Advertisement

ಅಪೂರ್ಣ ರಾ.ಹೆ. 169ಎ: ಮಕ್ಕಳನ್ನು ಶಾಲೆಗೆ ಕಳುಹಿಸಲು ಹೆತ್ತವರು ಹಿಂದೇಟು!

11:46 PM May 13, 2019 | Team Udayavani |

ಉಡುಪಿ: ಜಿಲ್ಲೆಯಲ್ಲಿ ಶಾಲಾ-ಕಾಲೇಜು ಪ್ರಾರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಮಣಿಪಾಲ- ಉಡುಪಿ ರಾ.ಹೆ. ಪಕ್ಕದಲ್ಲಿರುವ ಶಾಲೆ ಗಳಿಗೆ ಮಕ್ಕಳನ್ನು ಸೇರಿಸುವ ಹೆತ್ತವರು ಮಾತ್ರ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಅಪೂರ್ಣ ಗೊಂಡಿರುವ ಉಡುಪಿ- ಮಣಿಪಾಲ ರಾ.ಹೆ. ಕಾಮಗಾರಿ ಕಾರಣ ಎನ್ನಲಾಗುತ್ತಿದೆ.

Advertisement

ಮಣಿಪಾಲ ಶೈಕ್ಷಣಿಕ ಕೇಂದ್ರವಾಗಿ ಬೆಳೆದಿದ್ದು, ನಿತ್ಯ ಎಲ್‌ಕೆಜಿಯಿಂದ ಹಿಡಿದು ಎಂಜಿನಿಯರಿಂಗ್‌ ವರೆಗಿನ ಸಾವಿರಾರು ವಿದ್ಯಾರ್ಥಿಗಳು ಸ್ವತಂತ್ರವಾಗಿ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದಾರೆ. ಆದರೆ ಚತುಷ್ಪಥ ಹೆದ್ದಾರಿ ನಿರ್ಮಾಣದ ಅನಂತರ ಈ ಮಾರ್ಗದಲ್ಲಿ ವಾಹನ‌ ದಟ್ಟಣೆ ಹೆಚ್ಚಾಗಿದ್ದು ವಿದ್ಯಾರ್ಥಿಗಳು ದೇವರ ಮೇಲೆ ಭಾರ ಹಾಕಿ ರಸ್ತೆ ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಕೊಂಚ ಎಚ್ಚರ ತಪ್ಪಿದರೆ ಅಪಘಾತವಾಗುವುದು ಖಂಡಿತ. ಇದರಿಂದಾಗಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಮೀನಮೇಷ ಎಣಿಸುತ್ತಿದ್ದಾರೆ.

ಅಪಘಾತಕ್ಕೆ ಆಹ್ವಾನ
ರಸ್ತೆ ಅಗಲೀಕರಣ ಕಾಮಗಾರಿ ಆರಂಭಗೊಂಡು ಆರು ತಿಂಗಳು ಕಳೆದಿವೆ. ರಸ್ತೆಯಲ್ಲಿ ವಾಹನಗಳ ವೇಗ ಹೆಚ್ಚಿರುವುದರಿಂದ ಸಾರ್ವಜನಿಕರು ರಸ್ತೆ ದಾಟುವ ಭರದಲ್ಲಿ ಅಪಘಾತಕ್ಕೀಡಾಗುತ್ತಿದ್ದಾರೆ. ಇನ್ನು ಕೆಲವು ವಿದ್ಯಾರ್ಥಿಗಳು ಅತಿವೇಗ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವುದರಿಂದ ರಸ್ತೆ ದಾಟುವವರು ಜೀವ ಕೈಯಲ್ಲಿ ಹಿಡಿದು ದಾಟುತ್ತಾರೆ.

ಎಲ್ಲಿ ಮೇಲ್ಸೇತುವೆ ಅಗತ್ಯ?
ಎಂಜಿಎಂ ಕಾಲೇಜು, ಇಂದ್ರಾಳಿ ಶಾಲೆ, ಮಾಧವ ಕೃಪಾ, ಮಣಿಪಾಲ ಬಸ್‌ ನಿಲ್ದಾಣದಲ್ಲಿ ಜನದಟ್ಟಣೆ ಹೆಚ್ಚಾಗಿದ್ದು ಈ ಪ್ರದೇಶದಲ್ಲಿ ಮೇಲ್ಸೇತುವೆ ಅಗತ್ಯವಿದೆ.

ತಾತ್ಕಾಲಿಕ ಪೊಲೀಸ್‌ ನಿಯೋಜನೆ
ಇಂದ್ರಾಳಿ ಶಾಲೆ, ಎಂಜಿಎಂ, ಮಣಿಪಾಲ ಸಿಂಡಿಕೇಟ್‌ ಬ್ಯಾಂಕ್‌, ಕಡಿಯಾಳಿ, ಶಾರದಾ ಕಲ್ಯಾಣ ಮಂಟಪ ಸೇರಿದಂತೆ ವಿವಿಧ ಕಡೆ ಬೆಳಗ್ಗೆ ಮತ್ತು ಸಂಜೆ ವಾಹನ ಒತ್ತಡ ಅಧಿಕವಿರುವುದರಿಂದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ರಸ್ತೆ ದಾಟುವುದು ಕಷ್ಟ. ಆದರಿಂದ ನಿಗದಿತ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಟ್ರಾಫಿಕ್‌ ಪೊಲೀಸ್‌ ನಿಯೋಜನೆ ಮಾಡಬೇಕಾಗಿದೆ.

Advertisement

ಸಿಗ್ನಲ್‌ ಆಳವಡಿಕೆ ಕಷ್ಟ
ಹಿಂದಿನ ಎಸ್ಪಿ ಲಕ್ಷ್ಮಣ ಬಿ. ನಿಂಬರಗಿ ಅವರು ಅಂಬಲಪಾಡಿ, ಕಟಪಾಡಿ, ಸಂತೆಕಟ್ಟೆ , ಕರಾವಳಿ ಜಂಕ್ಷನ್‌ನಲ್ಲಿ ಅಪಘಾತಗಳು ಹೆಚ್ಚಿದ ಹಿನ್ನೆಲೆ ಟ್ರಾಫಿಕ್‌ ಸಿಗ್ನಲ್‌ ಅಳವಡಿಸುವಂತೆ ರಾ.ಹೆ. ಪ್ರಾಧಿಕಾರಕ್ಕೆ ಪತ್ರ ಬರೆದಿದ್ದರು. ಆದರೆ ರಾ.ಹೆ.ಯಲ್ಲಿ ಸಿಗ್ನಲ್‌ ಆಳವಡಿಸಲು ಸಾಧ್ಯವಿಲ್ಲ ಎಂದು ಪ್ರಾಧಿಕಾರವು ಪೊಲೀಸ್‌ ಇಲಾಖೆ ಮನವಿಯನ್ನು ನಿರಾಕರಿಸಿದೆ. ಮುಂದೆ ಇದೇ ಕಾರಣ ನೀಡಿ ರಾ.ಹೆ. 169ಎ ಸಿಗ್ನಲ್‌ ಅಳವಡಿಕೆ ಮನವಿ ನಿರಾಕರಣೆಯಾಗುವ ಸಾಧ್ಯತೆ ಹೆಚ್ಚಿದೆ.

ಬೇಡಿಕೆ
– ವಿದ್ಯಾರ್ಥಿಗಳ ಹೆಚ್ಚಿರುವ ಪ್ರದೇಶದಲ್ಲಿ ಟ್ರಾಫಿಕ್‌ ಪೊಲೀಸ್‌ ನಿಯೋಜನೆ.
– ಶೀಘ್ರದಲ್ಲಿ ಅಗತ್ಯವಿರುವ ಕಡೆ ಮೇಲ್ಸೇತುವೆ ನಿರ್ಮಿಸಿ.
– ಶಾಲಾ ಕಾಲೇಜು ಬಳಿ ಸ್ಪೀಡ್‌ ಮಿತಿ ಸೂಚನಾ ಫ‌ಲಕ ಆಳವಡಿಸಿ

ರಸ್ತೆ ದಾಟಲು ಅನುಕೂಲವಾದರೆ ಸಾಕು
ರಸ್ತೆ ವಿಸ್ತರಣೆ ಅನಂತರ ವಾಹನಗಳ ವೇಗ ಅಧಿಕವಾಗಿದ್ದು, ರಸ್ತೆ ದಾಟುವುದು ಕಷ್ಟವಾಗಿದೆ. ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೊನೆಯ ಪಕ್ಷ ಮೇಲ್ಸೇತುವೆ ನಿರ್ಮಿಸುವ ಕಾರ್ಯ ಶೀಘ್ರದಲ್ಲಿ ನಡೆಯಬೇಕು.
-ವಿನಾಯಕ ಕಾಮತ್‌,ವಿದ್ಯಾರ್ಥಿ

ಮಳೆಗಾಲದ ಒಳಗೆ ಕಾಮಗಾರಿ ಪೂರ್ಣ
ಇಂದ್ರಾಳಿ ಶಾಲೆಯ ಸಮೀಪ ಸಂಚಾರಿ ಪೊಲೀಸ್‌ ಸಿಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಉಳಿದ ಕಡೆ ಮಳೆಗಾಲದ ಒಳಗೆ ಆರಂಭಿಸಿರುವ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ರಾ.ಹೆ. ಗುತ್ತಿಗೆದಾರರು ಹಾಗೂ ಎಂಜಿನಿಯರ್‌ ಭರವಸೆ ನೀಡಿದ್ದಾರೆ.
-ನಿತ್ಯಾನಂದ,ಪಿಎಸ್‌ಐ,ಸಂಚಾರಿ ಪೊಲಿಸ್‌ ಠಾಣೆ ಉಡುಪಿ

ಶಾಲೆಗೆ ಕಳಿಸಲು ಭಯ
ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯವಾಗುತ್ತಿದೆ. ಹಿಂದೆ ಅವರಾಗಿ ರಸ್ತೆ ದಾಟಿಕೊಂಡು ಶಾಲೆ ತೆರಳುತ್ತಿದ್ದರು. ಇದೀಗ ಮಕ್ಕಳ ಈ ಎತ್ತರ ತಗ್ಗು ರಸ್ತೆ ದಾಟಿ ಶಾಲೆಗೆ ಹೇಗೆ ಹೋಗುತ್ತಾರೆ ಅನ್ನುವ ಭಯ ಕಾಡುತ್ತಿದೆ.
-ಶ್ರೀಲತಾ,ಇಂದ್ರಾಳಿ

Advertisement

Udayavani is now on Telegram. Click here to join our channel and stay updated with the latest news.

Next