ಸಾಗರ: ತಾಲೂಕಿನ ಕಾರ್ಗಲ್ ಸಮೀಪದ ತಳಕಳಲೆ ಹಿನ್ನಿರಿನ ಪ್ರದೇಶದಲ್ಲಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ದಿನಗೂಲಿ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ ಧನಪಾಲ್(49) ಕರ್ತವ್ಯ ನಿರತನಾಗಿದ್ದಾಗಲೇ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದ ಘಟನೆ ಮಂಗಳವಾರ ನಡೆದಿದೆ.
ತಕ್ಷಣ ಸ್ಥಳೀಯರು ಆಗಮಿಸಿ ಧನಪಾಲ್ ಅವರನ್ನು ಕಾರ್ಗಲ್‌ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದರಾದರೂ ಅವರು ಅಷ್ಟರಲ್ಲಾಗಲೇ ಮೃತಪಟ್ಟಿದ್ದರು. ಈ ವಿಷಯವನ್ನು ದೂರವಾಣಿ ಮೂಲಕ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸ್ಥಳಿಯರು ತಿಳಿಸಿದರೂ ಅಧಿಕಾರಿಗಳು ಸ್ಥಳಕ್ಕೆ ಬರದಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಪರಿಹಾರ ಕುರಿತು ಇತ್ಯರ್ಥ ಆಗುವವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹೆಣ ಎತ್ತುವುದಿಲ್ಲ ಎಂದು ಅವರು ಪಟ್ಟು ಹಿಡಿದರು. ದೂರವಾಣಿಯಲ್ಲಿ ಸಂಪರ್ಕಿಸಿದಾಗ, ಗುತ್ತಿಗೆ ಆಧಾರಿತ ನೌಕರರು ನಮಗೆ ಸಂಬಂಧಿಸಿದವರಲ್ಲ. ಅವರ ಕುರಿತು ಗುತ್ತಿಗೆದಾರ ಕಂಪನಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಉಡಾಫೆಯಿಂದ ವರ್ತಿಸಿರುವ ಕುರಿತು ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದರು.
ನಂತರ ಸ್ಥಳಕ್ಕೆ ಆಗಮಿಸಿದ ಇಲಾಖೆಯ ಅಧಿಕಾರಿಗಳು ಮೃತನ ಕುಟುಂಬಕ್ಕೆ 1.50 ಲಕ್ಷ ರೂಪಾಯಿಗಳ ಪರಿಹಾರ ಘೋಷಣೆ ಮಾಡಿದ್ದಾರೆ. ಮೃತ ವ್ಯಕ್ತಿಯ ಮಗನಿಗೆ ಅನುಕಂಪದ ಆಧಾರದಲ್ಲಿ ನೌಕರಿ ನೀಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು. ಕರ್ನಾಟಕ ಕಾರ್ಮಿಕ ಸೇನೆಯ ರಾಜ್ಯ ಅಧ್ಯಕ್ಷ ಎಂ.ಸ್.ಇಲಿಯಾಸ್ ವಹಿಸಿದ್ದರು. ಕಾರ್ಗಲ್ ಜೋಗ್ ಕಾಂಗ್ರೆಸ್ ಘಟಕದ ಅಧ್ಯಕ್ಷ ವಿ.ಸಂತೋಷ್ ಕುಮಾರ್, ಪಪಂ ಸದಸ್ಯ ಬಾಲಸುಬ್ರಮಣ್ಯ, ಸ್ಥಳೀಯರಾದ ಶ್ರೀಧರ್, ನದೀಮ್, ಸ್ಥಳೀಯ ದಸಂಸ ಸದಸ್ಯರು ಮತ್ತು ತಳಕಳಲೆ ಗ್ರಾಮದ ಮುಖಂಡರು ಮುಂತಾದವರು ಭಾಗವಹಿಸಿದ್ದರು.