ಸಕಲೇಶಪುರ: ಗಣೇಶ ವಿಸರ್ಜನಾ ವೇಳೆಯಲ್ಲಿ ಯುವಕರ ಗುಂಪೊಂದು ಪೋಲಿಸರನ್ನು ತಳ್ಳಾಡಿದ ಘಟನೆ ಪಟ್ಟಣದಲ್ಲಿ ನಡೆದಿದೆ.
ಶುಕ್ರವಾರ ಸಂಜೆ ತಾಲೂಕು ವಿ.ಎಚ್.ಪಿ ಭಜರಂಗದಳದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ 5ನೇ ವರ್ಷದ ರಾಮದೂತ ಗಣಪತಿ ವಿಸರ್ಜನೆ ಅಂಗವಾಗಿ ನಡೆದ ಮೆರವಣಿಗೆಯಲ್ಲಿ ನೂರಾರು ಯುವಕರು ಭಾಗಿಯಾಗಿದ್ದರು. ಎಸ್.ಎಮ್ ಟವರ್ಸ್ ಸಮೀಪ ವಾದ್ಯವೃಂದದವರನ್ನು ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಬೇರೆ ಮಾರ್ಗದಲ್ಲಿ ಹೋಗಿ ಎಂದು ನಗರ ಠಾಣೆ ಪಿಎಸ್ಐ ಬಸವರಾಜ್ ಚಿಂಚೋಳಿ ಅವರು ಹೇಳಿದಕ್ಕೆ ಕೆಲವು ಯುವಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಪಿಎಸ್ಐ ಬಸವರಾಜ್ ಚಿಂಚೋಳಿ ಅವರು ಡೋಲು ಬಾರಿಸುತ್ತಿದ್ದ ಓರ್ವನ ಕೋಲು ಕಿತ್ತು ಕೊಂಡಿದ್ದಾರೆ. ಇದನ್ನು ನೋಡಿದ ಸಂಘ ಪರಿವಾರದ ಯುವಕನೋರ್ವ ಎಸ್.ಐ ಬಳಿಯಿಂದ ಡೋಲಿನ ಕೋಲನ್ನು ಕಿತ್ತುಕೊಂಡು ವಾದ್ಯವೃಂದದವರಿಗೆ ನೀಡಿದ್ದಾನೆ. ಬಸವರಾಜ್ ಚಿಂಚೋಳಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಯಾಗಿರುವುದನ್ನು ಕೆಲವರು ಮೊಬೈಲ್ ಮೂಲಕ ಸೆರೆ ಹಿಡಿದಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ.
ಇದನ್ನೂ ಓದಿ:2022 ಚುನಾವಣೆ ಟಾರ್ಗೆಟ್ : ‘ಜನ್ ಮನ್ ವಿಜಯ್’ ಅಭಿಯಾನಕ್ಕೆ ಅಖಿಲೇಶ್ ಯಾದವ್ ಚಾಲನೆ
ಕೋವಿಡ್ ಸಮಯದಲ್ಲಿ ನೂರಾರು ಜನರನ್ನು ಸೇರಿಸಿ ಪೋಲಿಸರ ವಿರುದ್ದ ಗೂಂಡಾ ವರ್ತನೆ ಮಾಡಿರುವ ಭಜರಂಗದಳ ಕಾರ್ಯಕರ್ತರ ವಿರುದ್ದ ಪ್ರಕರಣ ದಾಖಲಿಸಬೇಕೆಂದು ಪ್ರಗತಿ ಪರ ಸಂಘಟನೆಗಳು ಆಗ್ರಹಿಸಿದ್ದು ಇದೇ ವೇಳೆ ತಾವೇ ಸ್ವತ: ಮಾಸ್ಕ್ ಧರಿಸದೆ ಸರಿಯಾಗಿ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ನಗರ ಠಾಣೆ ಪಿಎಸ್ಐ ಬಸವರಾಜ್ ಚಿಂಚೋಳಿ ಅವರು ಎಡವಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಅಂತಿಮವಾಗಿ ಭಜರಂಗದಳ ದಕ್ಷಿಣ ಪ್ರಾಂತ ಸಹ ಸಂಚಾಲಕ ರಘು ಪತ್ರಿಕಾ ಹೇಳಿಕೆ ನೀಡಿ ಪೋಲಿಸರು ಮೆರವಣಿಗೆಯಲ್ಲಿ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ಮೆರವಣಿಗೆಯ ದಾರಿ ಕುರಿತು ನಡೆದ ಮಾತಿನ ಚಕಮಕಿಯನ್ನು ಕೆಲವರು ವಿಡಿಯೋ ಮಾಡಿ ಕೆಟ್ಟದಾಗಿ ಬಿಂಬಿಸಿದ್ದಾರೆ. ಭಜರಂಗದಳ ಸಂಘಟನೆ ಕಾನೂನು ಸುವ್ಯವಸ್ಥೆಗೆ ಸದಾ ಬದ್ದವಾಗಿದ್ದು, ಈ ಘಟನೆ ಕುರಿತು ಅಪಪ್ರಚಾರ ಸರಿಯಲ್ಲ ಎಂದಿದ್ದಾರೆ.
ಗಣೇಶೋತ್ಸವ ಆಚರಿಸುವ ಕುರಿತು ಸರ್ಕಾರದ ಪರಿಷ್ಕೃತ ಮಾರ್ಗಸೂಚಿ ವಿರುದ್ಧವಾಗಿ ಭಜರಂಗದಳ ಮತ್ತು ವಿಶ್ವಹಿಂದೂ ಪರಿಷತ್ ಗಣಪತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ನಡೆಸಿ ಪೋಲಿಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನಲೆಯಲ್ಲಿ 14 ಜನರ ಮೇಲೆ ಸುಮೋಟೋ ಕೇಸ್ ದಾಖಲುಮಾಡಲಾಗಿದೆ.