ಹೊಸದಿಲ್ಲಿ: ಆದಾಯ ತೆರಿಗೆ ಇಲಾಖೆಯು ತೆರಿಗೆ ವಂಚನೆಯನ್ನು ತಡೆಯಲು ಆಸ್ಪತ್ರೆಗಳು, ಹೋಟೆಲ್ ಗಳು ಮತ್ತು ವ್ಯವಹಾರಗಳಲ್ಲಿ ನಗದು ವಹಿವಾಟಿನ ಮೇಲೆ ನಿಗಾ ಇಡಲಿದೆ.
ಆದಾಯ ತೆರಿಗೆ ಇಲಾಖೆಯ ಪ್ರಕಾರ, ಸಾಲ ಅಥವಾ ಠೇವಣಿಗಾಗಿ 20,000 ರೂ. ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಸ್ವೀಕರಿಸುವುದನ್ನು ನಿಷೇಧಿಸಲಾಗಿದೆ. ಅಂತಹ ವಹಿವಾಟುಗಳನ್ನು ಬ್ಯಾಂಕಿಂಗ್ ಮಾರ್ಗಗಳ ಮೂಲಕ ಮಾತ್ರ ಮಾಡಬೇಕು. ಅಲ್ಲದೆ, ಒಬ್ಬ ವ್ಯಕ್ತಿಗೆ ಇನ್ನೊಬ್ಬ ವ್ಯಕ್ತಿಯಿಂದ ಒಟ್ಟಾರೆಯಾಗಿ ರೂ 2 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಸ್ವೀಕರಿಸಲು ಅನುಮತಿಸಲಾಗುವುದಿಲ್ಲ. ಜನರು ನೋಂದಾಯಿತ ಟ್ರಸ್ಟ್ ಅಥವಾ ರಾಜಕೀಯ ಪಕ್ಷಕ್ಕೆ ನಗದು ರೂಪದಲ್ಲಿ ನೀಡಿದ ದೇಣಿಗೆಗಳನ್ನು ಆದಾಯ ತೆರಿಗೆ ಪಾವತಿಸುವಾಗ ಕಡಿತಗಳಾಗಿ ಸಲ್ಲಿಸುವಂತಿಲ್ಲ.
ಇದನ್ನೂ ಓದಿ:ಅಸ್ಸಾಂನಲ್ಲಿ ಅಲ್-ಖೈದಾ ನಂಟು ಹೊಂದಿದ್ದ ಶಂಕಿತ ಉಗ್ರರಿಬ್ಬರ ಬಂಧನ
ಆಸ್ಪತ್ರೆಗಳು ಸೇರಿದಂತೆ ಕೆಲವು ಸಂಸ್ಥೆಗಳು ಮತ್ತು ವ್ಯವಹಾರಗಳಲ್ಲಿನ ನಗದು ವಹಿವಾಟಿನ ಮೇಲೆ ಇಲಾಖೆ ನಿಗಾ ಇರಿಸಿದೆ. ಎನ್‌ಡಿಟಿವಿ ವರದಿಯ ಪ್ರಕಾರ, ಹಲವಾರು ಸಂದರ್ಭಗಳಲ್ಲಿ ಆರೋಗ್ಯ ಸೌಲಭ್ಯಗಳು ರೋಗಿಯ ಪಾನ್ ಕಾರ್ಡ್‌ಗಳನ್ನು ದಾಖಲಾದಾಗ ಸಂಗ್ರಹಿಸುವ ನಿಯಮವನ್ನು ಕಡೆಗಣಿಸಿರುವುದನ್ನು ಇಲಾಖೆಯ ಅಧಿಕಾರಿಗಳು ದೃಢಪಡಿಸಿದ್ದಾರೆ.
ಇದೀಗ ಆದಾಯ ತೆರಿಗೆ ಇಲಾಖೆ ಇಂತಹ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಖಾಸಗಿ ವೈದ್ಯಕೀಯ ಸೌಲಭ್ಯಗಳಿಗೆ ಹೆಚ್ಚಿನ ಮೊತ್ತವನ್ನು ಪಾವತಿಸಿದ ರೋಗಿಗಳನ್ನು ಪತ್ತೆಹಚ್ಚಲು ಆರೋಗ್ಯ ಸೇವೆ ಒದಗಿಸುವವರ ಡೇಟಾವನ್ನು ಬಳಸಲು ಇಲಾಖೆ ಯೋಜಿಸಿದೆ.