ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ(ನವೆಂಬರ್ 12, 2020) ದೇಶದ ಆರ್ಥಿಕ ಚೇತರಿಕೆಗಾಗಿ 2.65 ಲಕ್ಷ ಕೋಟಿ ರೂಪಾಯಿಯ ಮೂರನೇ ಆರ್ಥಿಕ ಪ್ಯಾಕೇಜ್ ಯನ್ವಯ ಹೊಸ ಉದ್ಯೋಗ ಸೇರಿದಂತೆ ಹಲವು ಯೋಜನೆಯನ್ನು ಘೋಷಿಸಿದ್ದಾರೆ.
ದೇಶದ ಮಧ್ಯಮ ಹಾಗೂ ಸಣ್ಣ ಕೈಗಾರಿಕೆಗಳ ಆರ್ಥಿಕ ಚೇತರಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಹಲವು ಕ್ರಮ ಘೋಷಿಸಿದ್ದು, ಮನೆ ನಿರ್ಮಿಸುವವರಿಗೆ, ಮಾರಾಟಗಾರರಿಗೆ ಆದಾಯ ತೆರಿಗೆ ಕಡಿತ ಘೋಷಿಸಿದ್ದಾರೆ.
ದೇಶದ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುವ ಎನ್ ಐಎಎಫ್ ಈಕ್ವಿಟಿಗಳಿಗೆ 6000 ಕೋಟಿ ಮೀಸಲಿಟ್ಟಿದ್ದು, ಡೆಟ್ ಫೈನಾನ್ಸಿಂಗ್ ಗಾಗಿ ಇದು ಅನುಕೂಲವಾಗಲಿದೆ.ಇದರಿಂದ ಒಂದು ಲಕ್ಷದ ಹತ್ತು ಸಾವಿರ ಕೋಟಿ ರೂಪಾಯಿ ಹೂಡಿಕೆ ರೂಪದಲ್ಲಿ ಬರಲಿದೆ.
ಈಗಾಗಲೇ ಉದ್ಯೋಗದಲ್ಲಿರುವ ಆದಾಯ ತೆರಿಗೆ ವ್ಯಾಪ್ತಿಗೆ ಬರುವ ನೌಕರರಿಗೆ ಕೇಂದ್ರ ಸರ್ಕಾರ ಕೊಡುಗೆ ನೀಡಿದ್ದು, ಈವರೆಗೆ ದೇಶಾದ್ಯಂತ 39.7 ಲಕ್ಷ ಆದಾಯ ತೆರಿಗೆ ಪಾವತಿದಾರರಿಗೆ ಒಟ್ಟು 1,32, 800 ಕೋಟಿ ರೂಪಾಯಿ ರೀಫಂಡ್ ನೀಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ 116 ಜಿಲ್ಲೆಗಳಲ್ಲಿ ಪ್ರಗತಿಯಲ್ಲಿದ್ದು, ಇದಕ್ಕಾಗಿ ಈವರೆಗೆ 37,543 ಕೋಟಿ ರೂಪಾಯಿ ವ್ಯಯಿಸಲಾಗಿದೆ. ನರೇಗಾ ಯೋಜನೆಗಾಗಿ 2021-22 ಬಜೆಟ್ ನಲ್ಲಿ 61,500 ಕೋಟಿ ರೂಪಾಯಿ ಮೀಸಲಿಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಆತ್ಮನಿರ್ಭರ್ ಭಾರತ್ 3.0 ಯೋಜನೆಯಡಿ 65 ಸಾವಿರ ಕೋಟಿ ರೂಪಾಯಿಗಳ ಸಬ್ಸಿಡಿಯ ರಸಗೊಬ್ಬರ ಪೂರೈಕೆ ಮಾಡಲಾಗಿದೆ. ಇದರಿಂದ ದೇಶದ ರೈತರಿಗೆ ಅನುಕೂಲವಾಗಿದೆ ಎಂದ ನಿರ್ಮಲಾ ಸೀತಾರಾಮನ್, ರಸಗೊಬ್ಬರ ಸರಬರಾಜಿನ ಮೇಲಿನ ಸಬ್ಸಿಡಿ ದರವನ್ನು ಹೆಚ್ಚಿಸುವ ಮೂಲಕ ದೇಶದ 140 ಮಿಲಿಯನ್ ರೈತರಿಗೆ ಅನುಕೂಲವಾಗಲಿದೆ ಎಂದರು.