ದಾಂಡೇಲಿ: ಕಾಳಿ ನದಿಯ ದಂಡೆಯ ಮೇಲೆ ಮೀನು ಹಿಡಿಯುತ್ತಿದ್ದ ಬಾಲಕನೋರ್ವನನ್ನು ಮೊಸಳೆಯೊಂದು ಎಳೆದೊಯ್ದು ಹೋದ ಘಟನೆ ನಗರದ ಹಳಿಯಾಳ ರಸ್ತೆಯ ವಿನಾಯಕ ನಗರದಲ್ಲಿರುವ ಕಾಳಿ ನದಿಯ ದಂಡೆಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ನಗರದ ಹಳಿಯಾಳ ರಸ್ತೆಯ ಅಲೈಡ್ ಪ್ರದೇಶದ ನಿವಾಸಿಯಾಗಿರುವ ಮೆಹಮೂದ್ ಅಲಿ ಮಿಯಾ ಗುಲ್ಬರ್ಗ ಎಂಬವರ ಮಗನಾದ 15 ವರ್ಷದ ಬಾಲಕ ಮೊಹಿನ್ ಮೆಹಮೂದ್ ಅಲಿ ಮಿಯಾ ಗುಲ್ಬರ್ಗ ಎಂಬತಾನನ್ನು ಮೊಸಳೆ ಎಳೆದೊಯ್ದುಕೊಂಡು ಹೋದ ಘಟನೆ ನಡೆದಿದೆ.
ಈ ಘಟನೆ ಕಾಡ್ಗಿಚ್ಚಿನಂತೆ ಹರಡಿದ್ದು, ನದಿಯ ಹತ್ತಿರ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರ ತೊಡಗಿದ್ದಾರೆ. ಈ ಘಟನೆ ನಡೆದ ತಕ್ಷಣವೆ ಅಲ್ಲೆ ಹತ್ತಿರದ ನಿವಾಸಿಯಾಗಿರುವ ನಗರ ಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್ ಅವರು ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಪೊಲೀಸ್ ವೃತ್ತ ನಿರೀಕ್ಷಕರಾದ ಪ್ರಭು ಗಂಗನಹಳ್ಳಿ, ಗ್ರಾಮೀಣ ಠಾಣೆಯ ಪಿಎಸೈ ಐ.ಆರ್.ಗಡ್ಡೇಕರ ಹಾಗೂ ಪೊಲೀಸ್ ಸಿಬ್ಬಂದಿಗಳು, ವಲಯಾರಣ್ಯಾಧಿಕಾರಿ ವಿನಯ್ ಭಟ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಕಾಗದ ಕಾರ್ಖಾನೆಯ ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಸ್ಥಳೀಯರು ಎರಡ್ಮೂರು ತೆಪ್ಪದ ಮೂಲಕ ಬಾಲಕನ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇತ್ತ ಜಂಗಲ್ ಲಾಡ್ಜಸ್ ಹಾಗೂ ಗಣೇಶಗುಡಿ ರ್ಯಾಪ್ಟಿಂಗಿನವರಿಗೆ ಮಾಹಿತಿ ನೀಡಿ ರ್ಯಾಪ್ಟ್ ಜೊತೆಗೆ ಸ್ಥಳಕ್ಕೆ ಕರೆಸಿ, ಅವರಿಂದಲೂ ಪತ್ತೆ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಪ್ರವಾಸೋದ್ಯಮಿಗಳಾದ ಸ್ಟ್ಯಾನ್ಲಿ, ರವಿ ನಾಯಕ ಮೊದಲಾದವರ ತಂಡ ರ್ಯಾಪ್ಟ್ ಮೂಲಕ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಸ್ಥಳದಲ್ಲಿ ನಗರ ಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್, ಉಪಾಧ್ಯಕ್ಷ ಸಂಜಯ್ ನಂದ್ಯಾಳ್ಕರ, ನಗರ ಸಭಾ ಸದಸ್ಯರುಗಳಾದ ಪ್ರೀತಿ ನಾಯರ್, ದಶರಥ ಬಂಡಿವಡ್ಡರ ಹಾಗೂ ನಗರದ ವಿವಿಧ ಸಂಘಟನೆಗಳ ಮುಖಂಡರುಗಳು ಮೊಕ್ಕಂ ಹೂಡಿದ್ದಾರೆ. ಈಗಾಗಲೆ ಗಣೇಶಗುಡಿ ಕೆಪಿಸಿಯವರಿಗೆ ಮಾಹಿತಿ ನೀಡಿ ನೀರು ಬಿಡುವುದನ್ನು ಸ್ಥಗಿತಗೊಳಿಸಲಾಗಿದೆ. ಸಂಜೆ ನಾಲ್ಕುವರೆ ಘಂಟೆ ಸುಮಾರಿಗೆ ಎರಡು ಸಲ ಬಾಲಕನನ್ನು ಮೇಲಕ್ಕೆತ್ತಿ ನೀರಿನ ಕೆಳಗಡೆ ಮೊಸಳೆ ಹೋಗಿರುವುದು ಕಂಡು ಬಂದಿದೆ. ಇದೀಗ ಈ ಘಟನೆ ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಇದೀಗ ಹಳಿಯಾಳ ರಸ್ತೆ, ಅಲೈಡ್ ಪ್ರದೇಶದಲ್ಲಿ ಸ್ಮಶಾನ ಮೌನ ಆವರಿಸಿದೆ.
ನಗರದಲ್ಲಿ ಮೊದಲ ಪ್ರಕರಣ :
ಮೊಸಳೆ ಬಾಲಕನನ್ನು ಎಳೆದುಕೊಂಡು ಹೋಗಿರುವುದು ನಗರದಲ್ಲಿ ಇದು ಮೊದಲ ಪ್ರಕರಣವಾಗಿ ದಾಖಲಾಗಿದೆ. ಮಾಹಿತಿಯ ಪ್ರಕಾರ ಮೊಸಳೆ ಈವರೇಗೆ ನರಬಲಿಯನ್ನು ಪಡೆದುಕೊಂಡಿರಲಿಲ್ಲ. ಮೊಸಳೆ ಜೀವಂತವಾಗಿ ಯಾವುದನ್ನು ತಿನ್ನುವುದಿಲ್ಲ. ಕೊಳೆತ ನಂತರದಲ್ಲಿ ತಿನ್ನುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿ ಬರಲಾರಂಭಿಸಿದೆ. ಹಾಗಾಗಿ ಬಾಲಕನನ್ನು ಅವಿತಿಟ್ಟರಬಹುದೆಂದು ಶಂಕಿಸಲಾಗಿದೆ.
ಈಗಾಗಲೇ ನಗರ ಸಭೆಯಿಂದ ಬಹಳಷ್ಟು ಬಾರಿ ಇಲ್ಲಿ ಸ್ವಚ್ಚತಾ ಕಾರ್ಯವನ್ನು ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣ ಮರುಕಳಿಸದಂತೆ ಅರಣ್ಯ ಇಲಾಖೆಯವರು ಹೆಚ್ಚಿನ ಮುತುವರ್ಜಿ ವಹಿಸಿ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ನಗರ ಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.