ಮುದ್ದೇಬಿಹಾಳ: 3 ಮಕ್ಕಳ ತಂದೆಯೊಬ್ಬ ತನ್ನ ಟಾಟಾ ಏಸ್ ಗೂಡ್ಸ್ ವಾಹನದಲ್ಲಿ ನಿತ್ಯ ಶಾಲೆಗೆ ಹೋಗಿ ಬರುತ್ತಿದ್ದ ಹೈಸ್ಕೂಲ್ ವಿದ್ಯಾರ್ಥಿನಿಯೊಂದಿಗೆ ಹೆದರಿಸಿ, ಬೆದರಿಸಿ ಅತ್ಯಾಚಾರ ಮಾಡಿರುವ ಮುದ್ದೇಬಿಹಾಳ ತಾಲೂಕಿನ ಗೋನಾಳ ಎಸ್.ಎಚ್.ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಗೋನಾಳ ಎಸ್ ಹೆಚ್ ಗ್ರಾಮದ ನಿವಾಸಿ ದ್ಯಾಮಣ್ಣ ಗುಳಬಾಳ (30) ಬಂಧಿತ ಆರೋಪಿಯಾಗಿದ್ದು, ಆತನ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಪೊಲೀಸರ ವಶದಲ್ಲಿದ್ದಾನೆ.
ಏನಿದು ಘಟನೆ: ದ್ಯಾಮಣ್ಣ ಟಾಟಾ ಏಸ್ ವಾಹನ ಓಡಿಸಿಕೊಂಡು ಜೀವನ ನಡೆಸುವಾತ. ಗೋನಾಳ ಗ್ರಾಮದಿಂದ ಮುದ್ದೇಬಿಹಾಳ ಪಟ್ಟಣಕ್ಕೆ ಶಾಲೆ ಕಲಿಯಲು ತನ್ನ ವಾಹನದಲ್ಲೇ ಬರುತ್ತಿದ್ದ ಬಾಲಕಿಯೊಂದಿಗೆ ಸಲುಗೆ ಬೆಳೆಸಿಕೊಂಡು ತನ್ನನ್ನು ಪ್ರೀತಿಸುವಂತೆ ಪೀಡಿಸಿದ್ದಾನೆ. ಆಕೆ ನಿರಾಕರಿಸಿದಾಗ ಆಕೆಯ ತಂದೆ, ತಾಯಿಯನ್ನು ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ. ಇದರಿಂದ ಹೆದರಿದ ಬಾಲಕಿ ಬಲವಂತದ ಪ್ರೀತಿಯಲ್ಲಿ ಸಿಲುಕಿದ್ದಳು. ಇದು ಕೊರೊನಾ ಹಿನ್ನೆಲೆ ಶಾಲೆ ಬಂದ್ ಆಗಿದ್ದರೂ ಎರಡು ವರ್ಷ ಕದ್ದುಮುಚ್ಚಿ ನಡೆದಿತ್ತು. ಮನೆಯವರಿಗೆ ಈ ವಿಷಯ ತಿಳಿದರೆ ತನ್ನನ್ನು ಶಾಲೆ ಬಿಡಿಸುತ್ತಾರೆ ಎಂದು ಹೆದರಿ ಬಾಲಕಿ ವಿಷಯವನ್ನು ಮನೆಯಲ್ಲಿ ತಿಳಿಸಿರಲಿಲ್ಲ. ಆದರೆ ಸೆ. 7 ರಂದು ಬೆಳಿಗ್ಗೆ ಬಾಲಕಿಯನ್ನು ದ್ಯಾಮಣ್ಣ ಅಪಹರಿಸಿದ್ದಾನೆ ಎಂದು ಗೊತ್ತಾಗಿ ಬಾಲಕಿಯ ಪಾಲಕರು ತಾಳಿಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತನಿಖೆ ನಡೆಸಿದ ಪೊಲೀಸರು ದ್ಯಾಮಣ್ಣ ಮತ್ತು ಬಾಲಕಿಯನ್ನು ಪತ್ತೆ ಮಾಡಿ ಠಾಣೆಗೆ ಕರೆತಂದಾಗಲೇ ಬಲವಂತದ ಪ್ರೀತಿ, ಅತ್ಯಾಚಾರ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು 12 ದಿನಗಳ ಬಳಿಕ ದ್ಯಾಮಣ್ಣ ಹಾಗೂ ಬಾಲಕಿಯನ್ನು ಪತ್ತೆಹಚ್ಚಿ ಕರೆತಂದಿದ್ದಾರೆ. ಆಗ ಧೈರ್ಯ ತಂದುಕೊಂಡ ಬಾಲಕಿ ನಡೆದದ್ದೆಲ್ಲವನ್ನೂ ಪೊಲೀಸರಿಗೆ ತಿಳಿಸಿದ್ದಾಳೆ.
ಈ ಪ್ರಕರಣದಲ್ಲಿ ದ್ಯಾಮಣ್ಣನ ಎಂಟು ಜನ ಬಂಧುಗಳ ವಿರುದ್ದವೂ ಅಪಹರಣದಲ್ಲಿ ಭಾಗಿಯಾದ ಪ್ರಕರಣ ದಾಖಲಾಗಿದೆ. ಬಾಲಕಿಯ ಕುಟುಂಬದವರು ತಮಗೆ ರಕ್ಷಣೆ ನೀಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.