Advertisement

ಗರ್ಭಪಾತ ಅವಧಿಯ ಮಿತಿ ಹೆಚ್ಚಳ : ಕಾನೂನಿಗೆ ತಿದ್ದುಪಡಿ ಸ್ವಾಗತಾರ್ಹ

09:51 AM Feb 01, 2020 | sudhir |

ಅಪ್ರಾಪ್ತ ವಯಸ್ಸಿನವರು ತಮ್ಮದಲ್ಲದ ತಪ್ಪಿನಿಂದ ಗರ್ಭವತಿಯಾದರೆ ಕೆಲವೊಮ್ಮೆ 20 ವಾರಗಳ ಬಳಿಕವೇ ತಿಳಿಯುತ್ತದೆ. ಇಂಥ ಸಂದರ್ಭದಲ್ಲಿ ಈ ಅನಪೇಕ್ಷಿತ ಗರ್ಭವನ್ನು ತೆಗೆಸಲು ಕಾನೂನು ಅಡ್ಡಿಯಾಗುತ್ತಿತ್ತು.

Advertisement

ಕಾನೂನು ಸಮ್ಮತ ಗರ್ಭಪಾತದ ಅವಧಿಯನ್ನು 20 ವಾರಗಳಿಂದ 24 ವಾರಕ್ಕೇರಿಸುವ ಮಸೂದೆಗೆ ಕೇಂದ್ರ ಸಂಪುಟದ ಅನುಮತಿ ಸಿಕ್ಕಿದೆ. ಮಹಿಳೆಯರ ಮತ್ತು ವೈದ್ಯಕೀಯ ಲೋಕದ ಬಹುಕಾಲದ ಬೇಡಿಕೆಯನ್ನು ಈ ಮೂಲಕ ಈಡೇರಿಸಲು ಸರಕಾರ ಮುಂದಾಗಿದೆ.

ಭಾರತದಲ್ಲಿ ವೈದ್ಯಕೀಯವಾಗಿ 20 ವಾರಗಳೊಳಗಿನ ಗರ್ಭವನ್ನು ಮಾತ್ರ ತೆಗೆಯಲು ಅನುಮತಿಯಿತ್ತು. ಇದರಿಂದ ಅತ್ಯಾಚಾರ ಸಂತ್ರಸ್ತೆಯರಿಗೆ, ಅಂಗವಿಕಲ, ಬುದ್ಧಿಮಾಂದ್ಯ ಯುವತಿಯರಿಗೆ ಸಂಕಷ್ಟವಾಗುತ್ತಿತ್ತು. ಅಪ್ರಾಪ್ತ ವಯಸ್ಸಿನವರು ತಮ್ಮದಲ್ಲದ ತಪ್ಪಿನಿಂದ ಗರ್ಭವತಿಯಾದರೆ ಕೆಲವೊಮ್ಮೆ 20 ವಾರಗಳ ಬಳಿಕವೇ ತಿಳಿಯುತ್ತದೆ. ಇಂಥ ಸಂದರ್ಭದಲ್ಲಿ ಈ ಅನಪೇಕ್ಷಿತ ಗರ್ಭವನ್ನು ತೆಗೆಸಲು ಕಾನೂನು ಅಡ್ಡಿಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ವೈದ್ಯಕೀಯವಾಗಿ ಗರ್ಭಪಾತ ಮಾಡಿಕೊಳ್ಳುವ ಅವಧಿಯ ಮಿತಿಯನ್ನು ಹೆಚ್ಚಿಸಬೇಕೆಂಬ ಬೇಡಿಕೆಯಿತ್ತು.

ಈ ಬೇಡಿಕೆ ಈಡೇರಲು ಕಾರಣವಾಗಿದ್ದು ಗುಜರಾತ್‌ನ ವಿವಾಹಿತ ಮಹಿಳೆಯೊಬ್ಬರ ಪ್ರಕರಣ. ಗರ್ಭದಲ್ಲಿರುವ ಮಗುವಿಗೆ ಗಂಭೀರವಾದ ಹೃದಯ ಸಂಬಂಧಿ ಸಮಸ್ಯೆಯಿದೆ ಎಂದು ತಿಳಿದು ಬಂದ ಬಳಿಕ ಗಂಡ ಮತ್ತು ಹೆಂಡತಿ ಸಮಾಲೋಚನೆ ಮಾಡಿ ಗರ್ಭಪಾತ ಮಾಡಿಸಿಕೊಳ್ಳಲು ನಿರ್ಧರಿಸುತ್ತಾರೆ. ಆದರೆ ಅದಾಗಲೇ ಗರ್ಭಕ್ಕೆ 23 ವಾರವಾಗಿದ್ದ ಕಾರಣ ವೈದ್ಯರು ಗರ್ಭಪಾತ ಮಾಡಲು ಒಪ್ಪುವುದಿಲ್ಲ. ಈ ದಂಪತಿ ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ನ್ಯಾಯಾಲಯದಿಂದ ಅವರಿಗೆ ಅನುಕೂಲಕರವಾದ ತೀರ್ಪು ಬರದಿದ್ದರೂ ಜನಿಸಲಿರುವ ಮಗುವಿನ ಬೆಳವಣಿಗೆ ಸಮರ್ಪಕವಾಗಿಲ್ಲ ಎಂದು ತಿಳಿದ ಬಳಿಕವೂ ಅದನ್ನು ಉಳಿಸಿಕೊಳ್ಳಬೇಕೆ ಅಥವಾ ಬೇಡವೇ ಎಂದು ತೀರ್ಮಾನಿಸುವ ಹಕ್ಕು ಯಾರದ್ದು ಎಂಬ ಚರ್ಚೆಗೆ ಈ ಪ್ರಕರಣ ನಾಂದಿಯಾಗಿತ್ತು. ಈ ಪ್ರಕರಣದ ಹಿನ್ನೆಲೆಯಲ್ಲೇ ಕಾನೂನು ಸಮ್ಮತ ಗರ್ಭಪಾತದ ಅವಧಿಯನ್ನು ಹೆಚ್ಚಿಸಬೇಕೆಂಬ ವಿಚಾರ ಮುನ್ನೆಲೆಗೆ ಬಂದಿತ್ತು.ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ಅತ್ಯಾಚಾರಕ್ಕೊಳಗಾಗಿ ಗರ್ಭ ಧರಿಸಿದ ಪ್ರಕರಣದಲ್ಲೂ ಈ ಕಾನೂನು ದೊಡ್ಡ ಅಡಚಣೆಯಾಗಿತ್ತು. ಅನಂತರ ಇದನ್ನು ಸುಪ್ರೀಂ ಕೋರ್ಟ್‌ ಇತ್ಯರ್ಥಪಡಿಸಬೇಕಾಯಿತು. ಭಾರತ ಎಂದಲ್ಲ ಹಲವು ದೇಶಗಳಲ್ಲಿ ಗರ್ಭಪಾತಕ್ಕೆ ಸಂಬಂಧಿಸಿದಂತೆ ಇಂಥ ಜಟಿಲ ಕಾನೂನುಗಳಿವೆ. ಇದು ಧಾರ್ಮಿಕ ಹಾಗೂ ಸಾಮಾಜಿಕ ಆಯಾಮಗಳನ್ನು ಒಳಗೊಂಡಿರುವ ವಿಚಾರವಾಗಿರುವುದರಿಂದ ಕಾನೂನು ರಚಿಸುವಾಗ ಬಹಳ ಎಚ್ಚರಿಕೆಯಿಂದ ಎಲ್ಲ ಅಂಶಗಳನ್ನು ಪರಿಶೀಲಿಸಬೇಕಾಗುತ್ತದೆ. ಐರ್ಲ್ಯಾಂಡ್‌ ದೇಶದಲ್ಲಿದ್ದ ಜಟಿಲ ಗರ್ಭಪಾತ ಕಾನೂನಿನಿಂದಾಗಿಯೇ ಬೆಳಗಾವಿ ಮೂಲದ ದಂತ ವೈದ್ಯೆಯೊಬ್ಬರು ಪ್ರಾಣ ಕಳೆದುಕೊಂಡ ಪ್ರಕರಣವಿನ್ನೂ ನೆನಪಿನಿಂದ ಮಾಸಿಲ್ಲ.

ನಮ್ಮ ದೇಶದಲ್ಲಿ ಗರ್ಭಪಾತ ಕಾನೂನು ಮತ್ತು ಲಿಂಗಪತ್ತೆ ಕಾನೂನಿಗೆ ಸಂಬಂಧಿಸಿದಂತೆ ಹೆಚ್ಚಿನವರಲ್ಲಿ ಅರಿವಿನ ಕೊರತೆಯಿದೆ. ಬಹುತೇಕ ಮಂದಿ ಇದು ಎರಡೂ ಒಂದೇ ಎಂದು ಭಾವಿಸಿದ್ದಾರೆ. ಅಲ್ಲದೆ ಗರ್ಭಪಾತ ಮಹಾಪಾಪ ಎಂಬ ಧಾರ್ಮಿಕ ನಂಬಿಕೆ ಬಹುತೇಕ ಎಲ್ಲ ಸಮುದಾಯಗಳಲ್ಲಿ ಇದೆ. ಪರೋಕ್ಷವಾಗಿ ಇದು ಮಹಿಳೆಗೆ ದೇಹದ ಮೇಲಿರುವ ಹಕ್ಕನ್ನು ಬೇರೆ ಯಾರೋ ನಿಯಂತ್ರಿಸಿದಂತೆ ಆಗುತ್ತದೆ. ಮೆಡಿಕಲ್‌ ಟರ್ಮಿನೇಶನ್‌ ಆಫ್ ಪ್ರಾಗ್ನೆನ್ಸಿ ಕಾಯಿದೆಗೆ ತಿದ್ದುಪಡಿ ತರುವ ಮೂಲಕ ಮಹಿಳೆಗೆ ಆಕೆಯ ದೇಹದ ಮೇಲೆ ಹೆಚ್ಚು ಹಕ್ಕು ಸಿಕ್ಕಿದಂತಾಗಿದೆ.ಸಂಸತ್ತಿನ ಉಭಯ ಸದನಗಳಲ್ಲಿ ತಿದ್ದುಪಡಿ ಕಾಯಿದೆ ಅಡ್ಡಿಯಿಲ್ಲದೆ ಮಂಜೂರಾಗುವುದು ಅಗತ್ಯ. ಆದರೆ ಕಾನೂನು ದುರುಪಯೋಗವಾಗದಂತೆ ನೋಡಿಕೊಳ್ಳುವುದು ಮುಖ್ಯ. ಲಿಂಗಪತ್ತೆ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದ್ದರೂ ಈಗಲೂ ಅಲ್ಲಲ್ಲಿ ಅಕ್ರಮವಾಗಿ ಈ ಪರೀಕ್ಷೆ ನಡೆಯುತ್ತಿರುತ್ತದೆ. ಗರ್ಭಪಾತ ಕಾನೂನಿಗೂ ಈ ಗತಿಯಾಗಬಾರದು.

Advertisement
Advertisement

Udayavani is now on Telegram. Click here to join our channel and stay updated with the latest news.

Next