Advertisement

ಪೊಲೀಸರಿಗೆ ಕಷ್ಟ ಭತ್ಯೆಯ ಕೊಡುಗೆ

10:55 AM Oct 20, 2019 | mahesh |

ಬೆಂಗಳೂರು: ಔರಾದ್ಕರ್‌ ವರದಿ ಜಾರಿಯಾಗಲಿದೆ ಎಂದು ಕಾಯುತ್ತಿದ್ದ ಪೊಲೀಸರಿಗೆ ರಾಜ್ಯ ಸರ್ಕಾರ ಕಷ್ಟ ಪರಿಹಾರ ಭತ್ಯೆಯ ಮೊತ್ತವನ್ನು ಹೆಚ್ಚಳ ಮಾಡುವ ಮೂಲಕ ಬೇರೊಂದು ರೂಪದಲ್ಲಿ ದೀಪಾವಳಿ ಕೊಡುಗೆ ನೀಡಿದೆ. ಪೊಲೀಸರಿಗೆ 1 ಸಾವಿರ ರೂ.ನಷ್ಟು ಕಷ್ಟ ಪರಿಹಾರ ಭತ್ಯೆಯನ್ನು ಹೆಚ್ಚಳ ಮಾಡಿದ್ದು, ಇದು ಬರುವ ನ.1ರಿಂದಲೇ ಜಾರಿಯಾಗಲಿದೆ. ಆದರೆ, ಸರ್ಕಾರದ ಈ ಕ್ರಮ ಪೊಲೀಸರಿಗೆ ಖುಷಿ ನೀಡುವ
ಬದಲು ಗೊಂದಲ ಹೆಚ್ಚಿಸಿದೆ ಎಂದೇ ಹೇಳಲಾಗುತ್ತಿದೆ.

Advertisement

ಕೆಳ ಹಂತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅನುಯಾಯಿ/ ಜಮೇದಾರ್‌ ಅನುಯಾಯಿ, ಪೊಲೀಸ್‌ ಪೇದೆ, ಮುಖ್ಯ ಪೇದೆ, ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌, ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆವರೆಗಿನ ಪೊಲೀಸ್‌ ಸಿಬ್ಬಂದಿಗೆ ಈ ಕಷ್ಟ ಪರಿಹಾರ ಭತ್ಯೆ ಹೆಚ್ಚಳ ಅನ್ವಯವಾಗಲಿದೆ. ಈ ಮೊದಲು 2 ಸಾವಿರ ರೂ. ಕಷ್ಟ ಪರಿಹಾರ ಭತ್ಯೆ ಪಡೆಯುತ್ತಿದ್ದ ಪೊಲೀಸ್‌ ಪೇದೆಗಳಿಗೂ 1 ಸಾವಿರ ಹೆಚ್ಚಳ ಮಾಡಲಾಗಿದೆ.

ವೇತನ ಪರಿಷ್ಕರಣೆವರೆಗೆ ಜಾರಿ: ಪೊಲೀಸ್‌ ಇನ್ಸ್‌ ಪೆಕ್ಟರ್‌ ವೃಂದಕ್ಕೆ 1 ಸಾವಿರ ವಿಶೇಷ ಭತ್ಯೆಯನ್ನು ಮುಂದಿನ ವೇತನ ಪರಿಷ್ಕರಣೆವರೆಗೂ ಮಂಜೂರು ಮಾಡುವುದಾಗಿ ತಿಳಿಸಲಾಗಿದೆ. ಆದರೆ, ಈ ವಿಶೇಷ ಕಷ್ಟ ಪರಿಹಾರ ಭತ್ಯೆಯು ನಿಯೋಜನೆ ಮೇಲೆ
ತೆರಳುವ ಮತ್ತು ನಿಯೋಜನೆ ಭತ್ಯೆ ಅಥವಾ ಸಂಬಂಧಿತ ಇಲಾಖೆ ಹುದ್ದೆಗಳಿಗೆ ಅನ್ವಯಿಸುವ ವಿಶೇಷ ಭತ್ಯೆ ಪಡೆಯುತ್ತಿರುವವರಿಗೆ ಅನ್ವಯವಾಗುವುದಿಲ್ಲ. ಕಷ್ಟ ಪರಿಹಾರ ಭತ್ಯೆಯನ್ನು ಮುಂದಿನ ವೇತನ ಪರಿಷ್ಕರಣೆ ಅಥವಾ ಮುಂದಿನ ಆದೇಶಗಳವರೆಗೆ ಮಾತ್ರ ನೀಡಲು ಸರ್ಕಾರ ನಿರ್ಧರಿಸಿದೆ. ಜತೆಗೆ ವಿಶೇಷ
ಕಷ್ಟ ಪರಿಹಾರ ಭತ್ಯೆ ಸಂಬಂಧ ಹಿಂದೆ ನೀಡಲಾಗಿದ್ದ ಎಲ್ಲ ಆದೇಶಗಳನ್ನು ರದ್ದು ಮಾಡಿ, ಈಗ ಹೊಸದಾಗಿ ಆದೇಶ ಹೊರಡಿಸಲಾಗಿದೆ.

ಪೊಲೀಸರಿಗೆ ಗೊಂದಲ: ರಾಜ್ಯ ಸರ್ಕಾರ ಏಕಾಏಕಿ ಕಷ್ಟ ಪರಿಹಾರ ಭತ್ಯೆಯನ್ನು ಹೆಚ್ಚಳ ಮಾಡಿರುವುದು ಪೊಲೀಸ್‌ ಸಿಬ್ಬಂದಿಗೆ ಗೊಂದಲ ಉಂಟು ಮಾಡಿದೆ. ರಾಜ್ಯ ಪೊಲೀಸರ ವೇತನ ಪರಿಷ್ಕರಣೆಗೆ ಎಡಿಜಿಪಿ ರಾಘವೇಂದ್ರ ಔರಾದ್ಕರ್‌ ಅವರು ನೀಡಿದ್ದ ವರದಿ ದೀಪಾವಳಿಗೆ ಜಾರಿಯಾಗುತ್ತದೆ ಎಂದು ಕಾದು ಕುಳಿತಿದ್ದ ಪೊಲೀಸ್‌ ಸಿಬ್ಬಂದಿಗೆ ಸರ್ಕಾರದ ಆದೇಶ ಒಂದು ರೀತಿಯಲ್ಲಿ ಆಶ್ಚರ್ಯವನ್ನುಂಟು ಮಾಡಿದೆ ಎಂದು ಹೇಳಲಾಗುತ್ತಿದೆ.

ಔರಾದ್ಕರ್‌ ವರದಿ ಜಾರಿ ನಿರೀಕ್ಷೆ: ನೆರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿರುವ ಪೊಲೀಸರಿಗೆ ಇರುವ ವೇತನ ಮತ್ತು ಸವಲತ್ತು ತೀರಾ ಕಡಿಮೆ ಎಂಬ ಕಾರಣಕ್ಕೆ 2016ರಲ್ಲಿ ಆಗಿನ ಕಾಂಗ್ರೆಸ್‌ ಸರ್ಕಾರ, ಎಡಿಜಿಪಿ ರಾಘವೇಂದ್ರ ಔರಾದ್ಕರ್‌ ಅವರ ನೇತೃತ್ವದಲ್ಲಿ ವೇತನ ಪರಿಷ್ಕರಣೆಗಾಗಿ ಸಮಿತಿ ರಚಿಸಿತ್ತು. ಈ ಸಮಿತಿಯು ವೇತನ ಪರಿಷ್ಕರಣೆಗೆ ಶಿಫಾರಸು ಮಾಡಿ ವರದಿಯನ್ನೂ ಸಲ್ಲಿಸಿತ್ತು. ಇದನ್ನು
ಜಾರಿ ಮಾಡುವಷ್ಟರಲ್ಲೇ ಸಿದ್ದರಾಮಯ್ಯ ಸರ್ಕಾರದ ಅವಧಿ ಮುಗಿದಿತ್ತು. ನಂತರ ಬಂದ ಕುಮಾರಸ್ವಾಮಿ ಸರ್ಕಾರ ವರದಿ ಜಾರಿಗೆ ಯತ್ನಿಸಿತು. ನಡುವೆಯೇ ಆಗಿನ ಸಿಎಂ ಕುಮಾರಸ್ವಾಮಿ 1 ಸಾವಿರ ರೂ.ಗಳ ಕಷ್ಟ ಪರಿಹಾರ ಭತ್ಯೆ ಬಗ್ಗೆ ಘೋಷಣೆ ಮಾಡಿದ್ದರು. ಹಿಂದಿನ ಗೃಹ ಸಚಿವ ಎಂ.ಬಿ. ಪಾಟೀಲರು ವೇತನ ಪರಿಷ್ಕರಣೆಗೆ ಯತ್ನ ಮಾಡಿದ್ದರು. ಇದರ ನಡುವೆಯೇ ಸಮ್ಮಿಶ್ರ ಸರ್ಕಾರವೂ ಪತನ ಹೊಂದಿತು. ಹಾಲಿ ಸರ್ಕಾರವೂ ವೇತನ ಪರಿಷ್ಕರಣೆ ಬಗ್ಗೆ ಹೇಳುತ್ತಲೇ, ಕಷ್ಟ ಪರಿಹಾರ ಭತ್ಯೆ ಹೆಚ್ಚಿಸಿರುವುದು ಪೊಲೀಸರಲ್ಲಿ ಕೆಲವು ಅನುಮಾನಗಳಿಗೆ ಕಾರಣವಾಗಿದೆ ಎಂದೇ ಹೇಳಲಾಗುತ್ತಿದೆ.

Advertisement

ಏನಿದು ಕಷ್ಟ ಪರಿಹಾರ ಭತ್ಯೆ?
ಪೊಲೀಸ್‌ ಇಲಾಖೆಯ ವಿವಿಧ ವೃಂದಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಕಷ್ಟ ಸಂದರ್ಭಕ್ಕೆ ಅನುಕೂಲವಾಗಲೆಂದು 2016 ರ ಡಿಸೆಂಬರ್‌ನಲ್ಲಿ ಕಷ್ಟ ಪರಿಹಾರ ಭತ್ಯೆಯನ್ನು ಜಾರಿಗೆ ತರಲಾಗಿದೆ. ಅದರಂತೆ ಕೆಳ ಹಂತದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್‌ ಸಿಬ್ಬಂದಿಗೆ ಒಂದು ಸಾವಿರ ರೂ. ಕಷ್ಟ
ಪರಿಹಾರ ಭತ್ಯೆ ನೀಡಲಾಗುತ್ತಿದೆ.

– ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next