Advertisement

ಮನೆಹಾನಿ ಪರಿಹಾರ ಮೊತ್ತದಲ್ಲಿ ಏರಿಕೆ: ಸಚಿವ ಆರ್‌. ಅಶೋಕ್‌

11:34 PM Jul 07, 2022 | Team Udayavani |

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಮಳೆಯಿಂದ ಪೂರ್ತಿ ಹಾನಿಗೊಂಡ ಮನೆಗೆ 5 ಲಕ್ಷ ರೂ. ಹಾಗೂ ಶೇ. 50ರಷ್ಟು ಹಾನಿಯಾಗಿರುವ ಮನೆಗಳಿಗೆ 3 ಲಕ್ಷ ರೂ.ನಷ್ಟು ಮೊತ್ತವನ್ನು ಪರಿಹಾರವಾಗಿ ನೀಡಲಾಗುವುದು. ಈ ಕುರಿತ ಪರಿಷ್ಕೃತ ಆದೇಶವನ್ನು ಶುಕ್ರವಾರ ಬೆಂಗಳೂರಿನಲ್ಲಿ ಹೊರಡಿಸಲಾಗುವುದು ಎಂದು ಕಂದಾಯ ಖಾತೆ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ.

Advertisement

ದ.ಕ. ಜಿಲ್ಲೆಯ ಮಳೆಹಾನಿ ಹಾಗೂ ಪ್ರಾಕೃತಿಕ ವಿಕೋಪಗಳ ಕುರಿತು ಇಲ್ಲಿನ ಜಿ.ಪಂ. ನೇತ್ರಾವತಿ ಸಭಾಂಗಣದಲ್ಲಿ ಗುರುವಾರ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.

ಪೂರ್ತಿ ಹಾನಿಯಾದ ಮನೆಗೆ 5 ಲಕ್ಷ ರೂ, ಶೇ. 50ರಷ್ಟು ಹಾನಿಯಾದರೆ 3 ಲಕ್ಷ ರೂ. ಹಾಗೂ ಭಾಗಶಃ ಹಾನಿಯಾದರೆ 50 ಸಾವಿರ ರೂ., ಮನೆಗೆ ನೀರು ನುಗ್ಗಿದರೆ 10 ಸಾವಿರ ರೂ. ನೀಡಬೇಕು. ಅದರಲ್ಲಿ 50 ಸಾವಿರ ರೂ. ಹಾಗೂ 10 ಸಾವಿರ ರೂ. ಮೊತ್ತವನ್ನು ಏಕಗಂಟಿನಲ್ಲಿ ಕೊಡಬೇಕು ಹಾಗೂ ಇತರ ಮೊತ್ತವನ್ನು ಕಂತುಗಳಲ್ಲಿ ಕೊಡಬೇಕು. ಮೂರು ದಿನದೊಳಗೆ ಪರಿಹಾರ ನೀಡುವ ಮೂಲಕ ಜನರ ಕಷ್ಟದ ಸಂದರ್ಭದಲ್ಲಿ ನೆರವಾಗುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

ನಿರಾಶ್ರಿತರ ಆರೋಗ್ಯಕ್ಕೆ ಪೂರಕವಾಗಿ ಅನ್ನ, ಸಾಂಬಾರ್‌, ಪಲ್ಯ ಎಲ್ಲ ಕೊಡಬೇಕು, ಬಟ್ಟೆಬರೆ ಬೇಕಾದರೆ ಕೊಡಿ. ಅವರ ಎಲ್ಲ ವಸ್ತುಗಳೂ ಹಾಳಾಗಿರುತ್ತವೆ. ಹಾಗಾಗಿ ಅಗತ್ಯವಿರುವುದನ್ನು ಒದಗಿಸಿಕೊಡಬೇಕು ಎಂದು ಸೂಚಿಸಿದರು.

ಕಡಲ್ಕೊರೆತಕ್ಕೆ ಪರಿಹಾರ :

Advertisement

ಕಡಲ್ಕೊರೆತ ಹಾನಿಗೆ ದೊಡ್ಡ ಮೊತ್ತ ಬೇಕಾಗಬಹುದು, ಈ ಬಗ್ಗೆ ಸಿಎಂ ಜತೆಗೆ ಮಾತನಾಡೋಣ, ಈ ಭಾಗದ ಶಾಸಕರೂ ಬನ್ನಿ ಎಂದು ತಿಳಿಸಿದರು.

ಬೆಳೆಹಾನಿಗೆ ಪರಿಹಾರವನ್ನು ಕೂಡಲೇ ಕೊಡಲಾಗುವುದು. ಎಲ್ಲ ಅಧಿಕಾರಿಗಳು ಸಮರೋಪಾದಿ ಯಲ್ಲಿ ಕೆಲಸ ಮಾಡಿ. ಬೇಕಾದ ಉಪಕರಣ ಖರೀದಿಸುವುದಕ್ಕೂ ಅನುದಾನ ನೀಡಲಾಗುವುದು ಎಂದರು.

ಸಚಿವ ವಿ. ಸುನಿಲ್‌ ಕುಮಾರ್‌ ಮಾತನಾಡಿ, ಮಳೆ – ಹವಾಮಾನ ಪರಿಸ್ಥಿತಿ ಪರಿಶೀಲಿಸಿ ಶಾಲಾ ಕಾಲೇಜುಗಳಿಗೆ ರಜೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಚಿವ ಎಸ್‌. ಅಂಗಾರ ಮಾತನಾಡಿ, ಕಡಲ್ಕೊರೆತ ತಡೆಗೆ ಎಡಿಬಿಯಿಂದ ನಿರ್ವಹಿಸಿದ ಕಾಮಗಾರಿಗಳ ಬಗ್ಗೆ ತನಿಖೆಗೆ ಸೂಚಿಸಲಾಗಿದೆ, ವರದಿ ಬಂದ ಅನಂತರ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಮೇಯರ್‌ ಪ್ರೇಮಾನಂದ ಶೆಟ್ಟಿ, ಡಿ.ಸಿ. ಡಾ| ರಾಜೇಂದ್ರ ಕೆ.ವಿ., ಮಂಗಳೂರು ಸ್ಮಾರ್ಟ್‌ ಸಿಟಿ ಎಂ.ಡಿ. ಪ್ರಶಾಂತ್‌ ಮಿಶ್ರ, ಪೊಲೀಸ್‌ ಆಯುಕ್ತ ಶಶಿಕುಮಾರ್‌, ಜಿ.ಪಂ. ಸಿಇಒ ಡಾ| ಕುಮಾರ್‌, ಎಸ್ಪಿ ಹೃಷಿಕೇಶ್‌ ಸೋನಾವಣೆ ಹಾಜರಿದ್ದರು. ಶಾಸಕರಾದ ವೇದವ್ಯಾಸ ಕಾಮತ್‌, ರಾಜೇಶ್‌ ನಾಯಕ್‌, ಯು.ಟಿ. ಖಾದರ್‌, ಹರೀಶ್‌ ಪೂಂಜ, ಡಾ| ಭರತ್‌ ಶೆಟ್ಟಿ, ಪ್ರತಾಪ್‌ ಸಿಂಹ ನಾಯಕ್‌ ಇದ್ದರು.

ಭೂಕಂಪ: ಭೀತಿ ಬೇಡ :

ಘಟ್ಟ ಪ್ರದೇಶದಲ್ಲಿ ಸಾಮಾನ್ಯವಾಗಿ ಭೂಕುಸಿತ ಆಗುತ್ತಿದೆ, ಸುಳ್ಯ ಸಂಪಾಜೆ ಭಾಗದಲ್ಲಿ ಮೊನ್ನೆ ಲಘು ಭೂಕಂಪ ಆಗಿದೆ, ಇದಕ್ಕೆ ಯಾವುದೇ ಭೀತಿ ಪಡಬೇಕಾಗಿಲ್ಲ, ಇದು 3.1ರಷ್ಟು ತೀವ್ರತೆಯ ಭೂಕಂಪವಷ್ಟೇ ಎಂದು ಸಚಿವ ಅಶೋಕ್‌ ತಿಳಿಸಿದರು.

ಇಲ್ಲಿ  7 ಬಾರಿ ಭೂಕಂಪವಾಗಿದ್ದು ಹೈದರಾಬಾದ್‌, ಬೆಂಗಳೂರಿನ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮಳೆ ಬಂದು ಭೂಮಿ ಒಳಗಿನ ಪದರ ಮೇಲೆ ನೀರು ಸೇರಿಕೊಂಡು ಇದು ಆಗುತ್ತಿದೆ. ಈ ಕುರಿತು ನಿಗಾ ಇರಿಸಲು ಸೂಚನೆ ನೀಡಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next