ಬೆಂಗಳೂರು: ಕಳೆದ 14 ವರ್ಷದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೋವಿಡ್ ಅವಧಿಯಲ್ಲಿ ದುರ್ಬಲ ಕುಟುಂಬಗಳ ಮಕ್ಕಳು, ಪಾಲಕ, ಪೋಷಕರು ಸರ್ಕಾರಿ ಶಾಲೆಯತ್ತ ಮುಖ ಮಾಡಿದ್ದಾರೆ. ಸುಮಾರು 90 ಸಾವಿರ ಮಕ್ಕಳು ಈಗಾಗಲೇ ಸರ್ಕಾರಿ ಶಾಲೆಗಳಿಗೆ ಸೇರ್ಪಡೆಯಾಗಿದ್ದಾರೆ. ಇದು ಕಳೆದ 14 ವರ್ಷಗಳಲ್ಲಿ ಸರ್ಕಾರಿ ಶಾಲೆಯ ದಾಖಲಾತಿ ಇದೇ ಮೊದಲ ಬಾರಿಗೆ ಗಣನೀಯವಾಗಿ ಹೆಚ್ಚಾಗಿದೆ ಎಂದರು.
ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ರಾಜ್ಯ ಸರ್ಕಾರ ಸಾಕಷ್ಟು ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಮುಂದೆ ಸಾಗುತ್ತಿದೆ. ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಸಲುವಾಗಿ ಉಭಯ ಮಾಧ್ಯಮ ಶಾಲೆಗಳನ್ನು ಆರಂಭಿಸಲಾಗಿದೆ. ಉಭಯ ಮಾಧ್ಯಮ ಶಾಲೆಗಳು ಕನ್ನಡದ ವಾತಾವರಣದಲ್ಲಿ ಆಂಗ್ಲಭಾಷೆಯನ್ನು ಕಲಿಯುವ ನಮ್ಮ ವಿದ್ಯಾರ್ಥಿಗಳನ್ನು ಜಾಗತಿಕ ಸ್ಪರ್ಧೆಗಳನ್ನು ಎದುರಿಸಲು ಸಜ್ಜುಗೊಳಿಸುವ ಉದಾತ್ತ ನಿಲುವು ಹೊಂದಿವೆ ಎಂದು ಹೇಳಿದರು.
ವಿಶ್ವದಲ್ಲಿ ಅದೆಷ್ಟೋ ಭಾಷೆಗಳು ಅವಸಾನ ಕಂಡಿವೆ. ಅದಕ್ಕೆಲ್ಲ ಭಾಷೆ ಮತ್ತು ನುಡಿಯ ಮೇಲಿನ ನಿಷ್ಕಾಳಜಿ ಕಾರಣವಾಗಿದೆ. ಕನ್ನಡ ಭಾಷೆ ಪ್ರತಿದಿನವೂ ಪ್ರತಿ ಕ್ಷಣವೂ ಇನ್ನೂ ಗಟ್ಟಿಗೊಳ್ಳುತ್ತಲೇ ಸಾಗಿದೆ. ಕನ್ನಡಿಗರು ವಿಶ್ವದ ಯಾವುದೇ ಭಾಗದಲ್ಲಿರಲಿ, ನಾಡುನುಡಿಯ ಕುರಿತ ಕಾಳಜಿ ಹೊಂದುವ ಮೂಲಕ ತಾಯಿನುಡಿಗೆ ಗೌರವ ಸಲ್ಲಿಸಬೇಕು. ಈಗಲೂ ಕನ್ನಡ ಭಾಷೆ ಉಳಿದಿದೆ ಎಂದರೆ ಅದರ ಗಟ್ಟಿತನ ಮತ್ತು ನಮ್ಮ ಭಾಷೆ ಕುರಿತ ನಮ್ಮೆಲ್ಲರ ಕಾಳಜಿಯೇ ಕಾರಣ ಎಂದರು.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮತ್ತು ಕನ್ನಡ ಭಾಷೆಯ ಉಳಿವಿಗಾಗಿ ಯಾವುದೇ ಭಾಷಿಕ ಹಿನ್ನೆಲೆಯ ಮಕ್ಕಳೂ ಸಹ ಕನ್ನಡವನ್ನು ಒಂದು ಭಾಷೆಯಾಗಿ ಕಲಿಯಲೇಬೇಕು ಎಂಬ ಕನ್ನಡ ಕಲಿಕಾ ಕಾಯ್ದೆ -2017ನ್ನು ಅನುಷ್ಠಾನಗೊಳಿಸುವಲ್ಲಿ ನಾವು ಕಠಿಣ ಕ್ರಮಗಳನ್ನು ಕೈಗೊಂಡಿದ್ದೇವೆ. ಈ ನೆಲದಲ್ಲಿ ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಕನ್ನಡ ಕಲಿಯುವುದರೊಂದಿಗೆ ಕನ್ನಡದ ಜತೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು ಎಂಬುದು ಸರ್ಕಾರದ ನಿಲುವುವಾಗಿದೆ. ಕನ್ನಡ ಮಾಧ್ಯಮದ ಪಿಯುಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಪಿಯುಸಿ ವಿಜ್ಞಾನದ ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಕನ್ನಡ ಮಾಧ್ಯಮದಲ್ಲಿ ತಯಾರು ಮಾಡಿ ನೀಡಿದ್ದೇವೆ ಎಂದರು.
ಸರಳವಾಗಿ ನಡೆದ ಕಾರ್ಯಕ್ರಮ:
ಕನ್ನಡ ರಾಜ್ಯೋತ್ಸ ಕಾರ್ಯಕ್ರಮ ಪ್ರತಿ ವರ್ಷ ಕಂಠೀರವ ಕ್ರೀಡಾಂಗಣದಲ್ಲಿ ಬಹಳ ಅದ್ಧೂರಿಯಾಗಿ ನಡೆಯುತಿತ್ತು. ಬೆಂಗಳೂರು ನಗರದ ವಿವಿಧ ಭಾಗದ ಶಾಲಾ ಮಕ್ಕಳಿಂದ ನಾನಾ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳುತ್ತಿದ್ದವು. ಈ ಬಾರಿ ಕೊರೊನಾ ಕಾರಣದಿಂದ ಯಾವುದೇ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ಇರಲಿಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಾಯಿ ಭುವನೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ಸಭಾ ಕಾರ್ಯಕ್ರಮ ನಡೆಸಿದರು. ಒಂದು ಗಂಟೆಯ ಅವಧಿಯಲ್ಲಿ ಸರಳ ಕಾರ್ಯಕ್ರಮ ಮುಗಿದಿತ್ತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿದ್ದರು