ಕಾಸರಗೋಡು: ಕಾನೂನು ಬಾಹಿರಕೃತ್ಯಗಳಿಗೆ ಬಳಸಲಾದ ಆರೋಪದಲ್ಲಿ ಅಧಿಕಾರಿಗಳು ವಶಪಡಿಸಿರುವ ವಾಹನಗಳನ್ನು ಶಾಶ್ವತವಾಗಿ ನಿಲುಗಡೆ ನಿಲ್ಲಿಸಲಾಗುತ್ತಿರುವುದು ಜಿಲ್ಲೆಯ ಬಹುತೇಕ ಸರಕಾರಿ ಕಚೇರಿ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಕಂಡುಬರುತ್ತಿದ್ದು, ಇದರ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ.
ಈ ಸಂಬಂಧ ಪೊಲೀಸ್, ಅಬಕಾರಿ, ಕಂದಾಯ, ಅರಣ್ಯ ಇಲಾಖೆಗಳ ಸಭೆಯನ್ನು ಜಿಲ್ಲಾಧಿಕಾರಿ ನಡೆಸಿದ್ದು, ಕೈಗೊಳ್ಳುವ ಕ್ರಮದ ಮೊದಲ ಹಂತವಾಗಿ 257 ವಾಹನಗಳ ಹರಾಜಿಗೆ ಸಿದ್ಧತೆ ನಡೆದಿದೆ.
ಅಕ್ರಮ ಮರಳು ಸಾಗಣೆ, ಮಾದಕ ಪದಾರ್ಥಗಳ ಸಾಗಾಟ ಸಹಿತ ಪ್ರಕರಣಗಳಲ್ಲಿ ಬಳಕೆಯಾದ ಆರೋಪದಲ್ಲಿ ವಾಹನಗಳು ಇಲ್ಲಿ ನಿಲುಗಡೆಗೊಂಡಿವೆ. ಕಾನೂನು ರೀತಿಯ ದಂಡ ಪಾವತಿಸಿ ಮಾಲಕರು ವಾಹನಗಳನ್ನು ಮರಳಿ ಪಡೆಯಬಹುದಾದರೂ, ಬಹುತೇಕ ಮಾಲಕರು ಈ ಬಗ್ಗೆ ಆಸಕ್ತಿ ತೋರುತ್ತಿಲ್ಲ. ಇದು ಸಮಸ್ಯೆಗೆ ಕಾರಣವಾಗುತ್ತಿತ್ತು. ದಾಖಲೆಗಳಿಲ್ಲದ ವಾಹನಗಳನ್ನು ಮೊದಲ ಹಂತವಾಗಿ ಹರಾಜು ಮಾಡಲಾಗುವುದು. ನಂತರ ಉಳಿದ ವಾಹನಗಳ ಮಾಲಕರ ಮಾಹಿತಿ ಸಂಗ್ರಹಿಸಿ ಕಾನೂನು ಕ್ರಮಕೈಗೊಳ್ಳಲಾಗುವುದು.ಜಿಲ್ಲೆಯಲ್ಲಿ ಮೊದಲ ಬಾರಿಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ವಾಹನಗಳ ಹರಾಜು ನಡೆಸಲಾಗುತ್ತಿದೆ. ಮಾಲೀಕರು ಬಯಸುವುದಿದ್ದಲ್ಲಿ ತಮ್ಮ ವಾಹನ ಮರಳಿ ಪಡೆಯಲು 30 ದಿನಗಳ ಕಾಲಾವ ಒದಗಿಸಲಾಗಿದೆ. ವಾಹನಗಳ ಮಾಹಿತಿ ಜಿಲ್ಲಾಡಳಿತದ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ.
ವಾಹನಗಳ ಈ ರೀತಿ ನಿಲುಗಡೆ ನಡೆಸುತ್ತಿರುವ ಕ್ರಮದಿಂದಾಗಿ ಕಚೇರಿ ಸಿಬಂದಿ ಮತ್ತು ಸಾರ್ವ ಜನಿಕರಿಗೆ ತೊಂದರೆ ಯಾಗುತ್ತಿರುವ ಹಿನ್ನೆಲೆಯನ್ನು ಗಂಭೀರವಾಗಿ ಪರಿಶೀಲಿಸಿರುವ ಜಿಲ್ಲಾ ಧಿಕಾರಿ ಡಾ| ಡಿ. ಸಜಿತ್ ಬಾಬು ಈ ಸಾಲಿನ ವಾಹನಗಳನ್ನು ಕಾನೂನು ಕ್ರಮಗಳ ಪೂರೈಕೆ ನಂತರ ಬಹಿರಂಗ ಹರಾಜು ನಡೆಸುವ ಬಗ್ಗೆ ಆದೇಶ ನೀಡಿದ್ದಾರೆ.