ಮೈಸೂರು: ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಸಮಾಜವನ್ನು ಮಾದಕ ವಸ್ತುಗಳ ಸೇವನೆಯಿಂದ ಮತ್ತು ಅಕ್ರಮ ಕಳ್ಳ ಸಾಗಾಣಿಕೆಯಿಂದ ಮುಕ್ತಗೊಳಿಸುವುದು ನಮ್ಮೆಲ್ಲರ ಗುರಿ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಿ.ಬಸವರಾಜು ಹೇಳಿದರು.
ನಗರದ ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯುವ ಜನಾಂಗದಲ್ಲಿ ಮಾದಕ ವಸ್ತುಗಳ ವ್ಯಸನದಿಂದ ಆಗುವ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸಮಸ್ಯೆಗಳ ಅರಿವಿನ ಕೊರತೆ ಇದೆ. ಮದ್ಯಪಾನ ಹಾಗೂ ಇತರ ಮಾದಕ ವಸ್ತುಗಳ ಸೇವನೆಯಿಂದ ಭಾರತದಲ್ಲಿ ಯುವಜನತೆಯ ಆರೋಗ್ಯ ಹದಗೆಡುತ್ತಿದೆ.
ರಾತ್ರಿಯಲ್ಲಿ ಮೂರನೇ ಒಂದು ಭಾಗದಷ್ಟು ರಸ್ತೆ ಅಪಘಾತಗಳು ಮದ್ಯಪಾನದಿಂದ ಆಗುತ್ತಿದೆ. ನಾಲ್ಕನೇ ಒಂದು ಭಾಗದಷ್ಟು ಮಕ್ಕಳು ಮತ್ತು ಸ್ತ್ರೀಯರ ಮೇಲೆ ದೌರ್ಜನ್ಯ, ಲೈಂಗಿಕ ಕೌಟುಂಬಿಕ ಪ್ರಕರಣಗಳು ಮದ್ಯವ್ಯಸನ ಪರಿಣಾಮದಿಂದ ನಡೆಯುತ್ತಿದೆ ಎಂದು ತಿಳಿಸಿದರು.
ವಿಶ್ವ ಮಾದಕ ವಸ್ತುಗಳ ಸೇವನೆ ಮತ್ತು ಕಳ್ಳಸಾಗಾಣಿಕೆ ವಿರೋಧಿ ದಿನಾಚರಣೆ ಜಾಥಾದಲ್ಲಿ ನ್ಯಾಯಯುತ ಆರೋಗ್ಯ, ಆರೋಗ್ಯಕ್ಕಾಗಿ ನ್ಯಾಯ ಎಂಬ ಘೋಷಣೆಯೊಂದಿಗೆ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಹಲವಾರು ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಸಂತೋಷ್, ಮನೋರೋಗ ತಜ್ಞ ಡಾ.ನರೇಂದ್ರ ಎ.ಆರ್., ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಎಚ್. ಶಿವಸ್ವಾಮಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.