Advertisement

ಹೊಸತರಲ್ಲಿದೆ ತೆರಿಗೆ ಡಿಡಕ್ಷನ್‌-ರಿಯಾಯಿತಿ ; ಸದ್ಯ ರದ್ದಾಗಿರುವುದು 70 ವಿನಾಯಿತಿ ಮಾತ್ರ

10:03 AM Feb 04, 2020 | Hari Prasad |

ಹೊಸದಿಲ್ಲಿ: ಕೇಂದ್ರ ಬಜೆಟ್‌ನಲ್ಲಿ ಪ್ರಕಟಿಸಲಾಗಿರುವ ಆದಾಯ ತೆರಿಗೆಯ ಹೊಸ ಪದ್ಧತಿ ಯಾರಿಗೆ ಅನ್ವಯ ಮತ್ತು ಯಾವ ವಿನಾಯ್ತಿಗಳು ಅನ್ವಯವಾಗುತ್ತವೆ ಎಂಬ ಬಗ್ಗೆ ಜಿಜ್ಞಾಸೆ ಇನ್ನೂ ಇದೆ. ಬಜೆಟ್‌ ಘೋಷಣೆ ಪ್ರಕಾರ, 70 ರೀತಿಯ ವಿನಾಯಿತಿ ಮತ್ತು ಡಿಡಕ್ಷನ್‌ಗಳನ್ನು ಈಗಾಗಲೇ ತೆಗೆದು ಹಾಕಲಾಗಿದೆ. ಹಾಗಿದ್ದರೆ ಹೊಸ ರೀತಿಯ ತೆರಿಗೆ ಪದ್ಧತಿಯಲ್ಲಿ ಯಾವ ರೀತಿಯ ವಿನಾಯಿತಿ ಸಿಗುತ್ತದೆ ಎಂಬ ವಿಚಾರಗಳಿಗೆ ತೆರಿಗೆ ತಜ್ಞರು ವಿವರಣೆ ನೀಡಿದ್ದಾರೆ.

Advertisement

ಉದ್ಯೋಗದಾತರು ನ್ಯಾಷನಲ್‌ ಪೆನ್ಶನ್‌ ಸ್ಕೀಂ(ಎನ್‌ಪಿಎಸ್‌) ಹೊಂದಿದ್ದರೆ, ಹೊಸ ತೆರಿಗೆ ಪದ್ಧತಿಯ ಅನ್ವಯ ಅವರಿಗೆ ವಿನಾಯ್ತಿ ದೊರೆಯಲಿದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್‌ 80-ಸಿಸಿಡಿ (2)ರ ಅನ್ವಯ ಅದು ಲಭ್ಯವಾಗುತ್ತದೆ. ಉದ್ಯೋಗದಾತರು ಉದ್ಯೋಗಿಗಳಿಗೆ ಇಪಿಎಫ್ ಅಥವಾ ಎನ್‌ಪಿಎಸ್‌ ಮೂಲಕ ನೀಡುವ ಮೊತ್ತ ವಾರ್ಷಿಕ 7.5 ಲಕ್ಷ ರೂ.ಗಿಂತ ಹೆಚ್ಚಿದ್ದರೆ ಅದಕ್ಕೆ ತೆರಿಗೆ ವಿಧಿಸಲಾಗುತ್ತದೆ.

ಆದಾಯ ತೆರಿಗೆ ಕಾಯ್ದೆಯ ಅನ್ವಯ ಉದ್ಯೋಗಿ ತನ್ನ ಮೂಲ ಸಂಬಳದ ಶೇ.10ರಷ್ಟು ಮತ್ತು ತುಟ್ಟಿ ಭತ್ಯೆ (ಸರಕಾರಿ ಉದ್ಯೋಗಿಗಳಿಗೆ ಅನ್ವಯ) ತೆರಿಗೆ ವಿನಾಯಿತಿ ಕೇಳಲು ಅವಕಾಶ ಉಂಟು. ಉದಾಹರಣೆಗೆ ಹೇಳುವುದಿದ್ದರೆ ಉದ್ಯೋಗಿಯ ಪ್ರತಿ ವರ್ಷದ ಮೂಲ ಸಂಬಳ 5 ಲಕ್ಷ ರೂ. ಇದ್ದರೆ, ಆತನ ಕಂಪೆನಿ ಅಥವಾ ಮಾಲಕ ಶೇ.10ರಷ್ಟು ಅಂದರೆ 50 ಸಾವಿರ ರೂ.ಗಳನ್ನು ಎನ್‌ಪಿಎಸ್‌ನಲ್ಲಿ ತೊಡಗಿಸುತ್ತಾನೆ. ಅನಂತರ ಅದಕ್ಕೆ ಸಮನಾಗಿರುವ ಮೊತ್ತವನ್ನು ನಿಮ್ಮ ಒಟ್ಟಾರೆ ಆದಾಯದಿಂದ ಡಿಡಕ್ಷನ್‌ ಮೂಲಕ ಪಡೆಯಲು ಅರ್ಹರಾಗುತ್ತಾನೆ.

2019-20ನೇ ವರ್ಷಕ್ಕೆ ಸಂಬಂಧಿಸಿ, ಸೆಕ್ಷನ್‌ 80ಸಿ ಅನ್ವಯ 1.5 ಲಕ್ಷ ರೂ. ಮತ್ತು ಹೆಚ್ಚುವರಿ ತೆರಿಗೆ ವಿನಾಯಿತಿ ಎನ್‌ಪಿಎಸ್‌ ಮೂಲಕ ಸೆಕ್ಷನ್‌ 80ಸಿಸಿಡಿ (1ಬಿ) ಅನ್ವಯ 50 ಸಾವಿರ ರೂ. ಪಡೆದುಕೊಳ್ಳಲು ಅವಕಾಶ ಉಂಟು.
‘ಸಂಬಳದಾತರಿಗೆ ಇರುವ ಎಲ್ಲ ರೀತಿಯ ವಿನಾಯಿತಿ -ಡಿಡಕ್ಷನ್‌ ತೆಗೆಯಲಾಗಿದೆ. ಉದ್ಯೋಗದಾತರು ಎನ್‌ಪಿಎಸ್‌ ಮೂಲಕ ನೀಡುವ  ಕೊಡುಗೆ ಲಭ್ಯವಿದೆ’ ಎಂದು ಅರ್ನೆಸ್ಟ್‌ ಆ್ಯಂಡ್‌ ಯಂಗ್‌ ಇಂಡಿಯಾದ ತೆರಿಗೆ ವಿಭಾಗದ ಪರಿಣತೆ ಶಾಲಿನಿ ಜೈನ್‌ ಹೇಳಿದ್ದಾರೆ.

ಭಿನ್ನ ರೀತಿಯ ಅಭಿಪ್ರಾಯ: ಹೊಸ ತೆರಿಗೆ ಪದ್ಧತಿ ಅಥವಾ ಹಳೆಯ ಪದ್ಧತಿಯಲ್ಲಿ ಇರಬೇಕೋ ಎಂಬ ಬಗ್ಗೆ ತೆರಿಗೆ ಕ್ಷೇತ್ರದ ಪರಿಣತರಲ್ಲಿ ಇನ್ನೂ ಒಮ್ಮತ ಇಲ್ಲ ಎನ್ನುವುದು ಸ್ಪಷ್ಟ. ಲೆಕ್ಕಾಚಾರಗಳ ಪ್ರಕಾರ ಹೆಚ್ಚು ಆದಾಯ ಇರುವವರು ಹಾಲಿ ಇರುವ ಪದ್ಧತಿಯನ್ನೇ ಅನುಸರಿಸುವುದರ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ. ಕಡಿಮೆ ಮೊತ್ತದ  ತೆರಿಗೆ ವ್ಯಾಪ್ತಿಗೆ ಬರುವವರಿಗೆ ಕೊಂಚ ಅನುಕೂಲವಾಗಬಹುದೇನೋ?

Advertisement

‘ಹೊಸ ಪದ್ಧತಿಯಲ್ಲಿನ ಕಡಿಮೆ ಪ್ರಮಾಣದ ಮೊತ್ತ ಮತ್ತು ಹಳೆಯ ಪದ್ಧತಿಯನ್ನು ಹೋಲಿಕೆ ಮಾಡುವವರು ಮೊದಲಿನ ಪದ್ಧತಿಗೇ ಆದ್ಯತೆ ನೀಡುತ್ತಾರೆ. ಏಕೆಂದರೆ ಅದರಲ್ಲಿ ಕಡಿಮೆ ಪ್ರಮಾಣದಲ್ಲಿ ತೆರಿಗೆ ನೀಡಬೇಕಾಗುತ್ತದೆ. ಆದರೆ ಅದನ್ನು ವೇತನದಾರರಿಗೆ ಎಷ್ಟು ವೇತನ ಬರುತ್ತದೆ ಎನ್ನುವುದನ್ನು ಅನುಸರಿಸಿ ನಿರ್ಧರಿಸಬೇಕಾಗುತ್ತದೆ’ ಎಂದು ಪ್ರೈಸ್‌ ವಾಟರ್‌ ಕೂಪರ್‌ ಇಂಡಿಯಾದ ತೆರಿಗೆ ವಿಶ್ಲೇಷಕ ಕುಲದೀಪ್‌ ಕುಮಾರ್‌ ಹೇಳಿದ್ದಾರೆ.

ಮಧ್ಯಪ್ರಾಚ್ಯ, ಕೊಲ್ಲಿ ರಾಷ್ಟ್ರಗಳಿಗೆ ಇಲ್ಲ: ಸಚಿವೆ  
ಬಜೆಟ್‌ನಲ್ಲಿ ಮಂಡಿಸಲಾಗಿರುವ ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ)ತೆರಿಗೆ ವಿಧಿಸುವ ಪ್ರಸ್ತಾಪದಲ್ಲಿ ಮಧ್ಯಪ್ರಾಚ್ಯ ಮತ್ತು ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವವರಿಗೆ ಅನ್ವಯವಾಗುವುದಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ರವಿವಾರ ಹೇಳಿದ್ದಾರೆ. ಎನ್‌ಆರ್‌ಐ ಎಂಬ ವ್ಯವಸ್ಥೆ ಮುಂದಿಟ್ಟುಕೊಂಡು ತೆರಿಗೆ ತಪ್ಪಿಸುವವರಿಗೆ ಇದು ಅನ್ವಯ. ಅನಿವಾಸಿ ಭಾರತೀಯರು ಭಾರತದಲ್ಲಿ ಪಡೆದುಕೊಳ್ಳುವ ಆದಾಯದ ಮೇಲೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ. ಜತೆಗೆ ಎನ್‌ಆರ್‌ಐ ಎಂಬ ಮಾನ್ಯತೆ ಪಡೆಯಲು ಹಾಲಿ 184 ದಿನಗಳ ಬದಲು 241 ದಿನಗಳ ಕಾಲ ನಿಗದಿತ ದೇಶಗಳಲ್ಲಿ ಇರಬೇಕು ಎಂದು ನಿಯಮ ಬದಲಿಸಲಾಗಿದೆ.

ಹೊಸ ತೆರಿಗೆ ಪದ್ಧತಿಯನ್ನು ಸಮರ್ಥಿಸಿಕೊಂಡ ವಿತ್ತ ಸಚಿವೆ ಕೆಲ ಸ್ಲ್ಯಾಬ್‌ಗಳನ್ನು ಹೊಂದಿರುವವರಿಗೆ ಇದರಿಂದ ಅನುಕೂಲವಾಗಲಿದೆ ಎಂದಿದ್ದಾರೆ. “ದುಬಾೖ ಮತ್ತು ಇತರ ರಾಷ್ಟ್ರಗಳಲ್ಲಿ ಭಾರತೀಯರು ಪಡೆಯುವ ಆದಾಯಕ್ಕೆ ಸರಕಾರ ತೆರಿಗೆ ವಿಧಿಸುವುದಿಲ್ಲ. ಆದರೆ ಭಾರತದಲ್ಲಿ ಅಂಥವರು ಆದಾಯ ಪಡೆಯುತ್ತಿದ್ದರೆ ಅದಕ್ಕೆ ತೆರಿಗೆ ವಿಧಿಸಲಾಗುತ್ತದೆ’ ಎಂದು ವಿತ್ತ ಕಾರ್ಯದರ್ಶಿ ರಾಜೀವ್‌ ಕುಮಾರ್‌ ಹೇಳಿದ್ದಾರೆ.

ಎಲ್‌ಐಸಿ ಐಪಿಒ: ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿರುವಂತೆ ಭಾರತೀಯ ಜೀವ ವಿಮಾ ನಿಗಮದ ಐಪಿಒ ಮುಂದಿನ ವಿತ್ತೀಯ ವರ್ಷದ 2ನೇ ಭಾಗದಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ ಎಂದು ಹಣಕಾಸು ಕಾರ್ಯದರ್ಶಿ ರಾಜೀವ್‌ ಕುಮಾರ್‌ ರವಿವಾರ ಹೇಳಿದ್ದಾರೆ. ‘ಎಲ್‌ಐಸಿಯಿಂದ ಪಾಲು ಬಂಡವಾಳ ಮಾರಾಟ ಮಾಡಬೇಕಾಗಿದ್ದರೆ, ಕೆಲ ಕಾಯ್ದೆಗಳಲ್ಲಿ ಬದಲು ಮಾಡಬೇಕಾಗುತ್ತದೆ. ಈ ಬಗ್ಗೆ ಕೇಂದ್ರ ಕಾನೂನು ಖಾತೆ ಜತೆಗೆ ಸಮಾಲೋಚನೆ ನಡೆಸಬೇಕಾಗಿದೆ. ಆರಂಭಿಕ ಹಂತದಲ್ಲಿ ಶೇ.10ರಷ್ಟು ಪಾಲು ಬಂಡವಾಳ ಮಾರಾಟ ಮಾಡುವ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆ ಎಂದಿದ್ದಾರೆ.

ಹೊಸ ವಿನಾಯಿತಿ
– ಸಾವು ಅಥವಾ ನಿವೃತ್ತಿ ಸೌಲಭ್ಯಗಳು
– ಪಿಂಚಣಿ ಲೆಕ್ಕಾಚಾರ
– ನಿವೃತ್ತಿ ವೇಳೆ ರಜೆಗಾಗಿ ನಗದು ಗಳಿಕೆ
– ವಿಆರ್‌ಎಸ್‌ ಪಡೆದಾಗ 5 ಲಕ್ಷ ರೂ. ವರೆಗಿನ ಮೊತ್ತ
– ಇಪಿಎಫ್ ಮೊತ್ತ
– ವಿದ್ಯಾರ್ಥಿವೇತನಕ್ಕಾಗಿ ಪಡೆದ ಮೊತ್ತ
– ಸಾರ್ವಜನಿಕ ಹಿತಾಸಕ್ತಿಗಾಗಿ ಪಡೆದ ಪ್ರಶಸ್ತಿಯ ಮೊತ್ತ
– ನ್ಯಾಷನಲ್‌ ಪೆನ್ಶನ್‌ ಸ್ಕೀಂ ಮುಕ್ತಾಯದ ಅವಧಿ ಮತ್ತು ಅದಕ್ಕಿಂತ ಮೊದಲು ವಿಥ್‌ ಡ್ರಾ ಮಾಡಿದ ಮೊತ್ತ

ತೆಗೆದು ಹಾಕಲಾಗಿರುವ ವಿನಾಯಿತಿಗಳು
– ಸೆಕ್ಷನ್‌ 80 ಸಿ ಅನ್ವಯ ಹೂಡಿಕೆ ಮಾಡುವ ಇಎಲ್‌ಎಸ್‌ಎಸ್‌, ಎನ್‌ಪಿಎಸ್‌, ಪಿಪಿಎಫ್ (ಸದ್ಯ 1.50 ಲಕ್ಷ ರೂ. ವರೆಗೆ ಹೂಡಿಕೆಗೆ ಅವಕಾಶ)
– ವೈದ್ಯಕೀಯ ವಿಮೆ ಪ್ರೀಮಿಯಂ- 25 ಸಾವಿರ ರೂ.ವರೆಗೆ ವಿನಾಯಿತಿ
– ಸೆಕ್ಷನ್‌ 80ಡಿಡಿ/80 ಡಿಡಿಬಿ ವ್ಯಾಪ್ತಿಯಲ್ಲಿನ ಅಂಗವಿಕಲರಿಗೆ ನೀಡುವ ಸೌಲಭ್ಯ
– ವೇತನದಾರರಿಗೆ ಇರುವ ಲೀವ್‌ ಟ್ರಾವೆಲ್‌ ಅಲೊವೆನ್ಸ್‌
– ವೇತನದಾರರಿಗೆ ಇರುವ ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ)
– ವೇತನದಾರರಿಗೆ ಇರುವ ಸ್ಟಾಂಡರ್ಡ್‌ ಡಿಡಕ್ಷನ್‌ ಮೊತ್ತ 50 ಸಾವಿರ ರೂ.
– ಸೆಕ್ಷನ್‌ 16ರಲ್ಲಿರುವಂತೆ ಮನೋರಂಜನಾ ಭತ್ಯೆ ಮತ್ತು ವೃತ್ತಿ ತೆರಿಗೆ
– ಸೆಕ್ಷನ್‌ 24ರ ಅನ್ವಯ ಸ್ವಂತಕ್ಕಾಗಿ ಮನೆ ಹೊಂದಿರುವ ಅಥವಾ ಖಾಲಿ ಇರುವ ಮನೆಗಾಗಿ ಮಾಡಿರುವ ಗೃಹ ಸಾಲದ ಮೇಲಿನ ಬಡ್ಡಿಯ ಮೇಲಿನ ತೆರಿಗೆ ವಿನಾಯಿತಿ.
– ಸೆಕ್ಷನ್‌ 57ರ ಅನ್ವಯ ಕುಟುಂಬ ಪಿಂಚಣಿಯ ಅನ್ವಯ 15 ಸಾವಿರ ರೂ. ಡಿಡಕ್ಷನ್‌
ಸೆಕ್ಷನ್‌ 87ಎ ಅನ್ವಯ 5 ಲಕ್ಷ ರೂ. ವಾರ್ಷಿಕ ಆದಾಯ ಇರುವವರಿಗೆ 12,500 ರೂ. ವರೆಗಿನ ತೆರಿಗೆ ವಿನಾಯಿತಿ
– 2 ಲಕ್ಷ ರೂ. ವರೆಗಿನ ಗೃಹ ಸಾಲ ಮೇಲಿನ ಬಡ್ಡಿ ಮೇಲೆ ವಿಧಿಸಲಾಗುವ ಡಿಡಕ್ಷನ್‌
– ಸೆಕ್ಷನ್‌ 80ಇ ಅನ್ವಯ ಶಿಕ್ಷಣ ಸಾಲದ ಮೇಲಿನ ಬಡ್ಡಿಯ ಮೇಲಿನ ತೆರಿಗೆ
– ಸೆಕ್ಷನ್‌ 80ಜಿ ಅನ್ವಯ ಎನ್‌ಜಿಒಗಳಿಗೆ ನೀಡಿದ ದೇಣಿಗೆ ಮೇಲಿನ ತೆರಿಗೆ
– ಸೆಕ್ಷನ್‌ 80ಇಇಎ ಅನ್ವಯ 1.5 ಲಕ್ಷ ರೂ. ವರೆಗಿನ ಗೃಹ ಸಾಲದ ಮೇಲಿನ ಹೆಚ್ಚುವರಿ ಡಿಡಕ್ಷನ್‌
– ಸೆಕ್ಷನ್‌ 80ಇಇಬಿ ಅನ್ವಯ 1.5 ಲಕ್ಷ ರೂ. ವರೆಗಿನ ವಿದ್ಯುತ್‌ ವಾಹನ ಸಾಲದ ಮೇಲಿನ ಬಡ್ಡಿ
– ಆದಾಯ ತೆರಿಗೆ ಕಾಯ್ದೆಯ 80ಸಿ, 80 ಸಿಸಿಸಿ, 80ಸಿಸಿಡಿ, 80ಡಿ, 80 ಡಿಡಿ, 80 ಡಿಡಿಬಿ, 80ಇ, 80ಇಇ, 80ಇಇಎ, 80ಇಇಬಿ, 80ಜಿ, 80ಜಿಜಿ, 80ಜಿಜಿಎ, 80 ಜಿಜಿಸಿ, 80ಐಎ, 80-ಐಎಬಿ, 80-ಐಎಸಿ, 80-ಐಬಿ, 80-ಐಬಿಎಯ ಅನ್ವಯದಲ್ಲಿ ಪಡೆದುಕೊಳ್ಳುವ ವಿನಾಯಿತಿಗಳು ಹೊಸ ತೆರಿಗೆ ಪದ್ಧತಿಯಲ್ಲಿ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next