Advertisement

Karnataka: ಹಿರಿಯ ನಾಗರಿಕರ ಮಾಸಾಶನ ಹೆಚ್ಚಳ: ಸಿಎಂ ಭರವಸೆ

09:17 PM Oct 01, 2023 | Team Udayavani |

ಬೆಂಗಳೂರು: ರಾಜ್ಯದ ಹಿರಿಯ ನಾಗರಿಕರಿಗೆ ನೀಡುತ್ತಿರುವ ಮಾಸಾಶನವನ್ನು ಮುಂದಿನ ಬಜೆಟ್‌ನಲ್ಲಿ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ರವಿವಾರ ಹಮ್ಮಿಕೊಂಡಿದ್ದ “ವಿಶ್ವ ಹಿರಿಯ ನಾಗರಿಕರ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿವಿಧ ಕ್ಷೇತ್ರಗಳ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯರನ್ನು ಸಮ್ಮಾನಿಸಿ ಮಾತನಾಡಿದ ಅವರು, ಪ್ರಸ್ತುತ ನೀಡುತ್ತಿರುವ 1,200 ರೂ. ಮಾಸಾಶನವನ್ನು ಹೆಚ್ಚಿಸುವುದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ, ಮುಂದಿನ ಬಜೆಟ್‌ನಲ್ಲಿ ಘೋಷಿಸಲಾಗುವುದು ಎಂದು ತಿಳಿಸಿದರು.

Advertisement

ಇಂದಿನ ಮಕ್ಕಳು ಉದ್ಯೋಗ ಅರಸಿ, ಹೆತ್ತವರನ್ನು ಬಿಟ್ಟು ದೂರದ ಸ್ಥಳಗಳಿಗೆ ತೆರಳುತ್ತಾರೆ. ಇದರಿಂದಾಗಿ ಪೋಷಕರ ಆರೈಕೆಗಾಗಿ ಇರುವ ವೃದ್ಧಾಶ್ರಮಗಳು ಇನ್ನಷ್ಟು ಸಕ್ರಿಯವಾಗಿ ಕೆಲಸ ಮಾಡುವ ಕಡೆ ಗಮನ ಕೊಡಲಾಗುತ್ತದೆ. ಪ್ರತಿಯೊಂದು ವೃದ್ಧಾಶ್ರಮದಲ್ಲಿ ಸಾಂಸ್ಕೃತಿಕ ವೇದಿಕೆಯನ್ನು ರಚಿಸಲಾಗುವುದು. ಅಗತ್ಯವಿದ್ದಲ್ಲಿ ಹೆಚ್ಚಿನ ವೃದ್ಧಾಶ್ರಮಗಳನ್ನು ಆರಂಭಿಸಲಾಗುವುದು ಎಂದು ಹೇಳಿದರು.

ಹಿರಿಯರನ್ನು ಗೌರವದಿಂದ ನಡೆಸಿಕೊಳ್ಳುವುದು ಮತ್ತು ಅವರ ಬದುಕಿನ ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳುವುದೇ ಹಿರಿಯರಿಗೆ ನಾವು ನೀಡುವ ಗೌರವ. ನಾವೆಲ್ಲ ಎಷ್ಟು ವರ್ಷ ಬದುಕುತ್ತೇವೆ ಎನ್ನುವುದಕ್ಕಿಂತ ಬದುಕಿದಷ್ಟು ದಿನ ಸಾರ್ಥಕ ಜೀವನ ನಡೆಸುವುದು ಮುಖ್ಯ. ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು. ಆಗ ಇಡೀ ಜಗತ್ತನ್ನು, ಮನುಷ್ಯತ್ವವನ್ನು ಹಾಗೂ ಸಂವಿಧಾನವನ್ನು ಅರ್ಥೈಸಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ಮಾತನಾಡಿ, ರಾಜ್ಯದಲ್ಲಿ ಸುಮಾರು 58 ಲಕ್ಷದಷ್ಟು ಹಿರಿಯ ನಾಗರಿಕರಿದ್ದು, ಅವರಲ್ಲಿ 49 ಲಕ್ಷದಷ್ಟು ಹಿರಿಯರು ಸಂಧ್ಯಾ ಸುರಕ್ಷಾ ಮಾಸಾಶನ ಪಡೆಯುತ್ತಿದ್ದಾರೆ. ಹಿರಿಯ ನಾಗರಿಕರ ಮಾಸಾಶನವನ್ನು 2,000 ರೂ.ಗೆ ಹೆಚ್ಚಿಸಬೇಕೆಂಬ ಮನವಿಯನ್ನು ಮುಖ್ಯಮಂತ್ರಿಗಳ ಮುಂದಿಟ್ಟರು.
ಇಲಾಖೆ ಕಾರ್ಯದರ್ಶಿ ಡಾ| ಜಿ.ಸಿ.ಪ್ರಕಾಶ್‌, ನಿರ್ದೇಶಕ ಎನ್‌. ಸಿದ್ದೇಶ್ವರ ಸಹಿತ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಶಸ್ತಿ ಪುರಸ್ಕೃತರು
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಬಜ್ಜ ಹಾಗೂ ಶತಾಯುಷಿ ಶಾರದಮ್ಮ ಅವರನ್ನು ವಿಶೇಷವಾಗಿ ಸಮ್ಮಾನಿಸಿ ಗೌರವಿಸಲಾಯಿತು. ಹಿರಿಯ ನ್ಯಾಯವಾದಿ ಪಿ.ಎಸ್‌. ರಾಜಗೋಪಾಲ್‌ (ಕಾನೂನು ಕ್ಷೇತ್ರ), ಅಂತಾರಾಷ್ಟ್ರೀಯ ಯೋಗಪಟು ಡಿ.ನಾಗರಾಜ್‌ (ಕ್ರೀಡೆ), ಸಂಬಾಳ/ತಬಲಾ ವಾದನ ಹಣಮಂತ ಗೋವಿಂದಪ್ಪ ಹೂಗಾರ (ಕಲಾ ಕ್ಷೇತ್ರ), ನಿವೃತ್ತ ಕುಲಪತಿ ಆರ್‌.ಆರ್‌. ಹಂಚಿನಾಳ ( ಶಿಕ್ಷಣ), ವೀರಭದ್ರಪ್ಪ ಶರಣಪ್ಪ ಉಪ್ಪಿನ (ಸಮಾಜ ಸೇವೆ), ನಿವೃತ್ತ ಶಿಕ್ಷಕ ಎಚ್‌.ಎಸ್‌. ಗಿರಿರಾಜ್‌ (ಸಾಹಿತ್ಯ ಕ್ಷೇತ್ರ) ಮತ್ತು ಸಿಂಧನೂರಿನ ಶ್ರೀಮಠ ಸೇವಾ ಟ್ರಸ್ಟ್‌ಗೆ ಹಿರಿಯ ನಾಗರಿಕರ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯು ಒಂದು ಲಕ್ಷ ರೂ., ನೆನಪಿನ ಕಾಣಿಕೆ ಹಾಗೂ ಪ್ರಮಾಣಪತ್ರವನ್ನು ಒಳಗೊಂಡಿದೆ.

Advertisement

ನಮ್ಮದು ಜಾತ್ಯತೀತ ಸರಕಾರ: ಸಿದ್ದರಾಮಯ್ಯ
ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಬೇಕೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮ್ಮದು ಜಾತ್ಯತೀತ ಸರಕಾರ. ಅನ್ನಭಾಗ್ಯ, ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮೀ ಯೋಜನೆಗಳನ್ನು ಯಾವುದೇ ನಿರ್ದಿಷ್ಟ ಜಾತಿಗಳಿಗೆ ಕೊಟ್ಟಿಲ್ಲ. ನಮ್ಮ ಸರಕಾರ ಎಲ್ಲ ಜಾತಿಗಳನ್ನು ಸಮಾನವಾಗಿ ಕಾಣುತ್ತದೆ ಎಂದು ಹೇಳಿದರು. ಆರು ತಿಂಗಳಲ್ಲಿ ಸರಕಾರ ಬೀಳಲಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಹತಾಶರಾಗಿದ್ದಾರೆ. ಸಮ್ಮಿಶ್ರ ಸರಕಾರ ಬರುತ್ತದೆ. ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಅವರು ಭಾವಿಸಿದ್ದರು. ಈಗ ಭ್ರಮನಿರಸನಗೊಂಡು ಈ ರೀತಿ ಹೇಳುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next