ಸುರತ್ಕಲ್ : ಒಂದೇ ವಾಹನದಲ್ಲಿ ಅನ್ಯ ಕೋಮಿನ ಯುವಕ ಯುವತಿಯರು ಒಟ್ಟಾಗಿ ಹೋದರು ಎಂಬ ಕಾರಣಕ್ಕೆ ಹಿಂದೂ ಸಂಘಟನೆ ಯುವಕರು ತಡೆದು ಪ್ರಶ್ನಿಸಿ, ನಿಂದಿಸಿದ ಆರೋಪದ ಮೇಲೆ ಐವರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿರುವ ಘಟನೆ ಸುರತ್ಕಲ್ ಟೋಲ್ ಗೇಟ್ ಬಳಿ ಮಂಗಳವಾರ ಬೆಳಿಗ್ಗೆ ನಡೆದಿದೆ.
ನಗರದ ಕಾಲೇಜೊಂದರ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮಲ್ಪೆ ಬೀಚ್ ಗೆ ತಿರುಗಾಡಲು ಬಂದು ವಾಪಾಸಾಗುವ ವೇಳೆ ಸುರತ್ಕಲ್ ಟೋಲ್ ಗೇಟ್ ಬಳಿ ಸಂಘಟನೆಯೊಂದರ ಕಾರ್ಯಕರ್ತರು ಕಾರಿನಲ್ಲಿ ಎರಡು ಕೋಮಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಜೊತೆಯಾಗಿ ತೆರಳಿದ್ದಾರೆ ಎಂಬ ಮಾಹಿತಿಯ ಮೇರೆಗೆ ತಡೆದು ಪ್ರಶ್ನಿಸಿ, ನಿಂದಿಸಿದ್ದಾರೆ.
ಇದೇ ವೇಳೆ ಸ್ಥಳದಲ್ಲಿದ್ದ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸ್ ಸಿ ಐ ಶರೀಫ್ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮುಂದಾಗಿದ್ದಾರೆ.ಇದರಿಂದ ಕಾರಿನಲ್ಲಿದ್ದವರು ಹಲ್ಲೆಯಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಸಾಮೂಹಿಕ ನಾಯಕತ್ವದಲ್ಲಿ ಉಪ ಚುನಾವಣೆಯಲ್ಲಿ ಚರ್ಚೆ: ಎಚ್.ಡಿ.ಕುಮಾರಸ್ವಾಮಿ
ಘಟನೆಯಲ್ಲಿ ಸಂಘಟನೆಯ ಕಾರ್ಯಕರ್ತರು ಕಾರಿಗೆ ಮುತ್ತಿಗೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಹಲ್ಲೆ ನಡೆಸಲು ಮುಂದಾಗಿರುವುದು ಕೂಡ ಕಂಡು ಬಂದಿದ್ದು ಆ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಸುರತ್ಕಲ್ ಪೊಲೀಸರು ಐವರನ್ನು ಬಂಧಿಸಿದ್ದು ವಿಚಾರಣೆ ನಡೆಸಿ ಜಾಮೀನು ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ತಿಳಿಸಿದ್ದಾರೆ.