Advertisement

ನಕಲು ತಡೆಯಿಂದ ಶಿಕ್ಷಣ ಗುಣಮಟ್ಟ ಹೆಚ್ಚಳ

10:47 AM Jan 12, 2018 | Team Udayavani |

ಕಲಬುರಗಿ: ಕಲಬುರಗಿ ವಿಭಾಗದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳನ್ನು ನಕಲು ರಹಿತವಾಗಿ ನಡೆಸುವುದರಿಂದ ಶಿಕ್ಷಣದ ಗುಣಮಟ್ಟ ಹೆಚ್ಚಲಿದೆ. ಈ ನಿಟ್ಟಿನಲ್ಲಿ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ತಿಳಿಸಿದರು.

Advertisement

ಕಲಬುರಗಿ ವಿಭಾಗದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್‌ ನಡೆಸಿ ಸೂಚನೆ ನೀಡಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಲು ಅನುಕೂಲವಾಗುವ ಹಾಗೆ ಹೈ. ಕ.ಪ್ರ.ಅ. ಮಂಡಳಿಯಿಂದ ವಿದ್ಯಾರ್ಥಿಗಳಿಗೆ ಪಾಸಿಂಗ್‌ ಪ್ಯಾಕೇಜ್‌ ಜನವರಿ ಅಂತ್ಯದೊಳಗೆ ಸರಬರಾಜು ಮಾಡಲಾಗುವುದು ಎಂದರು. 

ಶಿಕ್ಷಕರ ಕೊರತೆ ನೀಗಿಸಲು ಈಗಾಗಲೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇನ್ನು ಹೆಚ್ಚಿನ ಬೇಡಿಕೆ ಇದ್ದಲ್ಲಿ ಭರ್ತಿ ಮಾಡಿಕೊಳ್ಳಲು ಆದೇಶ ನೀಡಲಾಗುವುದು. ವಿದ್ಯಾರ್ಥಿಗಳು ಸಂಜೆ, ರಾತ್ರಿ ಸಮಯದಲ್ಲಿ ಶಾಲೆಗಳಲ್ಲಿ ಓದಲು ಅನುಕೂಲವಾಗುವ ಹಾಗೆ ವಾತಾವರಣ ನಿರ್ಮಿಸಿಕೊಡಬೇಕು. ಎಚ್‌.ಕೆ.ಆರ್‌.ಡಿ.ಬಿ. ಯಿಂದ ಮುಂದಿನ ತಿಂಗಳು ಎಸ್ಸೆಸ್ಸೆಲ್ಸಿ ಅಣುಕು ಪರೀಕ್ಷೆ ನಡೆಸಲಾಗುವುದು ಎಂದರು. 

ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ನೀಟ್‌ ಮತ್ತು ಸಿಇಟಿ ಕೋಚಿಂಗ್‌ ಪ್ರಾರಂಭಿಸಲಾಗುವುದು. ದ್ವಿತೀಯ
ಪಿಯುಸಿಯಲ್ಲಿ ಪ್ರಥಮ 100 ಸ್ಥಾನ ಗಳಿಸುವ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಖಾಸಗಿ ಕಾಲೇಜುಗಳಲ್ಲಿ ನೀಟ್‌, ಸಿಇಟಿ ತರಬೇತಿ ಕೊಡಿಸಲಾಗುವುದು. ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳು ಉತ್ತಮ ಶೈಕ್ಷಣಿಕ ಗುಣಮಟ್ಟ ಹೊಂದಿರುವ ಖಾಸಗಿ ಪಿ.ಯು. ಕಾಲೇಜುಗಳನ್ನು ಗುರುತಿಸಿ ಪಟ್ಟಿ ಸಲ್ಲಿಸಲು ತಿಳಿಸಿದರು.

ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮೂಲಭೂತ ಸೌಕರ್ಯಗಳ ಕುರಿತು, ಜಿಲ್ಲಾಧಿಕಾರಿಗಳು ಪಿ.ಯು., ಪದವಿ ಹಾಗೂ ತಾಂತ್ರಿಕ
ಶಿಕ್ಷಣದ ಮೂಲಭೂತ ಸೌಕರ್ಯಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸಬೇಕು. ಅಂಗನವಾಡಿಗಳು ಸ್ವಂತ ಕಟ್ಟಡ ಹೊಂದುವಂತೆ ಗುರಿಯನ್ನಾಗಿಸಬೇಕು ಎಂದರು.

Advertisement

ವಿಡಿಯೋ ಕಾನ್ಫರೆನ್ಸ್‌ನಲ್ಲಿ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಜಹೀರಾ ನಸೀಮ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಹಾಗೂ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಹಾಯವಾಣಿ ಸ್ಥಾಪನೆಗೆ ಸೂಚನೆ
ವಿಭಾಗದಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಬೂತ್‌ ಮಟ್ಟದ ಅಧಿಕಾರಿಗಳು
ಮತದಾರರ ಪಟ್ಟಿಯ ಲೋಪದೋಷ ನಿವಾರಣೆಗೆ ಮನೆ ಮನೆಗೆ ಭೇಟಿ ನೀಡಿ ಫಾರಂ ನಂ. 6,7,8 ಗಳನ್ನು ಭರ್ತಿ ಮಾಡಿ ಸಂಗ್ರಹಿಸಬೇಕಾಗಿದೆ. ಪ್ರತಿ 10-15 ಬೂತ್‌ ಮಟ್ಟದ ಅಧಿಕಾರಿಗಳ ಮೇಲೆ ನಿಗಾವಹಿಸಲು ಸೆಕ್ಟರ್‌  ಆಫೀಸರ್‌ಗಳನ್ನು ನೇಮಕ ಮಾಡಿ ಕ್ರಮ ಕೈಗೊಳ್ಳಬೇಕು. ಪ್ರತಿ ಮತಕ್ಷೇತ್ರದಲ್ಲಿ ಮತದಾರರು ದೂರು ದಾಖಲಿಸಲು 1077 ಸಂಖ್ಯೆಯ ಉಚಿತ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next