ಉಪ್ಪಿನಂಗಡಿ: ಇತ್ತೀಚೆಗೆ ಸಂಭವಿಸಿದ ವಿದ್ಯಾರ್ಥಿನಿಯೋರ್ವಳ ಸಾವಿಗೆ ಸಂಬಂಧಿಸಿ ಗ್ರಾಮಸ್ಥರೋರ್ವರ ಪ್ರಶ್ನೆಗಳಿಂದ ತತ್ತರಿಸಿದ ವೈದ್ಯಾಧಿಕಾರಿ ಯೋರ್ವರು ವಿಚಲಿತರಾಗಿ ಕುಸಿದು ಬಿದ್ದು, ಆಸ್ಪತ್ರೆಗೆ ದಾಖಲಾದ ಘಟನೆ ಆ. 9ರಂದು ನಡೆದ ಗೋಳಿತ್ತೂಟ್ಟು ಗ್ರಾಮ ಸಭೆಯಲ್ಲಿ ಸಂಭವಿಸಿದೆ.
ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಶಿಶಿರ ಅವರು ಅಸ್ವಸ್ಥರಾದವರು. ಗ್ರಾ.ಪಂ. ಅಧ್ಯಕ್ಷ ಜನಾರ್ದನ ಗೌಡ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಈ ಘಟನೆ ನಡೆದಿದೆ.
ಗ್ರಾಮದ ಮಮತಾ ಎಂಬ ವಿದ್ಯಾರ್ಥಿನಿ ಚಿಕಿತ್ಸೆಗಾಗಿ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ತೆರಳಿದವರು ಅಲ್ಲಿ ಮೃತಪಟ್ಟಿದ್ದಾರೆ. ಅವರ ಸಾವಿಗೆ ಕಾರಣ ಏನು ಎಂದು ಗ್ರಾಮಸ್ಥರು ಪ್ರಶ್ನಿಸಿದರಲ್ಲದೆ ನೀವಿಲ್ಲಿ ಸೂಕ್ತ ಚಿಕಿತ್ಸೆ ನೀಡಿಲ್ಲ ಎಂದು ಆರೋಪಿಸಿದರು. ವೈದ್ಯಾಧಿಕಾರಿ ಉತ್ತರಿಸಿ, ಮಮತಾ ಅವರನ್ನು ಇಲ್ಲಿಗೆ ಕರೆದುಕೊಂಡು ಬಂದಾಗ ಆರೋಗ್ಯ ಸ್ಥಿತಿ ತೀರಾ ಬಿಗಡಾಯಿಸಿತ್ತು. ತತ್‌ಕ್ಷಣವೇ ಪುತ್ತೂರಿಗೆ ಕಳುಹಿಸಿಕೊಟ್ಟಿದ್ದೇನೆ.
ಆ ಸಮಯಕ್ಕೆ ಆ್ಯಂಬುಲೆನ್ಸ್ ಇಲ್ಲಿರಲಿಲ್ಲ. 20 ನಿಮಿಷಗಳ ಅವಧಿಯಲ್ಲಿ ನಾನು ಆ ಹುಡುಗಿಗೆ ತತ್‌ಕ್ಷಣಕ್ಕೆ ಬೇಕಾದ ತುರ್ತು ಚಿಕಿತ್ಸೆ ನೀಡಿದ್ದೇನೆ. ಬಳಿಕ ಆಕ್ಸಿಜನ್ ಇದ್ದ ಆ್ಯಂಬುಲೆನ್ಸ್‌ನಲ್ಲಿ ಆಕೆಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಅಲ್ಲಿ ಮೃತಪಟ್ಟಿದ್ದಾಳೆ ಎಂಬ ಮಾಹಿತಿ ನನಗೆ ಬಂದಿದೆ. ಆಕೆ 2-3 ತಿಂಗಳ ಹಿಂದೆಯೇ ಅನಾರೋಗ್ಯದಿಂದಿದ್ದಳು. ಇದರಿಂದಾಗಿ ಆಕೆ ಕಾಲೇಜಿಗೂ ರಜೆಯನ್ನು ಹಾಕಿದ್ದಳು ಎಂದು ತಿಳಿಸಿದರು.
ಆದರೂ ಇದಕ್ಕೆ ತೃಪ್ತಿಗೊಳ್ಳದ ಗ್ರಾಮಸ್ಥ, ಆಕೆಯ ಸಾವಿನ ಕಾರಣ ನಮಗೆ ಬೇಕು. ಮೃತದೇಹವನ್ನು ಮರಣೋತ್ತರ ಪರೀಕ್ಷೆ ಕೂಡ ಮಾಡಿಲ್ಲ. ಬಡವರೆಂದು ಈ ರೀತಿ ಮಾಡಿಧ್ದೋ? ಎಂದು ಪ್ರಶ್ನೆಗಳ ಸುರಿಮಳೆಗೈದರು. ಸಮರ್ಪಕ ಉತ್ತರ ನೀಡುತ್ತಿದ್ದರೂ ತೃಪ್ತರಾಗದ ಗ್ರಾಮಸ್ಥ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಎಸೆಯುತ್ತಿದ್ದಂತೆ ವಿಚಲಿತರಾದ ವೈದ್ಯಾಧಿಕಾರಿ ಟೇಬಲ್‌ನಲ್ಲಿದ್ದ ನೀರು ಕುಡಿದು, ಗ್ರಾ.ಪಂ. ಕಚೇರಿಯ ಕೊಠಡಿಯೊಳಗೆ ಹೋಗಿ ಅಲ್ಲಿ ಕುಸಿದು ಬಿದ್ದರು. ಚಿಕಿತ್ಸೆಗಾಗಿ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ, ಬಳಿಕ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.