ಹೊಸದಿಲ್ಲಿ: ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳಲ್ಲಿನ ಸಂಸ್ಥೆಗಳು ಮತ್ತೆ ಕೊರೊನಾ ನಿಯಮ ಮರು ಜಾರಿಗೊಳಿಸುತ್ತಿವೆ. ವಿಶೇಷವಾಗಿ ಐಟಿ ಕಂಪನಿಗಳಲ್ಲಿ ಮತ್ತೆ ವರ್ಕ್ ಫ್ರಂ ಹೋಮ್ ವ್ಯವಸ್ಥೆ ಜಾರಿಗೆ ತರುವ ಸಾಧ್ಯತೆಗಳು ಇವೆ.
ಜತೆಗೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಸೇರಿದಂತೆ ಹಲವು ಕ್ರಮಗಳನ್ನು ಜಾರಿಗೆ ತರಲು ಮುಂದಾಗಿವೆ. ಈಗಾಗಲೇ ಕೆಲವು ಕಂಪನಿಗಳಲ್ಲಿ ವರ್ಕ್ ಫ್ರಂ ಹೋಮ್ ವ್ಯವಸ್ಥೆ ರದ್ದುಗೊಳ್ಳುವ ಹಂತದಲ್ಲಿದೆ.
ಜಿಂದಾಲ್ ಸ್ಟೀಲ್ ಪವರ್, ಟೆಕ್ ಮಹೀಂದ್ರಾ, ಎರಿಕ್‌ಸನ್ ಸೇರಿದಂತೆ ಹಲವು ಸಂಸ್ಥೆಗಳು ಸೋಂಕು ಪ್ರಕರಣಗಳು ಹೆಚ್ಚಾದರೆ ಅದನ್ನು ಎದುರಿಸುವ ಬಗ್ಗೆಯೂ ಈಗಿನಿಂದಲೇ ಸಿದ್ಧತೆ ನಡೆಸುತ್ತಿವೆ. ಉದ್ಯೋಗಿಗಳ ದೈಹಿಕ ತಾಪ ಮಾನ ತಪಾಸಣೆ, ನಿಯಮಿತ ಪರೀಕ್ಷೆಗಳನ್ನೂ ನಡೆಸಲು ತೀರ್ಮಾನಿಸಿವೆ. ಪರಿಸ್ಥಿತಿ ಕೈಮೀರಿದರೆ ಕಚೇರಿಯಲ್ಲಿ ಎಷ್ಟು ಮಂದಿ ಕಾರ್ಯ ನಿರ್ವಹಿಸಬೇಕು, ಹೈಬ್ರಿಡ್ ಮಾದರಿ ಜಾರಿಯ ಬಗ್ಗೆ ಕೂಡ ಪರಾಮರ್ಶೆಗಳು ನಡೆದಿವೆ.
ಹರ್ಯಾಣದಲ್ಲಿ ಮಾಸ್ಕ್ ಕಡ್ಡಾಯ
ಹರ್ಯಾಣದಲ್ಲಿ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಯಲ್ಲಿ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. 100 ಕ್ಕಿಂತ ಅಧಿಕ ಮಂದಿ ಇರುವಲ್ಲಿಗೆ, ಸಾರ್ವಜನಿಕ ಸ್ಥಳಗಳಿಗೆ ಈ ನಿಯಮ ಅನ್ವಯವಾಗಲಿದೆ. ಅದೇ ವೇಳೆ, ದೇಶದಲ್ಲಿ 3,641 ಮಂದಿಗೆ ಸೋಂಕು ದೃಢಪಟ್ಟಿದೆ. 11 ಮಂದಿ ಅಸುನೀಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.