Advertisement

ನಾಯಕನಹಟ್ಟಿ ಜಾತ್ರೆ ಆದಾಯ ಹೆಚ್ಚಳ

02:13 PM Mar 28, 2019 | pallavi |
ನಾಯಕನಹಟ್ಟಿ: ಇಲ್ಲಿನ ಗುರು ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಕಳೆದ ವರ್ಷದ ಜಾತ್ರೆಗಿಂತ 5.63 ಲಕ್ಷ ರೂ. ಅಧಿಕ ಆದಾಯ ದೊರೆತಿದೆ. ಬುಧವಾರ ದೇವಾಲಯದಲ್ಲಿ ಜಾತ್ರೆಯ ಹುಂಡಿಗಳ ಹಣದ ಎಣಿಕಾ ಕಾರ್ಯಜರುಗಿತು. ತಿಪ್ಪೇರುದ್ರಸ್ವಾಮಿ ಜಾತ್ರೆ ಅವಧಿಯಲ್ಲಿ ಹುಂಡಿಯಲ್ಲಿನ ಹಣ ಹಾಗೂ ನಾನಾ ಸೇವೆಗಳಿಂದ ದೇವಾಲಯಕ್ಕೆ ಒಟ್ಟು 97.83 ಲಕ್ಷ ರೂ. ಸಂಗ್ರಹವಾಗಿದೆ.
ಒಳಮಠದ ಹುಂಡಿಗಳಲ್ಲಿ 26,18,402 ರೂ. ಹಾಗೂ ಹೊರಮಠದ ಹುಂಡಿಗಳಲ್ಲಿ 9,96,928 ರೂ. ಸಂಗ್ರಹವಾಗಿದೆ. ಎರಡೂ ದೇವಾಲಯಗಳ ಹುಂಡಿಗಳಿಂದ ಒಟ್ಟಾರೆ 36,15,330 ರೂ. ಕಾಣಿಕೆ ಸಂಗ್ರಹಗೊಂಡಿದೆ. ಇವುಗಳ ಜತೆಗೆ ಜಾತ್ರಾ ಸಮಯದಲ್ಲಿ ದೇವಾಲಯಕ್ಕೆ ದೇಣಿಗೆ, ನೇರ ದರ್ಶನ, ತೀರ್ಥ-ಪ್ರಸಾದ, ಕಟ್ಟಡದ ಹಣ, ಮಂಗಳಾರತಿ ಸೇರಿದಂತೆ ನಾನಾ ಮೂಲಗಳಿಂದ 61,68,396 ರೂ.ಗಳು ಸಂದಾಯವಾಗಿವೆ. ಕಳೆದ ವರ್ಷ ಇದೇ ಅವ ಧಿಯಲ್ಲಿ 92,20,192 ರೂ. ಆದಾಯ ದೊರೆತಿತ್ತು. ಈ ಬಾರಿ ದೇವಾಲಯಕ್ಕೆ 97,83,726 ರೂ. ಹಣವನ್ನು ಭಕ್ತಾದಿಗಳು ನೀಡಿದ್ದಾರೆ. ಒಟ್ಟಾರೆ ದೇವಾಲಯಕ್ಕೆ ಈ ವರ್ಷ 5,63,534 ರೂ. ಹೆಚ್ಚುವರಿ ಹಣವನ್ನು ಭಕ್ತರು ದೇವರಿಗೆ ಕಾಣಿಕೆಯಾಗಿ ಅರ್ಪಿಸಿದ್ದಾರೆ. ದಾವಣಗೆರೆ ಜಿಲ್ಲೆಯ ವೀರಭದ್ರಸ್ವಾಮಿ, ಮಡ್ರಹಳ್ಳಿ ಚೌಡೇಶ್ವರಿ ಜಾತ್ರೆಗಳು ಏಕಕಾಲದಲ್ಲಿ ಜರುಗಿದ್ದರಿಂದ ಈ ಬಾರಿ ಜಾತ್ರೆಯಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು.
ಜತೆಗೆ ಸುತ್ತಲಿನ ಪ್ರದೇಶದಲ್ಲಿ ಭಾರೀ ಪ್ರಮಾಣದ ಬರ ಆವರಿಸಿದ್ದರೂ ಜನರು ದೇವರಿಗೆ ಉದಾರವಾಗಿ ಕಾಣಿಕೆ ನೀಡಿದ್ದಾರೆ. ದೇವರ ನೇರ ದರ್ಶನಕ್ಕೆ 50 ರೂ. ನಿಗದಿಪಡಿಸಲಾಗಿತ್ತು. ದೇವರ ನೇರ ದೈನದಿಂದ 4.49 ಲಕ್ಷ ರೂ. ಲಭ್ಯವಾಗಿದ್ದರೆ, ಲಡ್ಡು ಪ್ರಸಾದ ಬಿಡ್ಡಿಂಗ್‌ 1,71,000 ರೂ.ಗಳಿಗೆ ನೀಡಲಾಗಿತ್ತು.  ಕೆನರಾ ಬ್ಯಾಂಕ್‌, ಕಂದಾಯ ಇಲಾಖೆಯ 50ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಸಂಸ್ಕೃತ ಶಾಲೆಯ ವಿದ್ಯಾರ್ಥಿಗಳು ಎಣಿಕಾ ಕಾರ್ಯದಲ್ಲಿ ತೊಡಗಿದ್ದರು. ಎಣಿಕಾ ಕಾರ್ಯವನ್ನು ವೀಡಿಯೋ ಚಿತ್ರೀಕರಣ ಮಾಡಲಾಯಿತು.
ದೇವಾಲಯದ ಇಒ ಎಸ್‌.ಪಿ.ಬಿ. ಮಹೇಶ್‌, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜೆ.ಪಿ. ರವಿಶಂಕರ್‌, ಉಪ ತಹಶೀಲ್ದಾರ್‌ ಟಿ. ಜಗದೀಶ್‌, ಮುಜರಾಯಿ ತಹಶೀಲ್ದಾರ್‌ ಸಮೀವುಲ್ಲಾ, ಮುಜುರಾಯಿ ಇಲಾಖೆ ಸಿಬ್ಬಂದಿ ರಂಗಪ್ಪ, ದೇವಾಲಯ ಸಿಬ್ಬಂದಿ ಸತೀಶ್‌, ಕೆನರಾ ಬ್ಯಾಂಕ್‌ ವ್ಯವಸ್ಥಾಪಕ ಈಶ್ವರಪ್ಪ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಲಲಿತಮ್ಮ, ಹಂಸವೇಣಿ, ಗೋವಿಂದರಾಜ್‌, ರುದ್ರಮುನಿ, ಮುನಿಯಪ್ಪ, ಎಸ್‌.ವಿ.ಟಿ. ರೆಡ್ಡಿ ಮತ್ತಿತರರು ಇದ್ದರು.
ಹುಂಡಿಯಲ್ಲಿ ಸಿಕ್ಕು ಅಮಾನ್ಯಗೊಂಡ ನೋಟು!
ಹಲವಾರು ಭಕ್ತರು ತೊಟ್ಟಿಲು, ಕಣ್ಣು, ಹೂವುಗಳು, ಮುಖಪದ್ಮ, ಉಂಗುರ ಸೇರಿದಂತೆ ನಾನಾ ಬೆಳ್ಳಿ ಹಾಗೂ ಬಂಗಾರದ ಆಭರಣಗಳನ್ನು ಹುಂಡಿಯಲ್ಲಿ ಹಾಕಿದ್ದರು. ಸಾಯಿಬಾಬಾ ಮುಖ ಹೊಂದಿರುವ ಮೂರು ಬೆಳ್ಳಿ ನಾಣ್ಯಗಳು ಹಾಗೂ 6 ಗ್ರಾಂ ತೂಕ ಬಂಗಾರದ ಉಂಗುರ ಗಮನ ಸೆಳೆದವು. ಅಮಾನ್ಯಿಕರಣಗೊಂಡ ಒಂದು ಸಾವಿರ ರೂ. ಮೌಲ್ಯದ ಒಂದು ಹಾಗೂ 500 ರೂ. ಮೌಲ್ಯದ 12 ನೋಟುಗಳೂ ಇದ್ದವು.
Advertisement

Udayavani is now on Telegram. Click here to join our channel and stay updated with the latest news.

Next