Advertisement

ಸರ್ಕಾರಿ ಶಾಲಾ ದಾಖಲಾತಿ ಹೆಚ್ಚಿಸಿ

03:38 PM May 15, 2019 | Team Udayavani |

ಕೋಲಾರ: ಪೋಷಕರ ಆಶಯಗಳಿಗೆ ತಕ್ಕಂತೆ ಪ್ರಸ್ತುತ ಶೈಕ್ಷಣಿಕ ಸಾಲಿನಿಂದ ಆಯ್ದ 24 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಗೊಳ್ಳುತ್ತಿದ್ದು, ದಾಖಲಾತಿ ಹೆಚ್ಚಳಕ್ಕೆ ಶಿಕ್ಷಕರು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಡಯಟ್ ಪ್ರಾಂಶುಪಾಲ ವಿಕ್ಟರ್‌ ಸಲಹೆ ನೀಡಿದರು.

Advertisement

ನಗರ ಹೊರವಲಯದ ಶಿಕ್ಷಣ ತರಬೇತಿ ಸಂಸ್ಥೆ(ಡಯಟ್)ನಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸುತ್ತಿರುವ ಶಾಲೆಗಳ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ (ಇಎಂಟಿಐಪಿ) ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಮಾನ ಶಿಕ್ಷಣದ ಧ್ಯೇಯದೊಂದಿಗೆ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಮಾತೃಭಾಷೆಗೆ ಧಕ್ಕೆ ಬಾರದ ರೀತಿಯಲ್ಲಿ ಇಂಗ್ಲಿಷ್‌ ಮಾಧ್ಯಮಕ್ಕೆ ಅವಕಾಶ ನೀಡಲು ಮುಂದಾಗಿದೆ ಎಂದು ಹೇಳಿದರು.

ಪೋಷಕರ ಆಶಯದಂತೆ ಜಿಲ್ಲೆಯಲ್ಲಿ 24 ಶಾಲೆಗಳಲ್ಲಿ ಪ್ರಥಮವಾಗಿ ಇಂಗ್ಲಿಷ್‌ ಮಾಧ್ಯಮ ತೆರೆಯಲು ಅನುಮತಿ ನೀಡಲಾಗಿದೆ, ಈ ಶಾಲೆಗಳು ಮಾದರಿ ಶಾಲೆಗಳಾಗಿ ಮಕ್ಕಳ ದಾಖಲಾತಿ ಹೆಚ್ಚಳದೊಂದಿಗೆ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯಬೇಕು ಎಂದು ಸಲಹೆ ನೀಡಿದರು.

ಆಂಗ್ಲ ಮಾಧ್ಯಮ ಆರಂಭ: ಈಗಾಗಲೇ ನವೋದಯ, ಅದರ್ಶ, ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಸಿಗುತ್ತಿದೆ. ಈ ಶಾಲೆಗಳು 6ನೇ ತರಗತಿಯಿಂದ ಪ್ರಾರಂಭಗೊಳ್ಳುತ್ತವೆ ಎಂದ ಅವರು, ಇತರೆ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ಆರಂಭಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ಜವಾಬ್ದಾರಿ ನಿರ್ವಹಿಸಿ: ಶಿಕ್ಷಕರು ತರಬೇತಿಯಲ್ಲಿ ತಮಗಿರುವ ಗೊಂದಲಗಳನ್ನು ಪರಿಹರಿಸಿಕೊಂಡು ಆಂಗ್ಲ ಮಾಧ್ಯಮದಲ್ಲಿ ಪರಿಣಾಮಕಾರಿಯಾಗಿ ಬೋಧನೆ ನೀಡುವ ಸಾಮರ್ಥ್ಯ ಪಡೆದುಕೊಳ್ಳಬೇಕು, ಕಲಿಕಾ ತಂತ್ರಗಳನ್ನು ಬಳಸಿಕೊಂಡು ಬೋಧಿಸುವ ನಿಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.

Advertisement

ಖಾಸಗಿ ಶಾಲೆಗಳ ಪೈಪೋಟಿಯಲ್ಲಿ ಸರ್ಕಾರಿ ಶಾಲೆಗಳಿಗೆ ಉಳಿಗಾಲವಿಲ್ಲ ಎಂದ ಆತಂಕವಿದೆ, ಈ ಅಂತಕವನ್ನು ದೂರಮಾಡಿ, ಸರ್ಕಾರಿ ಶಾಲೆಗಳಲ್ಲೂ ಪೋಷಕರ ಆಶಯಗಳಿಗೆ ತಕ್ಕಂತೆ ಬೋಧನೆ ಸಿಕ್ಕರೆ ಅವರೇ ನಮ್ಮತ್ತ ಬರುತ್ತಾರೆ ಎಂದು ಸಲಹೆ ನೀಡಿದರು.

ಸರ್ಕಾರಿ ಶಾಲೆ ಮುಚ್ಚಿದರೆ ಬೆಲೆ ಇರಲ್ಲ: ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ವಿ.ಜಗನ್ನಾಥ್‌, ಸರ್ಕಾರದ ಆಶಯಗಳಿಗೆ ತಕ್ಕಂತೆ ದಾಖಲಾತಿ ಹೆಚ್ಚಳಕ್ಕೆ ಶಿಕ್ಷಕರಾದ ನಮ್ಮ ಪ್ರಯತ್ನ ಅತಿ ಮುಖ್ಯವಾಗಿದೆ. ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವೂ ಆಗಿದೆ. ಸರ್ಕಾರಿ ಶಾಲೆ ಮುಚ್ಚಿದರೆ ಸಮಾಜದಲ್ಲಿ ಸಮಾನ ಶಿಕ್ಷಣಕ್ಕೆ ಬೆಲೆಯೇ ಇಲ್ಲವಾಗುತ್ತದೆ ಎಂದು ಎಚ್ಚರಿಸಿದರು.

ಸರ್ಕಾರ ಕಾಲಕಾಲಕ್ಕೆ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಗೆ ಅನುಗುಣವಾಗಿ ಸರ್ಕಾರಿ ಶಾಲೆಗಳಲ್ಲೂ ಶಿಕ್ಷಣದ ಕಲಿಕಾ ವಿಧಾನ ಬದಲಿಸಲು ಕ್ರಮ ಕೈಗೊಳ್ಳಬೇಕು, ಶಿಕ್ಷಕರಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಮನವಿ ಮಾಡಿದರು.

ಸರ್ಕಾರಿ ಶಾಲೆಗಳಲ್ಲೂ ಸೌಲಭ್ಯ ಕಲ್ಪಿಸಿ: ಶಿಕ್ಷಣ ಸಂಯೋಜಕ ಆರ್‌.ಶ್ರೀನಿವಾಸನ್‌, ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಅಭಿವೃದ್ಧಿಗೆ ಸರ್ಕಾರ ನೀಡುವ ಅನುದಾನಗಳ ಜತೆಗೆ ಆಯಾ ವ್ಯಾಪ್ತಿಯ ದಾನಿಗಳು, ಕಂಪನಿಗಳ ಸಹಕಾರ ಪಡೆಯಬೇಕು, ಖಾಸಗಿ ಶಾಲೆಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳು ಸರ್ಕಾರಿ ಶಾಲೆಯಲ್ಲಿ ಸಿಗುವ ವಾತಾವರಣ ನಿರ್ಮಿಸಿ ಪೋಷಕರ ಮನವೊಲಿಸಿ ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಕ್ರಮವಹಿಸಬೇಕು ಎಂದರು.

ಸರ್ಕಾರಿ ಶಾಲೆಗಳಲ್ಲಿನ ಮಕ್ಕಳನ್ನು ನಮ್ಮ ಮಕ್ಕಳಂತೆ ಭಾವಿಸಿ ಅವರಿಗೆ ಸರ್ಕಾರದ ಎಲ್ಲಾ ಸೌಲಭ್ಯ ಗುಣಮಟ್ಟದ ಶಿಕ್ಷಣ ಸಿಗುವಂತೆ ಮಾಡುವ ಗುರುತರ ಜವಾಬ್ದಾರಿ ನಮ್ಮ ಮೇಲಿದ್ದು, ಅದನ್ನು ಬದ್ಧತೆಯಿಂದ ನಿರ್ವಹಿಸಿ ಎಂದರು.

ಕಾರ್ಯಕ್ರಮದಲ್ಲಿ ಡಯಟ್ ಹಿರಿಯ ಉಪನ್ಯಾಸಕರಾದ ನಾಗವೇಣಿ, ಸದಾನಂದಮೂರ್ತಿ, ಸೈಯದ್‌ ಸಮೀವುಲ್ಲಾ, ಸಂಪನ್ಮೂಲ ವ್ಯಕ್ತಿಗಳಾದ ಅನುಪಮಾ ಗ್ಲಾಡಿಸ್‌ಪೌಲ್, ಸೋಪಿಯಾ, ವಿ.ಸುಬ್ರಮಣಿ, ಬೈರೇಗೌಡ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next