ಬೆಂಗಳೂರು: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ 6 ವರ್ಷದ ಬಾಲಕಿಯ ಮೃತದೇಹ ಪತ್ತೆಯಾಗಿದೆ. ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಬುಧವಾರ ಬೆಳಗ್ಗೆ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಆಕೆಯ ಗುರುತು ಪತ್ತೆಯಾಗಿಲ್ಲ. ಮಗುವಿನ ಬಟ್ಟೆ ಆಧರಿಸಿ ಆಕೆ ಕೂಲಿ ಕೆಲಸ ಮಾಡುವ ದಂಪತಿಯ ಪುತ್ರಿ ಎಂದು ಅಂದಾಜಿಸಲಾಗಿದೆ.
ಇನ್ನು ಮೈಮೇಲೆ ಪರಚಿದ ಗಾಯಗಳು ಹಾಗೂ ರಕ್ತಸಿಕ್ತ ಬಟ್ಟೆಗಳಿಂದ ಬಾಲಕಿ ಶವ ಕಂಡುಬಂದಿದ್ದು, ಬೇರೆಡೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿ ಬಳಿಕ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ ಎಂದು ರೈಲ್ವೆ ಪೊಲೀಸರು ಹೇಳಿದರು. ಮೃತದೇಹವನ್ನು ಕಂಡ ಪಾರ್ಕಿಂಗ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ರೈಲ್ವೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಬಾಲಕಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ರೈಲ್ವೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಮೀಪದ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರೈಲ್ವೆ ಎಸ್.ಪಿ ಡಾ.ಸೌಮ್ಯಲತಾ, ರೈಲ್ವೆ ಸ್ಟೇಷನ್‌ನಲ್ಲಿ 6 ವರ್ಷದ ಒಂದು ಹೆಣ್ಣು ಮಗವಿನ ಮೃತ ದೇಹ ಸಿಕ್ಕಿದೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಲಾಗಿದೆ.
ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಬೇರೆಲ್ಲೋ ಕೊಲೆಗೈದು ಇಲ್ಲಿ ಎಸೆಯಲಾಗಿದೆ. ಭಿಕ್ಷಾಟನೆ ಮಾಡುತ್ತಿದ್ದ ಕುಟುಂಬದ ಮಗು ಎಂದು ತಿಳಿದು ಬಂದಿದ್ದು, ಮರಣೋತ್ತರ ವರದಿ ಬಂದ ನಂತರ ಸಾವಿಗೆ ಕಾರಣ ತಿಳಿದು ಬರಲಿದೆ ಎಂದರು.