Advertisement

ಡಿಸಿ ಕಚೇರಿ ಆವರಣದಲ್ಲೇ ಕ್ರಿಮಿನಾಶಕ ಸೇವಿಸಿದ ಖಾಸಗಿ ಶಾಲೆ ಮುಖ್ಯಸ್ಥ

05:42 PM Feb 26, 2021 | Team Udayavani |

ಕಲಬುರಗಿ: ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮತ್ತು ಶಿಕ್ಷಕರ ಪ್ರತಿಭಟನೆ ವೇಳೆ ಶಾಲಾ ಮುಖ್ಯಸ್ಥರೊಬ್ಬರು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

Advertisement

ಜೇವರ್ಗಿ ತಾಲೂಕಿನ ಸಿದ್ಧಗಂಗಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮುಖ್ಯಸ್ಥ ಪ್ರಕಾಶ ಎಂಬುವವರೇ ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದು, ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು. ಈ ಘಟನೆ ವೇಳೆ ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ ಸ್ಥಳದಲ್ಲೇ ಇದ್ದರು.

ಕಲ್ಯಾಣ ಕರ್ನಾಟಕ ಅನುದಾನರಹಿತ ಶಾಲಾ ಆಡಳಿತ ಮಂಡಳಿಯ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದ ಸೇಡಂ ಪಟ್ಟಣದ ವಿಶ್ವಗಂಗಾ ಶಿಕ್ಷಣ ಸಂಸ್ಥೆಯ ಶಂಕರ ಬಿರಾದಾರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ನೇತೃತ್ವದಲ್ಲಿ ಶಿಕ್ಷಣ ಸಂಸ್ಥೆ ಮುಖ್ಯಸ್ಥರು, ಶಿಕ್ಷಕರು ಸೇರಿ ನೂರಾರು ಜನರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಂಡಿದ್ದರು.

ಇದನ್ನೂ ಓದಿ:ಹೈವೋಲ್ಟೇಜ್; ಪ. ಬಂಗಾಳ ಸೇರಿ ಐದು ರಾಜ್ಯಗಳ ಚುನಾವಣೆಗೆ ಮುಹೂರ್ತ ನಿಗದಿ, ಮೇ 2ರಂದು ರಿಸಲ್ಟ್

ಶಂಕರ ಬಿರಾದಾರ ಸಾಲಬಾಧೆಯಿಂದ ಬುಧವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಕ್ಕೆ ಸಾಲ ಪಾವತಿಗಾಗಿ ಪೀಡಿಸುತ್ತಿದ್ದ ಬ್ಯಾಂಕ್ ನವರು, ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರವೇ ಕಾರಣ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದ್ದರು. ಅಲ್ಲದೇ, ಜಿಲ್ಲಾಧಿಕಾರಿಗಳು ಖುದ್ದು ಸ್ಥಳಕ್ಕೆ ಬಂದು ಖಾಸಗಿ ಸಂಸ್ಥೆಗಳ ಸಮಸ್ಯೆ ಆಲಿಸಬೇಕೆಂದು ಆಗ್ರಹಿಸಿದರು.

Advertisement

ಜಿಲ್ಲಾಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಬರಲೇಬೇಕೆಂದು ಸುಮಾರು ಹೊತ್ತು ಪಟ್ಟು ಹಿಡಿದರೂ ಯಾರೂ ಬರಲಿಲ್ಲ. ಇದರಿಂದ ಪ್ರತಿಭಟನಾನಿರತರು ಆಕ್ರೋಶಗೊಂಡರು. ಈ ನಡುವೆ ಪ್ರಕಾಶ ಅವರು ಹೊರ ಹೋಗಿ ಕ್ರಿಮಿನಾಶಕ ಬಾಟಲಿಯೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಆವರಣಕ್ಕೆ ಬಂದರು. ಘೋಷಣೆ ಕೂಗುತ್ತಾ ನೋಡನೋಡುತ್ತಲೇ ಕ್ರಿಮಿನಾಶಕವನ್ನು ಸೇವಿಸಿದರು. ಆಗ ತಕ್ಷಣವೇ ಸ್ಥಳದಲ್ಲಿದ್ದ ಇತರರು ಬಾಟಲಿಯನ್ನು ಎಳೆದುಕೊಳ್ಳಲು ಯತ್ನಿಸಿದರು. ಆದರೂ, ವಿಷವನ್ನು ಕುಡಿದ ಕೊಂಚ ಕ್ಷಣದಲ್ಲೇ ಕುಸಿದು ಬಿದ್ದರು. ಕೂಡಲೇ ಅವರನ್ನು ಪೊಲೀಸ್ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು.

ನಮೋಶಿಗೂ ತಲೆ ಸುತ್ತು: ಇದಕ್ಕೂ ಮುಂಚೆ ಮಧ್ಯಾಹ್ನ 12 ಗಂಟೆಯಿಂದ ಪ್ರತಿಭಟನೆ ನಡೆಸುತ್ತಿದ್ದರೂ, ಜಿಲ್ಲಾಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಾನಿರತರು ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ ಅವರಿಗೆ ದೂರವಾಣಿ ಕರೆ ಮಾಡಿ ಆಕ್ರೋಶ ಹೊರ ವ್ಯಕ್ತಪಡಿಸಿದರು.ಶಿಕ್ಷಕರ ಆಕ್ರೋಶಕ್ಕೆ ಮಣಿದ ನಮೋಶಿ ಸ್ಥಳಕ್ಕೆ ಆಗಮಿಸಿದರು. ಅವರು ಶಿಕ್ಷಕರ ಸಮಸ್ಯೆ ಆಲಿಸುತ್ತಿದ್ದಾಗಲೇ, ಇತ್ತ ಕಡೆ ಪ್ರಕಾಶ ಜಿಲ್ಲಾಧಿಕಾರಿ ಕಚೇರಿಯ ಮೆಟ್ಟಿಲು ಏರಿ ಕ್ರಿಮಿನಾಶಕ ಕುಡಿದರು. ಅವರನ್ನು ಆಸ್ಪತ್ರೆಗೆ ಸಾಗಿಸಿದ ಬಳಿಕ ಬಿಸಿಲಲ್ಲಿ ನಿಂತು ಮಾತನಾಡುತ್ತಿದ್ದ ನಮೋಶಿ ಅವರು ತಲೆ ಸುತ್ತು ಬಂದ ಪರಿಣಾಮ ಅವರು ಸ್ಪಲ್ಪ ಸಮಯ ಮರದಡಿ ವಿಶ್ರಾಂತಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next