ಸೇಡಂ: ಶೋಷಣೆಮುಕ್ತ ಸಮಾಜ ನಿರ್ಮಾಣವಾಗಬೇಕಾದರೆ ಮಹಿಳಾ ಸಾಕ್ಷರತೆ ಪ್ರಮಾಣ ಹೆಚ್ಚಾಗಬೇಕು ಎಂದು ಕಂಪ್ಯೂಸಿಸ್ ಪಾಯಿಂಟ್ ತರಬೇತಿ ಕೇಂದ್ರದ ನಿರ್ದೇಶಕಿ ತನುಜಾ ಐನಾಪುರ ಹೇಳಿದರು.
ಪಟ್ಟಣದ ನೃಪತುಂಗ ಪದವಿ ಮಹಾ ವಿದ್ಯಾಲಯದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕುಟುಂಬದ ಹೊಣೆ ಹೊತ್ತು ಅನೇಕ ಮಹಿಳೆಯರು ಸಾಧನೆ ಮಾಡಿದ್ದಾರೆ. ಈ ಮೂಲಕ ತಮ್ಮದೇ ಆದ ಕೊಡುಗೆಯನ್ನು ಸಮಾಜಕ್ಕೆ ನೀಡುತ್ತಿದ್ದಾರೆ.
ಮನೋಬಲ ಸದೃಢವಾಗಿಟ್ಟುಕೊಂಡು ಸದಾಕಾಲ ಮುನ್ನುಗ್ಗುತ್ತಿದ್ದರೆ ದೇಶದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ, ಅತ್ಯಾಚಾರ, ಅನಾಚಾರ ತಡೆಯಬಹುದು ಎಂದರು.
ನರ್ಮದಾದೇವಿ ಗಿಲಡಾ ಮಹಿಳಾ ಕಾಲೇಜು ಉಪನ್ಯಾಸಕಿ ಆರತಿ ಕಡಗಂಚಿ ಮಾತನಾಡಿ, ದೇಶದಲ್ಲಿ ಅನೇಕ ಮಹಿಳೆಯರು ತಮ್ಮ ಸಾಧನೆಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ಜೀವನ ನಮಗೆ ಆದರ್ಶವಾಗಬೇಕು ಎಂದರು. ಪ್ರೊ| ಶೋಭಾದೇವಿ ಚೆಕ್ಕಿ ಸ್ವಾಗತಿಸಿದರು. ಪ್ರಾಚಾರ್ಯ ಡಾ| ಶಶಿಕಾಂತ ಕುಲಕರ್ಣಿ, ಕು. ಸುಹಾಸಿನಿ ಪ್ರಾರ್ಥಿಸಿದರು. ಕು. ಪಲ್ಲವಿ ನಿರೂಪಿಸಿದರು. ಕು. ದೀಪಿಕಾ ಡಾಗಾ ವಂದಿಸಿದರು.
ರಾಜಶ್ರೀ ಕಾರ್ಖಾನೆಯಲ್ಲೂ ಸಂಭ್ರಮ: ತಾಲೂಕಿನ ಮಳಖೇಡದ ರಾಜಶ್ರೀ ಸಿಮೆಂಟ್ ಕಾರ್ಖಾನೆಯಲ್ಲೂ ಅದ್ಧೂರಿಯಾಗಿ ಮಹಿಳಾ ದಿನ ಆಚರಿಸಲಾಯಿತು. ಗ್ರಾಮದ ಸುತ್ತಮುತ್ತಲಿನ ನೀಲಹಳ್ಳಿ, ಹಂಗನಹಳ್ಳಿ, ಸ್ಟೇಷನ್ ತಾಂಡಾ, ಹೂಡಾ ಸ್ತ್ರೀ ಶಕ್ತಿ ಸಂಘಗಳ ಮಹಿಳಾ ಸದಸ್ಯರಿಗೆ ಕಬಡ್ಡಿ, ಖೋಖೊ, ಓಟ, ಗನ್ನಿ ಬ್ಯಾಗ್, ನಿಂಬೆಹಣ್ಣು ಚಮಚದಲ್ಲಿಟ್ಟುಕೊಂಡು ನಡೆಯುವ ಪಂದ್ಯಗಳನ್ನು ಏರ್ಪಡಿಸಲಾಗಿತ್ತು.
ಆದಿತ್ಯ ಬಿರ್ಲಾ ಪಬ್ಲಿಕ್ ಶಾಲೆಯ ಪ್ರಾಚಾರ್ಯೆ ರಿಂಕು ಬೆನರ್ಜಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಘಟಕ ಅಧ್ಯಕ್ಷ ಸೂರ್ಯ ವೆಳ್ಳುರಿ, ಸರ್ವಮಂಗಳ ಲೇಡಿಸ್ ಕ್ಲಬ್ ಅಧ್ಯಕ್ಷ ಸುನೀತಾ ವೆಳ್ಳುರಿ, ಜರಾಡ್ ರೋಡ್ರಿಕ್ಸ್, ವಿಜಯ ಮಾಲಿ ಮತ್ತಿತರರು ಇದ್ದರು.