ಹೊಸದಿಲ್ಲಿ: ಭಾರತದಲ್ಲಿ ಅತಿ ಹೆಚ್ಚು ಲಂಚಗುಳಿತನ ಇರುವ ರಾಜ್ಯಗಳ ಸಾಲಿಗೆ ಈಗ ಕರ್ನಾಟಕವೂ ಸೇರ್ಪಡೆಯಾಗಿದೆ. ಲೋಕಲ್ ಸರ್ಕಲ್ಸ್ ಮತ್ತು ಟ್ರಾನ್ಸ್‌ಪೆರೆನ್ಸಿ ಇಂಟರ್‌ನ್ಯಾಷನಲ್ ಇಂಡಿಯಾ ಎಂಬ ಸಂಸ್ಥೆಗಳು ಜಂಟಿಯಾಗಿ ಸಿದ್ಧಪಡಿಸಿರುವ ‘ಕರಪ್ಷನ್ ಸರ್ವೇ’ ಎಂಬ ಸಮೀಕ್ಷಾ ವರದಿಯಲ್ಲಿ ಈ ವಿಚಾರವನ್ನು ಉಲ್ಲೇಖೀಸಲಾಗಿದೆ.
20 ರಾಜ್ಯಗಳ 1.9 ಲಕ್ಷ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಅವರ ಪ್ರತಿಕ್ರಿಯೆಗಳನ್ನು ಆಧರಿಸಿ, ಪ್ರತಿಯೊಂದು ರಾಜ್ಯದಲ್ಲಿರುವ ಲಂಚಾವತಾರಕ್ಕೆ ಶೇಕಡಾವಾರು ಅಂಕಗಳನ್ನು ನೀಡಲಾಗಿದೆ.
ಅದರಂತೆ, ಲಂಚದ ತೀವ್ರತೆ ಶೇ. 60ಕ್ಕಿಂತ ಹೆಚ್ಚಾಗಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವೂ (ಶೇ. 65) ಒಂದಾಗಿದ್ದು, ಈ ಪಟ್ಟಿಯಲ್ಲಿ ತೆಲಂಗಾಣ (67), ತಮಿಳುನಾಡು (62), ಪಂಜಾಬ್ (63), ರಾಜಸ್ಥಾನ (78), ಉತ್ತರ ಪ್ರದೇಶ (74), ಬಿಹಾರ (75), ಜಾರ್ಖಂಡ್ (74) ಇವೆ.
ಅತಿ ಕಡಿಮೆ (ಶೂನ್ಯದಿಂದ ಶೇ.49ರಷ್ಟು) ಲಂಚ ಇರುವ ರಾಜ್ಯಗಳ ಸಾಲಿನಲ್ಲಿ ಕೇರಳ (ಶೇ. 10), ಗುಜರಾತ್ (48), ದೆಹಲಿ (46), ಒಡಿಶಾ (40), ಪಶ್ಚಿಮ ಬಂಗಾಳ (46) ಇದ್ದರೆ, ಶೇ. 50ರಿಂದ 59ರ ನಡುವಿನ ಲಂಚಗುಳಿ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ (55), ಮಧ್ಯಪ್ರದೇಶ (55), ಚತ್ತೀಸ್‌ಗಢ (57), ಆಂಧ್ರಪ್ರದೇಶ (50), ಉತ್ತರಾಖಾಂಡ (50) ಕಾಣಿಸಿಕೊಂಡಿವೆ.