ಬೆಂಗಳೂರು: ಐಟಿ-ಬಿಟಿ ಹಬ್, ಉದ್ಯಾನನಗರಿ ಎಂದು ಗುರುತಿಸಿಕೊಂಡಿರುವ ರಾಜ್ಯ ರಾಜಧಾನಿಯು ಗಾಂಜಾ ತಾಣವಾಗುತ್ತಿದ್ದು ಕಳೆದ ಆರು ವರ್ಷಗಳಲ್ಲಿ ಸಿಲಿಕಾನ್ ಸಿಟಿಯೊಂದರಲ್ಲೇ 12,346 ಕೆ.ಜಿ. ಗಾಂಜಾ ಜಪ್ತಿ ಮಾಡಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ ವರ್ಷದಿಂದ ವರ್ಷಕ್ಕೆ ಗಾಂಜಾ ಮಾರಾಟಗಾರರ ಸಂಖ್ಯೆ 4 ಪಟ್ಟು ಹೆಚ್ಚುತ್ತಿದೆ. 2017ರಲ್ಲಿ ಪೊಲೀಸರು 554.611 ಕೆ.ಜಿ. ಗಾಂಜಾ ಜಪ್ತಿ ಮಾಡಿದ್ದರು. 2022ರಲ್ಲಿ ಕೇವಲ 8 ತಿಂಗಳಲ್ಲೇ ಇದರ ಪ್ರಮಾಣ 2,509.767ಕ್ಕೆ ಏರಿಕೆಯಾಗಿದೆ. 2022ರಲ್ಲಿ ಆಗಸ್ಟ್‌ವರೆಗೆ ಗಾಂಜಾ ಹೊರತುಪಡಿಸಿ ಉಳಿದ ಡ್ರಗ್ಸ್‌ಗಳಾದ ಬ್ರೌನ್‌ಶುಗರ್ 2.491ಕೆ.ಜಿ., ಆಫೀಮು 8.167 ಕೆ.ಜಿ., ಹೆರಾಯಿನ್ 0.186 ಕೆ.ಜಿ., ಚರಸ್ 3.634 ಕೆ.ಜಿ., ಕೊಕೇನ್ 2.39 ಕೆ.ಜಿ., ಎಂಡಿಎಂಎ ಕ್ಯಾಪೊÕಲ್ಸ್ ಹಾಗೂ ಪೌಡರ್‌ಗಳು 35.487 ಕೆ.ಜಿ., ಆಂಫೆಟಮೈನ್ 70.3 ಕೆ.ಜಿ., ಯಾಬಾ ರೆಸ್ಟೈಲ್, ಅನಿಕ್ಸಿಟ್ ನೈಟ್ರೋಜನ್ 2447 ಟ್ಯಾಬ್ಲೆಟ್‌ಗಳು, 847 ಎಲ್ ಎಸ್‌ಡಿ ಸ್ಟ್ರಿಪ್ಸ್‌ಗಳನ್ನು ಜಪ್ತಿ ಮಾಡಲಾಗಿದೆ.
ಜಪ್ತಿ ಮಾಡಿರುವ ಗಾಂಜಾವನ್ನು ಕೆಲ ಪ್ರಕ್ರೀಯೆಗಳ ಮೂಲಕ ನಗರದ ಹೊರ ವಲಯಗಳಲ್ಲಿ ಸುಟ್ಟು ನಾಶಪಡಿಸಲಾಗಿದೆ. ಆಂಧ್ರಪ್ರದೇಶ, ತಮಿಳುನಾಡು, ಒಡಿಶಾದ ಗುಡ್ಡಗಾಡು ಪ್ರದೇಶಗಳಿಂದ ರೈಲು, ಗೂಡ್ಸ್ ವಾಹನಗಳಲ್ಲಿ ಹೇರಳವಾಗಿ ಬೆಂಗಳೂರಿಗೆ ಗಾಂಜಾ ಪೂರೈಕೆಯಾಗುತ್ತಿದೆ. ಹೊರ ರಾಜ್ಯಗಳಲ್ಲಿ ಕೆ.ಜಿ.ಗೆ 15 ಸಾವಿರ ರೂ. ಕೊಟ್ಟು ಗಾಂಜಾ ಖರೀದಿಸುವ ಪೆಡ್ಲರ್‌ಗಳು, ನಗರದಲ್ಲಿ 30 ರಿಂದ 50 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದಾರೆ.
ನಗರದಲ್ಲಿರುವ ಕಾಲೇಜು ವಿದ್ಯಾರ್ಥಿಗಳು, ಟೆಕ್ಕಿಗಳು, ಉದ್ಯಮಿಗಳು ಹಾಗೂ ಉತ್ತರ ಭಾರತ ಮೂಲದ ಮಹಿಳೆಯರಿಂದಲೇ ಗಾಂಜಾಕ್ಕೆ ಹೆಚ್ಚಿನ ಬೇಡಿಕೆ ಇದೆ ಎಂದು ಸಿಸಿಬಿ ಪೊಲೀಸರಿಂದ ಇತ್ತೀಚೆಗೆ ಬಂಧನಕ್ಕೊಳಗಾಗಿದ್ದ ಪೆಡ್ಲರ್ ಗಳು ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಗರದಲ್ಲಿ ಹೆಚ್ಚುತ್ತಿರುವ ಗಾಂಜಾ ಮಾರಾಟ ಹಾಗೂ ಸೇವನೆ ತಡೆಗಟ್ಟುವ ನಿಟ್ಟಿನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಹೆಚ್ಚು ಎನ್‌ಡಿಪಿಎಸ್ ಪ್ರಕರಣ ದಾಖಲಿಸುವಂತೆ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಪ್ರತಿ ಠಾಣೆಯ ಪೊಲೀಸರಿಗೆ ಇತ್ತೀಚೆಗೆ ಟಾರ್ಗೆಟ್ ನೀಡಿದ್ದಾರೆ.
ಇದರ ಬೆನಲ್ಲೇ ನಗರ ಪೊಲೀಸರು ಗಾಂಜಾ ಪೆಡ್ಲರ್‌ಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಸದ್ಯದಲ್ಲೇ ನಗರಾದ್ಯಂತ ಗಾಂಜಾ ಮಾರಾಟಗಾರರ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಇತ್ತೀಚೆಗೆ ಗಾಂಜಾ ವಶ ಪ್ರಕರಣ :
- ಸೆ.27ರಂದು ಆಂಧ್ರದ ಸಿಂಪತಲ್ಲಿ ಹಾಗೂ ಅರಕ್ಕು ಅರಣ್ಯ ಪ್ರದೇಶದಲ್ಲಿ ಗಾಂಜಾ ಬೆಳೆದು ನಗರಕ್ಕೆ ಪೂರೈಸುತ್ತಿದ್ದ ಗ್ಯಾಂಗ್‌ನ ನಾಲ್ವರು ಮಹಿಳಾ ಸದಸ್ಯರ ಬಂಧನ. 7.80 ಕೋಟಿ ರೂ. ಮೌಲ್ಯದ 10 ಕೆ.ಜಿ. ಗಾಂಜಾ, 8 ಕೆ.ಜಿ. ಹ್ಯಾಶಿಶ್ ಆಯಿಲ್ ಜಪ್ತಿ.
- ಸೆ.29ರಂದು ವೈಟ್ ಫೀಲ್ಡ್‌ನಲ್ಲಿ ವಿದ್ಯಾರ್ಥಿ ಗಳಿಗೆ ನಿರಂತರವಾಗಿ ಗಾಂಜಾ ಮಾರಾಟ ಮಾಡು ತ್ತಿದ್ದ ಆರೋಪಿ ಸೆರೆ, 5 ಕೆ.ಜಿ. ಗಾಂಜಾ ಜಪ್ತಿ.
- ಸೆ.26ರಂದು ಆರ್‌ಎಂಸಿಯಾರ್ಡ್ ಪೊಲೀಸರಿಂದ ಇಬ್ಬರ ಬಂಧಿಸಿ 23 ಕೆ.ಜಿ. ಗಾಂಜಾ ಜಪ್ತಿ.
- ಆಂಧ್ರದ ವಿಶಾಖಪಟ್ಟಣದ ಕಾಕಿನಾಡದಿಂದ ನಿರಂತರವಾಗಿ ನಗರಕ್ಕೆ ಗಾಂಜಾ ಪೂರೈಸುತ್ತಿದ್ದ ಐವರು ಉತ್ತರ ವಿಭಾಗದ ಪೊಲೀಸರ ಬಲೆಗೆ, 53 ಕೆ.ಜಿ. ಗಾಂಜಾ ವಶ.
ಬೆಂಗಳೂರಿನ ಗಾಂಜಾ ಪೆಡ್ಲರ್‌ಗಳ ಬಗ್ಗೆ ಪೊಲೀಸರು ನಿಗಾ ಇಟ್ಟಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಗಾಂಜಾ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದರೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬಹುದು. – ಸುಬ್ರಮಣ್ಯೇಶ್ವರ ರಾವ್, ಹೆಚ್ಚುವರಿ ಪೊಲೀಸ್ ಆಯುಕ್ತ
–ಅವಿನಾಶ್ ಮೂಡಂಬಿಕಾನ