ಲಕ್ನೋ: ಶುಕ್ರವಾರ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಭಾರೀ ಮಳೆಯಿಂದಾಗಿ ಗೋಡೆಗಳು ಕುಸಿದು ಬಿದ್ದಿದ್ದು, ರಾಜಧಾನಿಯಲ್ಲಿ ಗೋಡೆ ಕುಸಿದು ಒಂಬತ್ತು ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಜೀವಂತ ಸಮಾಧಿಯಾದ ಅವಘಡ ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ.
ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರ 4 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸಿದೆ. ಲಕ್ನೋದಲ್ಲಿ, ರಾತ್ರಿಯ ಮಳೆಯ ನಂತರ ಆರ್ಮಿ ಎನ್‌ಕ್ಲೇವ್‌ನ ನಿರ್ಮಾಣ ಹಂತದ ಗಡಿ ಗೋಡೆ ಕುಸಿದು ಒಂಬತ್ತು ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಯಡಿಯೂರಪ್ಪ ಶುದ್ಧ ಹಸ್ತರಾಗಿ ಹೊರಬರುತ್ತಾರೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
“ಕೆಲವು ಕಾರ್ಮಿಕರು ದಿಲ್ಕುಶಾ ಪ್ರದೇಶದಲ್ಲಿನ ಆರ್ಮಿ ಎನ್‌ಕ್ಲೇವ್‌ನ ಹೊರಗೆ ಗುಡಿಸಲುಗಳಲ್ಲಿ ವಾಸಿಸುತ್ತಿದ್ದರು. ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ಸೇನಾ ಆವರಣದ ಗಡಿ ಗೋಡೆ ಕುಸಿದಿದೆ ಎಂದು ಜಂಟಿ ಪೊಲೀಸ್ ಕಮಿಷನರ್ ಪಿಯೂಷ್ ಮೊರ್ಡಿಯಾ ಪಿಟಿಐಗೆ ತಿಳಿಸಿದ್ದಾರೆ.
“ನಾವು ಸುಮಾರು 3 ಗಂಟೆಗೆ ಸ್ಥಳಕ್ಕೆ ತಲುಪಿದೆವು. ಒಂಬತ್ತು ದೇಹಗಳನ್ನು ಅವಶೇಷಗಳಿಂದ ಹೊರತೆಗೆಯಲಾಗಿದೆ. ಒಬ್ಬ ವ್ಯಕ್ತಿಯನ್ನು ಜೀವಂತವಾಗಿ ರಕ್ಷಿಸಲಾಗಿದೆ, ”ಎಂದು ಅವರು ಹೇಳಿದರು.