Advertisement
ಅಟ್ರಾಸಿಟಿ ಪ್ರಕರಣದ ಸಂತ್ರಸ್ತರಿಗೆ ಕೋರ್ಟ್, ಕಚೇರಿ, ಪೊಲೀಸ್ ಠಾಣೆಗಳಿಗೆ ತೆರಳಲು ಆರ್ಥಿಕ ಸಮಸ್ಯೆ ಎದುರಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರಕಾರವು ಭತ್ತೆಯನ್ನು ಪರಿಷ್ಕರಿಸಿದೆ. ಈ ಹಿಂದಿದ್ದ ದೈನಂದಿನ ನಿರ್ವಹಣೆ ವೆಚ್ಚ 175 ರೂ. ಅನ್ನು 309ಕ್ಕೆ ಹೆಚ್ಚಿಸಲಾಗಿದೆ. ಆಹಾರ ಭತ್ತೆಯನ್ನು 100 ರೂ.ನಿಂದ 150ಕ್ಕೆ ಹೆಚ್ಚಿಸಲಾಗಿದೆ. ಔಷಧಗಳ ಪಾವತಿ, ವಿಶೇಷ ವೈದ್ಯಕೀಯ ಸಮಾಲೋಚನೆ, ರಕ್ತ ಪೂರೈಕೆ, ಸಂತ್ರಸ್ತರಿಗೆ ಒದಗಿಸಲಾದ ಅಗತ್ಯ ಬಟ್ಟೆ, ಊಟ ಮತ್ತು ಹಣ್ಣುಗಳ ಭತ್ತೆಗಳನ್ನು ಉಪ ಆಯುಕ್ತರು ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ದಾಖಲೆ ಪರಿಶೀಲಿಸಿ ಒದಗಿಸಲಿದ್ದಾರೆ.
ಪ್ರಕರಣದ ಸಂತ್ರಸ್ತರು, ಸಾಕ್ಷಿದಾರರು, ಸಂಬಂಧಿತ ಇತರ ವ್ಯಕ್ತಿಗಳು ಕೋರ್ಟ್ ವಿಚಾರಣೆ ಹಾಗೂ ಪೊಲೀಸ್ ತನಿಖೆಗೆ ತಮ್ಮ ಕೆಲಸ ಬಿಟ್ಟು ತೆರಳಬೇಕಿತ್ತು. ಅಟ್ರಾಸಿಟಿ ಪ್ರಕರಣದ ಶೇ.70ರಷ್ಟು ಶೋಷಿತರು “ಡಿ” ದರ್ಜೆ ನೌಕರಿಯಂತಹ ದಿನಗೂಲಿ ನಂಬಿಕೊಂಡೇ ಜೀವನ ಸಾಗಿಸುವವರಾಗಿದ್ದಾರೆ. ಸರಕಾರದಿಂದ ಸಿಗುತ್ತಿದ್ದ ಕಡಿಮೆ ಭತ್ತೆಗೆ ಕೋರ್ಟ್, ಪೊಲೀಸ್ ಠಾಣೆಗೆ ಅಲೆಯಬೇಕಿರುವ ಹಿನ್ನೆಲೆಯಲ್ಲಿ ದೌರ್ಜನ್ಯಕ್ಕೊಳಗಾದ ಬಹುತೇಕರು ದೂರು ನೀಡಲು ಹಿಂದೇಟು ಹಾಕುತ್ತಿದ್ದರು.
Related Articles
ಸಂತ್ರಸ್ತರಿಂದ ದೂರು ಸ್ವೀಕರಿಸುವಾಗಲೇ ಬಿಗಿ ಕ್ರಮ ಕೈಗೊಳ್ಳಲು ಸರಕಾರ ಮುಂದಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ದೂರುಗಳ ಬಗ್ಗೆ ಹಾಗೂ ಸಾಕ್ಷಿದಾರರ ಹೇಳಿಕೆ ಕುರಿತು ಮೇಲ್ವಿಚಾರಣೆ ನಡೆಸುತ್ತಾರೆ. ವಿಚಾರಣೆ ಹಂತದಲ್ಲಿ ತಪ್ಪುಗಳಾದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಖುಲಾಸೆ ಪ್ರಕರಣಗಳನ್ನು ಐಜಿಪಿ ಮಟ್ಟದ ಅಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆ ಅಧಿಕಾರಿಗಳೊಂದಿಗೆ ಮರು ಪರಿಶೀಲಿಸಿ ಮೇಲ್ಮನವಿ ಸಲ್ಲಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ.
Advertisement
ಶೇ.60ರಷ್ಟು ಕೇಸ್ ಖುಲಾಸೆಪೊಲೀಸ್ ಠಾಣೆಗಳಲ್ಲಿ ಪ್ರತಿದಿನ ಸರಾಸರಿ 2 ರಿಂದ 3 ಅಟ್ರಾಸಿಟಿ ಕೇಸ್‌ಗಳು ದಾಖಲಾಗುತ್ತಿದ್ದು, ಬಹುತೇಕ ಪ್ರಕರಣಗಳಲ್ಲಿ ಬಿ ವರದಿ ಸಲ್ಲಿಕೆಯಾಗುತ್ತಿವೆ. ಶೇ.60 ಪ್ರಕರಣಗಳು ಹಲವು ವರ್ಷಗಳ ಕಾಲ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿದ್ದು, ಸಾಕ್ಷ್ಯಾಧಾರದ ಕೊರತೆಯಿಂದ ಖುಲಾಸೆಗೊಳ್ಳುತ್ತಿವೆ. ಜತೆಗೆ ನ್ಯಾಯಾಲಯದ ಹೊರಗೆ ವಿವಿಧ ಆಮಿಷಕ್ಕೊಳಗಾಗಿ ರಾಜಿ ಮೂಲಕ ಇತ್ಯರ್ಥ, ಸಾಕ್ಷಿದಾರರು ಪ್ರತಿಕೂಲ ಸಾಕ್ಷ್ಯ ನುಡಿಯುವುದು, ಸಂತ್ರಸ್ತರ ಪ್ರತಿಕೂಲ ಹೇಳಿಕೆ, ತನಿಖೆ ವೇಳೆ ಸಾಕ್ಷ್ಯ, ಪುರಾವೆಗಳ ಕೊರತೆ, ವಿಚಾರಣೆ ವೇಳೆ ವ್ಯತಿರಿಕ್ತ ಹೇಳಿಕೆ, ತನಿಖೆಯಲ್ಲಿ ಲೋಪಗಳು ಉಂಟಾಗುವುದರಿಂದ ಬಹುತೇಕ ಅಟ್ರಾಸಿಟಿ ಕೇಸ್‌ಗಳು ಖುಲಾಸೆಗೊಳ್ಳುತ್ತವೆ. ಅಟ್ರಾಸಿಟಿ ಕೇಸ್‌ಗಳಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಶೀಘ್ರದಲ್ಲೇ ಕೆಲವು ನಿಯಮಗಳನ್ನು ತರಲಾಗುವುದು. ಶೋಷಿತರಿಗೆ ಸಾಮಾಜಿಕವಾಗಿ ನ್ಯಾಯ ಕೊಡಿಸಲು ಸರಕಾರ ಸದಾ ಬದ್ಧವಾಗಿದೆ. ನೊಂದವರು, ಕಿರುಕುಳಕ್ಕೊಳಗಾದವರಿಗೆ ನೆರವು ನೀಡಲು ಕ್ರಮ ಕೈಗೊಳ್ಳಲಾಗುವುದು.
ಡಾ| ಎಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ ಅವಿನಾಶ ಮೂಡಂಬಿಕಾನ