಸಿದ್ದಾರೆ ಎಂದು ತಾಂಡಾದ ಸಂತೋಷ ಚವ್ಹಾಣ ತಿಳಿಸಿದ್ದಾರೆ. ಗುಡುಗು ಮಿಂಚಿನ ಆರ್ಭಟದಿಂದ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ತಾಲೂಕಿನ ಸಣ್ಣ ನೀರಾವರಿ ಕೆರೆಗಳಿಗೆ ನೀರು ಹರಿದು ಬರುತ್ತಿದೆ.
ಒಟ್ಟು 17 ಕೆರೆಗಳಲ್ಲಿ ಎರಡರಿಂದ ಮೂರು ಅಡಿ ನೀರು ಹರಿದು ಬರುತ್ತಿದೆ. ಸಾಲೇಬೀರನಳ್ಳಿ, ತುಮಕುಂಟಾ, ಹಸರಗುಂಡಗಿ, ಕೋಡ್ಲಿ, ಐನಾಪುರ, ಮುಕರಂಬಾ, ಹುಲಸಗೂಡ, ಚಂದನಕೇರಾ, ಧರ್ಮಸಾಗರ, ಅಂತಾವರಂ ಕೆರೆಗಳಿಗೆ ಮಳೆ ನೀರು ಹರಿದು ಬಂದಿದೆ.
ಕಳೆದ ವರ್ಷ ಹೆಚ್ಚಿನ ಮಳೆ ಆಗಿದ್ದರಿಂದ ನಾಗಾಇದಲಾಯಿ, ಹೂಡದಳ್ಳಿ ಕೆರೆಗಳು ಸಂಪೂರ್ಣ ಒಡೆದಿವೆ. ದೊಟಿಕೋಳ ಕೆರೆಗೆ ಹಾನಿ ಆಗಿರುವುದರಿಂದ ಕೆರೆಯಲ್ಲಿ ನೀರಿನ ಸಂಗ್ರಹಣೆ ಮಾಡುತ್ತಿಲ್ಲ ಎಂದು ಎಇಇ ಶಿವಶರಣಪ್ಪ ಕೇಶ್ವಾರ ತಿಳಿಸಿದ್ದಾರೆ. ತಾಲೂಕಿನ ಸುಲೇಪೇಟ, ಕೋಡ್ಲಿ, ಐನಾಪುರ, ಚಿಮ್ಮನಚೋಡ, ನಿಡಗುಂದಾ, ಕುಂಚಾವರಂ, ಮಿರಿಯಾಣ, ಮೋಘಾ, ಕೊಡ್ಲಿ, ಚಂದನಕೇರಾ, ಚಿಂಚೋಳಿಯಲ್ಲಿ ಮಂಗಳವಾರ ದಿನವಿಡಿ ಮಳೆ ಆಗಿದ್ದರಿಂದ ಸಣ್ಣ ನಾಲಾಗಳು ತುಂಬಿ ಹರಿಯುತ್ತಿವೆ.