ವಾಡಿ (ಚಿತ್ತಾಪುರ): ಸಿಡಿಲು ಬಡಿದು ಇಬ್ಬರು ಕೃಷಿ ಕಾರ್ಮಿಕರು ಮೃತಪಟ್ಟ ಘಟನೆ ಚಿತ್ತಾಪುರ ತಾಲೂಕಿನ ಬಳವಡಗಿ ಗ್ರಾಮದಲ್ಲಿ ಸಂಭವಿಸಿದೆ.
ಬಳವಡಗಿ ಗ್ರಾಮದ ನಿವಾಸಿಗಳಾದ ರಾಜ್ ಅಹ್ಮದ್ (65) ಹಾಗೂ ಜಬ್ಬಾರ್ (32) ಮೃತ ದುರ್ದೈವಿಗಳು. ಮಂಗಳವಾರ ಸಂಜೆ 3:00 ಗಂಟೆಗೆ ಏಕಾಏಕಿ ಮೋಡಗಳ ಘರ್ಜನೆ ಶುರುವಾಗಿ ಸಿಡಿಲು ಅಪ್ಪಳಿಸಿದೆ.
ಮೃತರು ಗ್ರಾಮದ ವಿಶ್ವನಾಥ ರೆಡ್ಡಿ ಮಾಲಿ ಪಾಟೀಲ್ ಎಂಬುವವರ ಹೊಲದಲ್ಲಿ ಕೂಲಿಯಾಳುಗಳಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಸಿಡಿಲಬ್ಬರದ ಮಳೆಯ ಆರ್ಭಟಕ್ಕೆ ಹೆದರಿ ರಾಜ್ ಅಹ್ಮದ್ ಮತ್ತು ಜಬ್ಬಾರ್, ಸಮೀಪದ ಮರದ ಆಸರೆ ಪಡೆದಿದ್ದಾರೆ. ಈ ವೇಳೆ ದೊಡ್ಡ ಸದ್ದಿನ ಮೂಲಕ ಧರೆಗಪ್ಪಳಿಸಿದ ಸಿಡಿಲಿನ ಹೊಡೆತಕ್ಕೆ ಇಬ್ಬರೂ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಮೃತರ ಶವಗಳನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.
ಘಟನೆಯಲ್ಲಿ ಗಾಯಗೊಂಡ ಕೃಷಿ ಕಾರ್ಮಿಕರಾದ ಮಲ್ಲಪ್ಪ (24) ಹಾಗೂ ಮಲ್ಲಿಕಾರ್ಜುನ (25) ಎಂಬುವವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಾಡಿ ಠಾಣೆಯ ಪೊಲೀಸರು ತಿಳಿಸಿದ್ದಾರೆ.