ಪುತ್ತೂರು: ಪುತ್ತೂರಿನ ಛತ್ರವೊಂದರಲ್ಲಿ ಮದುವೆ ನಿಗದಿಯಾಗಿದ್ದ ಯುವತಿಯೊಬ್ಬಳನ್ನು ಯುವಕನೊಬ್ಬ ಬಲವಂತವಾಗಿ ತಾಳಿ ಕಟ್ಟಿ ಅಪಹರಿಸಿರುವ ಬಗ್ಗೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ದೂರು ದಾಖಲಾಗಿದೆ.
ಸಕಲೇಶಪುರ ಪಟ್ಟಣದ ಕುಶಾಲನಗರ ಬಡಾವಣೆಯ ಯುವತಿಗೆ ದ.ಕ. ಜಿಲ್ಲೆಯ ಪುತ್ತೂರಿನ ಯುವಕನೊಂದಿಗೆ ವಿವಾಹ ನಿಗದಿಯಾಗಿತ್ತು ಜ. 25ರಂದು ಪುತ್ತೂರಿನ ಸಭಾಭವನದಲ್ಲಿ ವಿವಾಹ ನಿಗದಿಯಾಗಿತ್ತು.
ಈ ನಡುವೆ ಅರೆಕೆರೆ ಗ್ರಾಮದ ಸತೀಶ್ ತನ್ನ ಗೆಳೆಯರ ಜತೆ ಜ. 21ರಂದು ಯುವತಿಯ ಮನೆಗೆ ಬಂದು ಆಕೆಗೆ ಬಲವಂತವಾಗಿ ತಾಳಿಕಟ್ಟಿ ಬೆದರಿಸಿ ಕರೆದುಕೊಂಡು ಹೋಗಿದ್ದಾನೆ ಎಂದು ಯುವತಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
ಮದುವೆ ನಿಶ್ಚಯವಾಗಿರುವ ಹುಡುಗಿಯನ್ನು ತಾನು ಪ್ರೀತಿಸುತ್ತಿರುವುದಾಗಿ ಆರೋಪಿ ಸತೀಶ್ ಸ್ನೇಹಿತರ ಬಳಿ ಹೇಳಿಕೊಂಡಿದ್ದ. ಯುವತಿಯ ಮದುವೆ ದಿನ ಹತ್ತಿರ ಬರುತ್ತಿದ್ದಂತೆ ಸಂಪೂರ್ಣವಾಗಿ ವಿಚಲಿತನಾದ ಸತೀಶ್ ಆತ್ಮಹತ್ಯೆ ಮಾಡಲು ಪ್ರಯತ್ನಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಆತನ ಸ್ನೇಹಿತರು ಸತೀಶ್‌ನನ್ನು ಯುವತಿಯ ಮನೆಗೆ ಕರೆದೊಯಿದ್ದಾರೆ. ಅಲ್ಲಿ ಸತೀಶ್ ಆ ಯುವತಿಯನ್ನು ಪ್ರೀತಿಸುತ್ತಿರುವುದಾಗಿಯೂ, ಆತ ಆತ್ಮಹತ್ಯೆ ಯತ್ನ ನಡೆಸಿರುವುದಾಗಿಯೂ ತಿಳಿಸಿದ್ದಾರೆ. ಆದರೆ ಮನೆಯವರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಸತೀಶ್ ಗೆಳೆಯರ ನೆರವಿನಿಂದ ಯುವತಿಗೆ ಅರಿಶಿಣಕೊಂಬು ಕಟ್ಟಿ ಅಲ್ಲೆ ಮದುವೆ ಶಾಸ್ತ್ರ ಮುಗಿಸಿದ್ದಾನೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಯುವತಿಯ ತಾಯಿ ಸಕಲೇಶಪುರ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಗಳಿಗೆ ಇಷ್ಟವಿಲ್ಲ ದಿದ್ದರೂ ಬೆದರಿಸಿ ಬಲವಂತವಾಗಿ ಮದುವೆ ಯಾಗಿದ್ದಾರೆಂದು ದೂರಿದ್ದಾರೆ.