ಚಿಂಚೋಳಿ: ನಗರೋತ್ಥಾನ ಯೋಜನೆಯಡಿ ಕೈಗೊಂಡಿರುವ ನೀರು ಸರಬರಾಜು ಯೋಜನೆ ಕಾಮಗಾರಿ ಅಪೂರ್ಣವಾಗಿದ್ದರೂ ಪುರಸಭೆಗೆ ಹಸ್ತಾಂತರಿಸಿಕೊಂಡಿದ್ದರ ಕುರಿತು ತನಿಖೆ ನಡೆಸಬೇಕು ಎಂದು ಪುರಸಭೆ ಉಪಾಧ್ಯಕ್ಷ ಸೈಯದ್ ಶಬ್ಬೀರ್ ಅಹಮೆದ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ವಿವಿಧ ವಾರ್ಡ್ ಗಳಿಗೆ ನಳಗಳ ಮೂಲಕ ನೀರು ಪೂರೈಸಲು ಪುರಸಭೆಯ ನಗರೋತ್ಥಾನ ಯೋಜನೆ ಅಡಿಯಲ್ಲಿ 5.50 ಕೋಟಿ ರೂ. ನೀಡಲಾಗಿದೆ. ಕೆಲವು ವಾರ್ಡುಗಳಲ್ಲಿ ಸ್ವಲ್ಪಮಟ್ಟಿಗೆ ಕೆಲಸ ಮಾಡಲಾಗಿದೆ. ಇನ್ನಿತರ ವಾರ್ಡುಗಳಲ್ಲಿ ಇನ್ನು ಕೆಲಸ ಬಾಕಿಯಿದೆ. ಈ ಯೋಜನೆಯಡಿ ಯಾರ ಮನೆಗೂ ಇನ್ನೂ ನೀರು ಬಂದಿಲ್ಲ ಎಂದು ಆಪಾದಿಸಿದರು.
ಪುರಸಭೆ ಅಧ್ಯಕ್ಷೆ ಜಗದೇವಿ ಗಡಂತಿ, ಮುಖ್ಯಾಧಿಕಾರಿ ಚಂದ್ರಕಾಂತ ಪಾಟೀಲ, ಇಂಜಿನಿಯರ್ ದೇವೇಂದ್ರಪ್ಪ ಕೋರವಾರ ಕಾಮಗಾರಿ ಪೂರ್ಣವಾಗಿದೆ ಎಂದು ಸುಳ್ಳೂ ವರದಿ ನೀಡಿ ಕಳದೆ ಸೆ. 23ರಂದು ಕಾಮಗಾರಿಯನ್ನು ಪುರಸಭೆಗೆ ಹಸ್ತಾಂತರ ಮಾಡಿಕೊಂಡಿದ್ದಾರೆ. ಈ ಕುರಿತು ಎಲ್ಲ ಸದಸ್ಯರ ಗಮನಕ್ಕೆ ತರಬೇಕೆಂದು ಇದಕ್ಕೂ ಮುನ್ನ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ ಎಲ್ಲ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ದೂರಿದರು.
ಪುರಸಭೆ ಸದಸ್ಯ ಸೈಯದ್ ಅನವರ ಖತೀಬ್ ಮಾತನಾಡಿ, ಪುರಸಭೆಯಲ್ಲಿ ಕಾಮಗಾರಿಗಳ ಬಗ್ಗೆ ಮೂರನೇ ತಂಡದಿಂದ ಪರಿಶೀಲನೆಯೂ ನಡೆಯುತ್ತಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಹಾಗೂ ಯೋಜನಾಭಿವೃದ್ಧಿ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.
ಪುರಸಭೆ ಸದಸ್ಯ ಆನಂದ ಟೈಗರ್ ಮಾತನಾಡಿ, ಪುರಸಭೆ ಇತಿಹಾಸದಲ್ಲಿಯೇ 5.50ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಮೊದಲ ಕಾಮಗಾರಿ ಇದಾಗಿದೆ. ಸುಳ್ಳು ಮಾಹಿತಿ ನೀಡಿ ಜನರನ್ನು ವಂಚಿಸಲಾಗಿದೆ. ಚಂದಾಪುರ ಶುದ್ಧೀಕರಣ ಘಟಕ ದುರಸ್ತಿಗಾಗಿ 2.82 ಲಕ್ಷ ರೂ. ಬಿಲ್ಲು ತೋರಿಸಲಾಗಿದೆ. ಈ ಕುರಿತು ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದರು.
ಬಿಜೆಪಿ ಪುರಸಭೆ ಸದಸ್ಯ ಶಿವಕುಮಾರ ಪೋಚಾಲಿ, ಬಿಎಸ್ಪಿ ಸದಸ್ಯ ಸುಶೀಲಕುಮಾರ ಬೊಮ್ಮನಳ್ಳಿ, ಬಸವರಾಜ ಶಿರಸಿ, ಕಾಂಗ್ರೆಸ್ ಮುಖಂಡರಾದ ಗೋಪಾಲರಾವ್ ಕಟ್ಟಿಮನಿ, ಖಲೀಲ ಅಹಮೆದ್, ಮಹಮ್ಮದ ಹಾದಿ ಇನ್ನಿತರರಿದ್ದರು.