ಕಟಪಾಡಿ: ಮಟ್ಟು ಕಾಲೋನಿ ಸಮೀಪದ ಶ್ರೀ ಬ್ರಹ್ಮಮುಗ್ಗೇರ್ಕಳ ದೈವಸ್ಥಾನದ ಬಳಿ ಗುಲಾಬಿ ಜಯ ಬಂಗೇರ ಎಂಬವರ ಗುಡಿಸಲೊಂದಕ್ಕೆ ಆ.24ರಂದು ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು 50 ಸಾವಿರಕ್ಕೂ ಅಧಿಕ ನಷ್ಟ ಸಂಭವಿಸಿದೆ.
ದೇವರಿಗೆ ಹಚ್ಚಿಟ್ಟ ದೀಪದ ಮೂಲಕ ಆಕಸ್ಮಿಕವಾಗಿ ಬೆಂಕಿಯು ಮನೆಯೊಳಗೆ ವ್ಯಾಪಿಸಿದ್ದಾಗಿ ಮನೆಮಂದಿ ಪರಿತಪಿಸುತ್ತಿದ್ದು, ಗುಡಿಸಲಿನ ಮಾಡಿಗೆ ಹೊದಿಸಿದ್ದ ಟರ್ಪಲ್ ಸುಟ್ಟು ಕರಕಲಾಗಿರುತ್ತದೆ. ಮನೆಯೊಳಗಿದ್ದ ಪೀಠೋಪಕರಣ, ಔಷಧಿ, ಧವಸ ಧಾನ್ಯ, ಮೀನುಗಾರಿಕೆಗೆ ಉಪಯೋಗಿಸುವ ಬಲೆ ಸಹಿತ ಗೃಹೋಪಯೋಗಿ ಸೊತ್ತುಗಳು ಸುಟ್ಟು ಕರಕಲಾಗಿರುತ್ತದೆ.
ದಿನಗೂಲಿ ನೌಕರರಾಗಿರುವ ಗುಲಾಬಿ ಜಯ ಬಂಗೇರ ಅವರು ಪುತ್ರರನ್ನು ಮನೆಯ ಬಳಿ ಬಿಟ್ಟು ಬೆಳಿಗ್ಗೆ 8 ಗಂಟೆಯ ಸುಮಾರಿಗೆ ನಿತ್ಯದ ದಿನಗೂಲಿಗೆ ತೆರಳಿದ್ದರು. ಮಕ್ಕಳು ನೆರೆ ಮನೆಯ ಬಳಿ ಆಟವಾಡುತ್ತಿದ್ದರು. ಆ ಸಂದರ್ಭ ಮನೆಯ ಮಾಡಿನಿಂದ ದಟ್ಟವಾಗಿ ಬೆಂಕಿ ಸಹಿತ ಹೊಗೆಯು ಕಂಡು ಬಂದಿದ್ದರಿಂದ ನೆರೆ ಹೊರೆಯವರು ಆಗಮಿಸಿ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದು, ಅದಾಗಲೇ ಸಾಕಷ್ಟು ಹಾನಿ ಸಂಭವಿಸಿತ್ತು. ಬೆಂಕಿ ಹತ್ತಿ ಉರಿಯುವ ಸಂದರ್ಭ ಮನೆಯಲ್ಲಿ ಯಾರೂ ಇಲ್ಲದ ಕಾರಣ ಸಂಭಾವ್ಯ ಪ್ರಾಣಾಪಾಯದಂತಹ ಹೆಚ್ಚಿನ ದುರಂತವು ತಪ್ಪಿತ್ತು ಎಂದು ಸ್ಥಳೀಯರು ನಿಟ್ಟುಸಿರು ಬಿಡುತ್ತಿರುವುದು ಕಂಡು ಬಂದಿತ್ತು.
ಇದನ್ನೂ ಓದಿ:ತಾಲಿಬಾನ್‌ಗೆ ಚೀನ ನೆರವು ಘೋಷಣೆ!
ಬಡಕುಟುಂಬವು ಮನೆಯ ನಿತ್ಯೋಪಯೋಗಿ ಧವಸ ಧಾನ್ಯ ಸಹಿತ ಬೀಡಿ ಕಟ್ಟುವ ಎಲೆ, ಹೊಗೆಸೊಪ್ಪು, ದಿನಗೂಲಿ ನೌಕರಿಯಿಂದ ದುಡಿದು ತಂದ ತಿಂಡಿ ತಿನಿಸು ಸಹಿತ ಆಹಾರ ಸಾಮಾಗ್ರಿಯನ್ನೂ ಕಳೆದುಕೊಂಡ ತಮ್ಮ ಅಸಹಾಯಕತೆ, ಸಂಕಟವನ್ನು ನೆನೆದು ಕಣ್ಣೀರಿಡುತ್ತಿರುವುದು ಕಂಡು ಬಂದಿದ್ದು, ನೆರೆ ಹೊರೆಯವರು ಸುಟ್ಟು ಕರಕಲಾದ ಸಾಮಾಗ್ರಿಗಳ ಸಹಿತ ಅಳಿದುಳಿದ ಪರಿಕರಗಳನ್ನು, ಬಟ್ಟೆ ಬರೆಗಳನ್ನು ತೆರವುಗೊಳಿಸುವಲ್ಲಿ ಕೈ ಜೋಡಿಸುತ್ತಿದ್ದರು.
ಘಟನಾ ಸ್ಥಳಕ್ಕೆ ಕೋಟೆ ಗ್ರಾ.ಪಂ. ಅಧ್ಯಕ್ಷ ಕಿಶೋರ್ ಅಂಬಾಡಿ, ಸದಸ್ಯರಾದ ದಯಾನಂದ ಬಂಗೇರ, ಯೋಗೀಶ್ ಮಟ್ಟು, ನಾಗರಾಜ್ ಮಟ್ಟು, ರಮೇಶ್ ಪೂಜಾರಿ, ಪ್ರೇಮಾ, ಪಿಡಿಒ ಶ್ರುತಿ ಕಾಂಚನ್, ಗ್ರಾಮ ಲೆಕ್ಕಿಗ ಲೋಕನಾಥ್ ಲಮ್ಹಾಣಿ, ಗ್ರಾಮ ಸಹಾಯಕ ಕೃಷ್ಣ ಮತ್ತಿತರರು ಭೇಟಿ ನೀಡಿ ಪರಿಶೀಲನೆ ನಡೆಸಿರುತ್ತಾರೆ.