Advertisement

ಅವಧಿ ಮುಗಿದರೂ ಪಾರ್ಕಿಂಗ್‌ ತಾಣ ಅಪೂರ್ಣ

12:45 PM Jun 14, 2019 | Suhan S |

ಬೆಂಗಳೂರು: ಬಹುಮಹಡಿ ಪಾರ್ಕಿಂಗ್‌ ತಾಣವಿದ್ದರೂ, ವಾಹನಗಳ ನಿಲುಗಡೆ ಜಾಗವಿಲ್ಲದೆ ವಾಹನ ಸವಾರರು ತೊಂದರೆ ಅನುಭವಿಸುವಂತಹ ಪರಿಸ್ಥಿತಿ ರಾಜಧಾನಿ ಬೆಂಗಳೂರಿನ ಕೇಂದ್ರ ಭಾಗದಲ್ಲಿದೆ. ನಗರದ ಕೇಂದ್ರ ಭಾಗದಲ್ಲಿ ಪ್ರತಿ ಗಂಟೆಗೆ ಲಕ್ಷಾಂತರ ವಾಹನಗಳು ಸಂಚಾರ ಮಾಡುತ್ತಿದ್ದು, ಮೆಜೆಸ್ಟಿಕ್‌ ಸುತ್ತಮುತ್ತಲಿನ ಭಾಗಗಳಿಗೆ ಲಕ್ಷಾಂತರ ಜನರು ನಿತ್ಯ ಬಂದು ಹೋಗುತ್ತಾರೆ. ಆದರೆ, ಸೂಕ್ತ ನಿಲುಗಡೆ ವ್ಯವಸ್ಥೆಯಿಲ್ಲದ ಪರಿಣಾಮ ಜನರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

Advertisement

ಕೇಂದ್ರ ಭಾಗದಲ್ಲಿನ ಪಾರ್ಕಿಂಗ್‌ ಸಮಸ್ಯೆ ನಿವಾರಣೆಗಾಗಿ ಬಿಬಿಎಂಪಿ ಕೋಟ್ಯಂತರ ರೂ. ವೆಚ್ಚದಲ್ಲಿ ಫ್ರೀಡಂ ಪಾರ್ಕ್‌ ಬಳಿ ಬಹುಮಹಡಿ ವಾಹನ ನಿಲುಗಡೆ ತಾಣ ನಿರ್ಮಿಸಲು ಮುಂದಾಗಿದೆ. ಅದರಂತೆ ಕಾಮಗಾರಿ ಪೂರ್ಣಗೊಂಡರೆ 556 ಕಾರುಗಳು ಮತ್ತು 500 ದ್ವಿಚಕ್ರ ವಾಹನಗಳ ನಿಲುಗಡೆ ಮಾಡಬಹುದಾಗಿದೆ. ಆದರೆ, ಕಾಮಗಾರಿ ಆರಂಭವಾಗಿ ಮೂರು ವರ್ಷಗಳು ಕಳೆದರೂ, ಈವರೆಗೆ ಶೇ.50ರಷ್ಟು ಕಾಮಗಾರಿ ಪೂರ್ಣಗೊಳ್ಳದ ಪರಿಣಾಮ ಸಮಸ್ಯೆ ಮುಂದುವರಿದಿದೆ.

ಕೇಂದ್ರ ಭಾಗದಲ್ಲಿನ ವಾಹನ ನಿಲುಗಡೆ ವ್ಯವಸ್ಥೆಯಿಂದ ಉಂಟಾಗುತ್ತಿರುವ ದಟ್ಟಣೆ ನಿವಾರಣೆಗೆ ಪಾಲಿಕೆಯಿಂದ 2015ರಲ್ಲಿ ಗಾಂಧಿನಗರ ಫ್ರೀಡಂ ಪಾರ್ಕ್‌ನಲ್ಲಿ ಬಹುಮಹಡಿ ಪಾರ್ಕಿಂಗ್‌ ತಾಣವನ್ನು 79 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಟೆಂಡರ್‌ ನೀಡಲಾಗಿದೆ. ಆದರೆ, ಈವರೆಗೆ ಕೇವಲ ಶೇ.40ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಂಡಿರುವುದು ವಾಹನ ಸವಾರರಲ್ಲಿ ಬೇಸರ ಮೂಡಿಸಿದೆ. ನಾಲ್ಕು ಹಂತಗಳಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಮೊದಲ ಹಂತದಲ್ಲಿ ಒಂದು ಮಹಡಿಯನ್ನು ಪಾರ್ಕಿಂಗ್‌ಗಾಗಿ ಸಿದ್ಧಗೊಳಿಸಲಾಗಿದೆ. ಜತೆಗೆ ಎರಡು ಹಂತಗಳ ಕಟ್ಟಡ ನಿರ್ಮಾಣ ಕಾಮಗಾರಿಯ ಎಲ್ಲ ಛಾವಣಿಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಆಮೆ ಗತಿಯಲ್ಲಿ ಕಾಮಗಾರಿ ಸಾಗುತ್ತಿರುವುದು ಟೀಕೆಗೆ ಕಾರಣವಾಗಿ

ಉದ್ಘಾಟನೆ ನಂತರವೂ ಪಾರ್ಕಿಂಗ್‌ ಭಾಗ್ಯವಿಲ್ಲ: 4 ಹಂತಗಳ ಕಾಮಗಾರಿಯ ಪೈಕಿ ಒಂದು ಮಹಡಿಯನ್ನು ಮೊದಲ ಹಂತದಲ್ಲಿಸಾರ್ವಜನಿಕರಿಗೆ ಬಿಟ್ಟುಕೊಡಲು ಪಾಲಿಕೆ ಯೋಜನೆ ರೂಪಿಸಿತ್ತು. ಜತೆಗೆ ಹಿಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಒಂದು ಮಹಡಿ ಉದ್ಘಾಟನೆಯನ್ನು ಸಹ ನೆರವೇರಿಸಿದ್ದರು. ಆದರೆ, ಈವರೆಗೆ ಯಾವುದೇ ಅಂತಸ್ತು ಸಾರ್ವಜನಿಕರ ಬಳಕೆಗೆ ನೀಡಿಲ್ಲ. ಸಂಪೂರ್ಣ ಕಾಮಗಾರಿ ಪೂರ್ಣಗೊಂಡ ಬಳಿಕ ಟೆಂಡರ್‌ ಕರೆಯಲಾಗುವುದು ಎನ್ನುತ್ತಾರೆ ಅಧಿಕಾರಿಗಳು.

ಪಾಲಿಕೆಗೆ ಬಂಡೆ ಸಮಸ್ಯೆ: ಪಾಲಿಕೆಯಿಂದ ತ್ವರಿತಗತಿಯಲ್ಲಿ ಕಾಮಗಾರಿ ನಡೆಸುತ್ತಿದ್ದರೂ, ಬೃಹದಾಕಾರದ ಬಂಡೆಗಳು ಕಾಮಗಾರಿಗೆ ಅಡ್ಡವಾಗಿರುವುದು ತಲೆನೋವಾಗಿ ಪರಿಣಮಿಸಿದೆ. ಮೊದಲ ಹಂತದಲ್ಲಿಯೂ ಪಾಲಿಕೆಗೆ ಬಂಡೆ ಸಮಸ್ಯೆಯಾಗಿತ್ತು. ಇದೀಗ ಎರಡನೇ ಹಾಗೂ ಮೂರನೇ ಹಂತದ ಕಾಮಗಾರಿಗೂ ಬಂಡೆಗಳು ಸಿಕ್ಕಿರುವುದರಿಂದ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಅಧಿಕಾರಿಗಳ ವಾದವಾಗಿದೆ.

Advertisement

ಸಮಸ್ಯೆ ಹೆಚ್ಚಿಸಿದ ಟೆಂಡರ್‌ಶ್ಯೂರ್‌: ಬೆಂಗಳೂರಿನ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಗಾಂಧಿನಗರ ಪ್ರಮುಖವಾಗಿದ್ದು, ಹಲವಾರು ಬಜಾರ್‌ಗಳು ಇಲ್ಲಿರುವುದರಿಂದ ನಿತ್ಯ ಲಕ್ಷಾಂತರ ಜನರು ಇಲ್ಲಿಗೆ ಬಂದು ಹೋಗುತ್ತಾರೆ. ಆದರೆ, ಸೂಕ್ತ ಪಾರ್ಕಿಂಗ್‌ ಸೌಲಭ್ಯವಿಲ್ಲದ ಕಾರಣ ಸವಾರರು ರಸ್ತೆ ಬದಿಯಲ್ಲಿ ವಾಹನ ನಿಲುಗಡೆ ಮಾಡುತ್ತಿದ್ದರು. ಆದರೀಗ ಪಾಲಿಕೆಯಿಂದ ಕೈಗೆತ್ತಿಕೊಂಡ ಟೆಂಡರ್‌ಶ್ಯೂರ್‌ ಕಾಮಗಾರಿಗಾಗಿ ರಸ್ತೆಗಳನ್ನು ಅಗೆಯಲಾಗಿದ್ದು, ಬೃಹತ್‌ ಪೈಪ್‌ ಗಳನ್ನು ಪಾದಚಾರಿ ಮಾರ್ಗದಲ್ಲಿ ಇರಿಸಲಾಗಿದೆ. ಪರಿಣಾಮ, ವಾಹನ ನಿಲುಗಡೆಗೆ ಜಾಗವಿಲ್ಲ ದಂತಾಗಿದ್ದು, ಒಂದು ಆಟೋ ನಿಂತರೂ ದಟ್ಟಣೆ ಸಮಸ್ಯೆಯಾಗುತ್ತಿರುವುದು ಕಂಡುಬಂದಿದೆ.

.ವೆಂ.ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next