Advertisement

ಕೆಆರ್‌ಎಸ್‌ ಜಲಾಶಯದ ಒಳಹರಿವು ಹೆಚ್ಚಳ 

01:47 PM Jul 24, 2023 | Team Udayavani |

ಶ್ರೀರಂಗಪಟ್ಟಣ: ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಅಬ್ಬರದಿಂದಾಗಿ ಹಾರಂಗಿ ಜಲಾಶಯ ಭರ್ತಿಯಾದ ಹಿನ್ನೆಲೆ ಹೆಚ್ಚಿನ ನೀರು, ಕೆಆರ್‌ಎಸ್‌ ಜಲಾಶಯಕ್ಕೆ ಹರಿದು ಬರುತ್ತಿದೆ. ಕೆಆರ್‌ಎಸ್‌ ಜಲಾಶಯಕ್ಕೆ 10 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರು ಹರಿದು ಬರುತ್ತಿದೆ. ಇದರಿಂದ ಕಾವೇರಿ ನೀರು ಅವಲಂಬಿತ ಪ್ರದೇಶದ ರೈತರ ಮೊಗದಲ್ಲಿ ಮಂದಹಾಸ ಬೀರಿದ್ದರೆ, ಅತ್ತ ತಮಿಳುನಾಡಿಗೂ ನೀರು ಹರಿಸಲಾಗುತ್ತಿದೆ.

Advertisement

ಜುಲೈ ತಿಂಗಳು ಮುಗಿಯುತ್ತಾ ಬಂದರೂ, ಮುಂಗಾರು ಮಳೆ ಆಗದೆ ಜಲಾಶಯಕ್ಕೆ ನೀರು ಬರದೆ ಈ ಬಾರಿ ಭರ್ತಿ ಆಗುವುದಿಲ್ಲವೇನೋ ಎಂಬ ಆತಂಕ ರೈತರಲ್ಲಿ ಮನೆ ಮಾಡಿತ್ತು. ಇದೀಗ ಕೆಆರ್‌ಎಸ್‌ ಜಲಾಶಯಕ್ಕೆ 10 ಸಾವಿರಕ್ಕೂ ಹೆಚ್ಚು ಕ್ಯೂಸೆಕ್‌ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ತುಸು ನೆಮ್ಮದಿ ತಂದಿದೆ.

ಹಾರಂಗಿಯಿಂದ ನೀರು ಬಿಡುಗಡೆ: ಕೊಡಗಿನಲ್ಲಿ ಹೆಚ್ಚಿನ ಮಳೆಯಾಗಿ ಕೊಡಗು ಭಾಗದ ಕೆಆರ್‌ಎಸ್‌ ಜಲಾಶಯದ ಮೇಲ್ಭಾಗದಲ್ಲಿರುವ ಹಾರಂಗಿ ಜಲಾಶಯ ಭರ್ತಿಯಾಗಿ, ಹೆಚ್ಚಿನ ನೀರನ್ನು ಕಾವೇರಿ ನದಿ ಮೂಲಕ ಕೆಆರ್‌ಎಸ್‌ ಜಲಾಶಯಕ್ಕೆ ಬಿಡಲಾಗಿದೆ. ಇದರಿಂದ ಕೆಆರ್‌ಎಸ್‌ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಿದಂತೆ ಇದೀಗ ಜಲಾಶಯದ ನೀರಿನ ಮಟ್ಟ 92.60 ಅಡಿಗೆ ತಲುಪಿದೆ.

ತಡವಾಗಿ ಚೇತರಿಸಿಕೊಂಡ ಮುಂಗಾರು: ಜೂನ್‌ ತಿಂಗಳಲ್ಲಿ ಆರಂಭವಾಗಬೇಕಿದ್ದ ಮುಂಗಾರು ಮಳೆ ಜುಲೈ ಕೊನೆ ವಾರದಲ್ಲಿ ತಡವಾಗಿ ಇದೀಗ ಚುರುಕುಗೊಂಡಿದೆ. ಕೊಡಗು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ಮೂರು ದಿನ ಉತ್ತಮ ಮಳೆಯಾದ ಹಿನ್ನೆಲೆ ಕೆಆರ್‌ಎಸ್‌ ಜಲಾಶಯಕ್ಕೆ 16,848 ಕ್ಯೂಸೆಕ್‌ ನೀರು ಒಳಹರಿವು ಹರಿದು ಬರುತ್ತಿದೆ.

ಜುಲೈನಲ್ಲೇ ಹೆಚ್ಚು ನೀರು: 2023ನೇ ಸಾಲಿನ ಜುಲೈನಲ್ಲಿಯೇ 10 ಸಾವಿರಕ್ಕೂ ಕ್ಯೂಸೆಕ್‌ ಹೆಚ್ಚು ನೀರು ಹರಿದು ಬರುತ್ತಿದೆ. ಕಳೆದ ಮಾರ್ಚ್‌ನಲ್ಲಿಯೂ ಮಳೆಯಾಗದೆ ಏಪ್ರಿಲ್‌, ಮೇ ತಿಂಗಳು ಸೇರಿ ಜೂನ್‌ವರೆಗೂ ಮಳೆಯ ವಾತಾವರಣ ಇರಲಿಲ್ಲ. ರೈತರು ಕೂಡ ಮಳೆಯನ್ನೇ ನಂಬಿರುವ ಪ್ರದೇಶದಲ್ಲಿ ಬೆಳೆ ಜಮೀನುಗಳಿಗೆ ಬಿತ್ತನೆ ಹಾಕಲು ಹಿಂದೇಟು ಹಾಕಿದ್ದರು. ಕೆಆರ್‌ಎಸ್‌ ಜಲಾಶಯದಲ್ಲಿ ಕಳೆದ ಮಾರ್ಚ್‌ನಿಂದ ಬಿಸಿಲ ಬೇಗೆಗೆ ಜಲಾಶಯದಲ್ಲಿ 76 ಅಡಿಗೆ ನೀರು ಇಳಿಕೆಯಾಗಿತ್ತು. ಜೂನ್‌ ಕೊನೆವರೆಗೆ ಯಾವುದೇ ಮಳೆಯಿಲ್ಲದೆ ಜಲಾಶಯ ಬರಿದಾಗುವ ಸಮಯದಲ್ಲಿ ಈ ಪ್ರಮಾಣದ ಒಳಹರಿವು ಜುಲೈ ತಿಂಗಳಲ್ಲಿ ಕಾಣಿಸಿಕೊಂಡಿದೆ.

Advertisement

ಕುಡಿಯುವ ನೀರಿಗೆ ಸಮಸ್ಯೆ ಇಲ್ಲ: ಜಲಾಶಯದಲ್ಲಿ ಇಷ್ಟೇ ನೀರಿದ್ದರೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಿದ್ದರೂ ರೈತರಿಗೆ ಬೆಳೆ ಬೆಳೆಯುವುದಕ್ಕೆ ಸಂಕಷ್ಟದ ಪರಿಸ್ಥಿತಿ ಎದುರಾಗುವ ಸಂಭವ ತಳ್ಳಿ ಹಾಕುವಂತಿಲ್ಲ. ಒಂದು ವೇಳೆ ಜುಲೈ ಕೊನೆಯ ವಾರ ಸೇರಿದಂತೆ ಆಗಸ್ಟ್‌ ತಿಂಗಳವರೆಗೂ ಹೆಚ್ಚಿನ ಮಳೆಯಾದರೆ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬಂದರೆ ಜಲಾಶಯ ಭರ್ತಿಯಾದರೆ ಬೆಳೆ ಬಿತ್ತನೆಗೆ ನೀರು ಸಿಗಬಹುದು.

ನೀರು ಹಂಚಿಕೆ ವಿವಾದ ತಣಿಸುವ ಪ್ರಯತ್ನ : ಜಿಲ್ಲೆಯ ರೈತರ ಹೋರಾಟಕ್ಕೆ ಮಣಿದ ಸರ್ಕಾರ, ನಾಲೆಗಳಿಗೆ ನೀರು ಹರಿಸುವುದರ ಜೊತೆಗೆ ತಮಿಳುನಾಡಿಗೂ ಹರಿಸುತ್ತಿದೆ. ತಮಿಳುನಾಡು ಸರ್ಕಾರ ಜೂನ್‌, ಜುಲೈ ತಿಂಗಳ ತಮ್ಮ ಪಾಲಿನ ನೀರನ್ನು ಹರಿಸಬೇಕು ಎಂದು ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರ ಮುಂದೆ ವಾದ ಮಂಡಿಸಿತ್ತು. ಇತ್ತ ಜಿಲ್ಲೆಯ ರೈತರು ಸಹ ಬೆಳೆದು ನಿಂತಿರುವ ಬೆಳೆಗಳ ರಕ್ಷಣೆಗೆ ನಾಲೆಗಳಿಗೆ ನೀರು ಹರಿಸಬೇಕು ಎಂದು ಪ್ರತಿಭಟನೆ ಮಾಡುವ ಮೂಲಕ ಒತ್ತಡ ಹೇರಿದ್ದರು. ಸರ್ಕಾರ ತಮಿಳುನಾಡಿಗೆ ನೀಚರು ಬಿಟ್ಟರೆ ಜಿಲ್ಲೆಯ ರೈತರು ದಂಗೆ ಏಳುತ್ತಾರೆ ಎಂಬ ನಿಟ್ಟಿನಲ್ಲಿ ನಾಲೆಗಳಿಗೂ 10 ದಿನಗಳವರೆಗೆ ನೀರು ಹರಿಸುತ್ತೇವೆ. ಅದರಂತೆ ಕಾವೇರಿ ನದಿಗೂ ನೀರು ಹರಿಸುವ ಮೂಲಕ ತಮಿಳುನಾಡು ವಿವಾದ ತಣಿಸುವ ಪ್ರಯತ್ನ ನಡೆಸಿದೆ. ಆದರೆ, ಕೆಆರ್‌ಎಸ್‌ ಜಲಾಶಯದಿಂದ ರಾತ್ರಿ ವೇಳೆ ಅತಿ ಹೆಚ್ಚು ನೀರನ್ನು ತಮಿಳುನಾಡಿಗೆ ಬಿಡಲಾಗುತ್ತಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

17.548 ಟಿಎಂಸಿ ನೀರು ಸಂಗ್ರಹ: ಕಾವೇರಿ ಕಣಿವೆ ಪ್ರದೇಶದಲ್ಲಿ ವರುಣನ ಅಬ್ಬರದ ಹಿನ್ನಲೆಯಲ್ಲಿ ಕೆ.ಆರ್‌.ಎಸ್‌ ಜಲಾಶಯಕ್ಕೆ ಒಳಹರಿವು 16848 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಭಾನುವಾರ ರಾತ್ರಿ 8 ಗಂಟೆ ವೇಳೆಯಲ್ಲಿ ನದಿ ಹಾಗೂ ನಾಲೆಗಳಿಗೆ 5283 ಕ್ಯೂಸೆಕ್‌ ಹೊರಹರಿವು ದಾಖಲಾಗಿದೆ. 124.80 ಗರಿಷ್ಠ ಮಟ್ಟದ ಜಲಾಶಯದಲ್ಲಿ ಕಳೆದ ಜು.3ರಂದು 78.30 ಅಡಿಯಿದ್ದ ನೀರಿನ ಮಟ್ಟ 92.60 ಅಡಿಗೆ ಅಂದರೆ 14 ಅಡಿ ಏರಿಕೆ ಕಂಡಿದೆ. ಜಲಾಶಯ ದಲ್ಲಿ 17.548 ಟಿಎಂಸಿ ನೀರು ಸಂಗ್ರಹವಾಗಿದೆ.ಕಳೆದ ವರ್ಷ ಇದೆ ದಿನ 124.46 ಅಡಿ ನೀರಿನ ಮಟ್ಟ, 16279 ಕ್ಯೂಸೆಕ್‌ ಒಳಹರಿವು ಹಾಗೂ 17986 ಕ್ಯೂಸೆಕ್‌ ಹೊರಹರಿವು ದಾಖಲಾಗಿತ್ತು. ತಡರಾತ್ರಿಯ ವೇಳೆಗೆ ಕೆಆರ್‌ಎಸ್‌ ಜಲಾಶಯಕ್ಕೆ ಇನ್ನೂ ಹೆಚ್ಚಿನ ಒಳಹರಿವು ದಾಖಲಾಗುವ ಮುನ್ಸೂಚನೆ ಕಂಡು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next