Advertisement

ಆರ್ಥಿಕ ಹೊಡೆತದಿಂದ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳ ?

11:27 AM Apr 24, 2020 | Sriram |

ಬೆಂಗಳೂರು: ಕೋವಿಡ್ 19 ಮಹಾಮಾರಿ ಬಡ ಮತ್ತು ಮಧ್ಯಮ ವರ್ಗದ ಮೇಲೆ ನೇರ ಪರಿಣಾಮ ಬೀರಿದ್ದು, 2020-21ನೇ ಸಾಲಿಗೆ ಸರಕಾರಿ ಶಾಲೆಯಲ್ಲಿ ಶೇ.20ರಷ್ಟು ದಾಖಲಾತಿ ಹೆಚ್ಚಾಗುವ ಸಾಧ್ಯತೆಯಿದೆ.

Advertisement

ಕೋವಿಡ್ 19 ಭೀತಿಯಿಂದ ರಾಜ್ಯದ 1ರಿಂದ 9ನೇ ತರಗತಿಯ ಎಲ್ಲ ಮಕ್ಕಳನ್ನು ಉತ್ತೀರ್ಣ ಗೊಳಿಸಲಾಗಿದೆ. ಕೆಲವು ಖಾಸಗಿ ಶಾಲೆಗಳು ಸರಕಾರದ ಕಣ್ಣು ತಪ್ಪಿಸಿ ಮುಂದಿನ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆ ಆರಂಭಿಸಿವೆ. ಇನ್ನು ಕೆಲವು ಖಾಸಗಿ ಶಾಲೆಗಳು ಆನ್‌ ಲೈನ್‌ ತರಗತಿ ನೆಪದಲ್ಲಿ ಶುಲ್ಕ ವಸೂಲಾತಿ ಮಾಡುತ್ತಿವೆ.

ಇವೆಲ್ಲದರ ನಡುವೆ ಸರಕಾರಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಸಾಮಗ್ರಿ ವಿತರಣೆ ಈಗಷ್ಟೆ ಪೂರ್ಣಗೊಂಡಿದೆ. ಸರಕಾರಿ ಶಾಲಾ ಮಕ್ಕಳ ಪಾಲಕ, ಪೋಷಕರಿಗೆ ಶುಲ್ಕದ ಅಥವಾ ಹೆಚ್ಚುವರಿ ಶುಲ್ಕದ ಕಿರಿಕಿರಿ ಇಲ್ಲ. ಆದರೆ ರಾಜ್ಯದ ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ ಈ ಕಿರಿಕಿರಿ ಸದಾ ಕಾಡುತ್ತಿರುತ್ತದೆ.

ಸರಕಾರದ ಕರ್ನಾಟಕ ಪಬ್ಲಿಕ್‌ ಶಾಲೆಯಲ್ಲಿ ಇಂಗ್ಲಿಷ್‌ ಮಾಧ್ಯಮ ಮತ್ತು ಸರಕಾರಿ ಶಾಲೆಯಲ್ಲಿ ಒಂದನೇ ತರಗತಿಯಿಂದಲೇ ಇಂಗ್ಲಿಷ್‌ ಕಲಿಸುತ್ತಿರುವುದರಿಂದ ಪಾಲಕರು, ಪೋಷಕರು ಸರಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಮುಂದೆ ಬರುತ್ತಿದ್ದಾರೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸರಕಾರಿ ಶಾಲೆಯಲ್ಲಿ ಸಮವಸ್ತ್ರ, ಪಠ್ಯಪುಸ್ತಕ, ಬಿಸಿಯೂಟ ಸಹಿತ ಎಲ್ಲ ಸೌಲಭ್ಯಗಳನ್ನು ಸರಕಾರವೇ ಉಚಿತವಾಗಿ ನೀಡಲಿದೆ. ಹೀಗಾಗಿ ಈ ಬಾರಿ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಲು ಹೆಚ್ಚು ಆಸಕ್ತಿ ವಹಿಸುವ ಸಾಧ್ಯತೆಯಿದೆ ಎಂದು ಶಿಕ್ಷಣ ತಜ್ಞರು ಹೇಳುತ್ತಿದ್ದಾರೆ.

Advertisement

ಕಂತುಗಳಲ್ಲಿ ಶುಲ್ಕ ವಸೂಲಿ: ಖಾಸಗಿ ಶಾಲೆಗಳಿಗೆ ಅವಕಾಶ
ಬೆಂಗಳೂರು: ಕಂತುಗಳ ಮೂಲಕ ಶಾಲಾ ಶುಲ್ಕ ವಸೂಲಿಗೆ ಸರಕಾರವು ಖಾಸಗಿ ಶಾಲಾಡಳಿತ ಮಂಡಳಿಗೆ ಅವಕಾಶ ಮಾಡಿಕೊಟ್ಟಿದ್ದು, ಈ ಸಂಬಂಧ ಆದೇಶ ಹೊರಡಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಸೂಚಿಸಿದ್ದಾರೆ.

ಲಾಕ್‌ಡೌನ್‌ ಅವಧಿಯಲ್ಲಿ ಮಕ್ಕಳ ಶುಲ್ಕ ವಸೂಲಿ ಮಾಡಬಾರದು ಎಂದು ಈ ಹಿಂದೆ ಇಲಾಖೆಯಿಂದ ಆದೇಶ ಹೊರಡಿಸಲಾಗಿತ್ತು. ಈಗ ಆದೇಶದಲ್ಲಿ ಸ್ವಲ್ಪ ಬದಲಾವಣೆ ಮಾಡಿ, ಹೊಸ ಆದೇಶ ಹೊರಡಿಸುವ ಸಾಧ್ಯತೆಯಿದೆ.

ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕ ಸಿಬಂದಿ ವೇತನಕ್ಕೆ ಕೂಡ ತೊಂದರೆಯುಂಟಾ ಗಿದ್ದು, ಮಾನವೀಯ ನೆಲೆಯಲ್ಲಿ ಅನುಕೂಲ ಮಾಡಿಕೊಡಲು ಹಲವು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಮನವಿಗಳನ್ನು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಸಮರ್ಥರಿರುವ, ಸ್ವಯಂಪ್ರೇರಿತರಾಗಿ ಶುಲ್ಕ ಪಾವತಿಗೆ ಮುಂದಾಗುವ ಪೋಷಕರಿಂದ ಶಿಕ್ಷಣ ಕಾಯ್ದೆಯ ಅವಕಾಶಗಳಡಿಯಲ್ಲಿ ಅವರು ಇಚ್ಛಿಸುವ ಸಂಖ್ಯೆಯ ಕಂತುಗಳಲ್ಲಿ ಶುಲ್ಕ ವಸೂಲಾತಿಗೆ ಖಾಸಗಿ ಶಾಲೆಗಳು ಕ್ರಮ ವಹಿಸಲು ನಿರ್ದೇಶನವನ್ನು ಹೊರಡಿಸುವಂತೆ ಸಚಿವ ಸುರೇಶ್‌ ಕುಮಾರ್‌ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

ಶುಲ್ಕ ಪಾವತಿಗೆ ಅಸಹಾಯಕರಾಗಿರುವ ವರಲ್ಲಿ ಯಾವುದೇ ಕಾರಣಕ್ಕೂ ಶುಲ್ಕ ವಸೂಲಿಗೆ ಪ್ರಯತ್ನಿಸಬಾರದು. ಹಾಗೆ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

ಸರಕಾರದ ಆದೇಶವನ್ನು ಯಾರೂ ದುರ್ಬಳಕೆ ಮಾಡಿಕೊಳ್ಳಬಾರದು. ಯಾವುದೇ ಕಾರಣಕ್ಕೂ ಶುಲ್ಕ ವಸೂಲಿಗೆ ಪಾಲಕ, ಪೋಷಕರ ಮೇಲೆ ಒತ್ತಡ ಹೇರಬಾರದು. ಇಂತಹ ದೂರು ಬಂದರೆ ಕಠಿನ ಕ್ರಮ ನಾವೇ ತೆಗೆದುಕೊಳ್ಳಲಿದ್ದೇವೆ. ಸಿಬಂದಿಗೆ ವೇತನ ಕಡಿತ ಮಾಡಬಾರದು.
-ಡಿ. ಶಶಿಕುಮಾರ್‌, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ

ಸರಕಾರಿ ಶಾಲೆಗೆ ಎಷ್ಟೇ ವಿದ್ಯಾರ್ಥಿಗಳು ಬಂದರೂ ದಾಖಲು ಮಾಡಿಕೊಳ್ಳಲು ಸಿದ್ಧರಿದ್ದೇವೆ. ಶೇ.20ರಷ್ಟು ದಾಖಲಾತಿ ಹೆಚ್ಚಾಗಬಹುದು ಎನ್ನುವ ಅಂದಾಜಿದೆ. ಶೇ.50ರಷ್ಟು ದಾಖಲಾತಿ ಹೆಚ್ಚಾದರೂ ನಾವು ಸಿದ್ಧರಿದ್ದೇವೆ. ಹೆಚ್ಚೆಚ್ಚು ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳ ಲಿದ್ದೇವೆ.
-ಡಾ| ಕೆ. ಜಿ. ಜಗದೀಶ್‌,
ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ

-ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next