ಕೊಳ್ಳೇಗಾಲ: ಮಗಳೊಂದಿಗೆ ಜಗಳವಾಡುತ್ತಿದ್ದ ಅಳಿಯನನ್ನೇ ಮಾವ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ತಾಲೂಕಿನ ಜಾಗೇರಿಯಲ್ಲಿ ಮಂಗಳವಾರ ನಡೆದಿದೆ.
ಆಂಥೋಣಿ ಕೊಲೆಯಾದ ಅಳಿಯ. ಗ್ರಾಮದ ಅಯ್ನಾವೂ ತನ್ನ ಮಗಳೊಂದಿಗೆ ಜಗಳ ತೆಗೆಯುತ್ತಿದ್ದ ಅಳಿಯನನ್ನೇ ಕೊಂದ ಆರೋಪಿ.
ಘಟನೆ ವಿವರ: ಜಾಗೇರಿ ಗ್ರಾಮದ ಅಯ್ನಾವೂ ತನ್ನ ಮಗಳು ಜಾನ್ಸಿಯನ್ನು ಅದೇ ಗ್ರಾಮದ ಆಂಥೋಣಿಗೆ ಕೊಟ್ಟು ವಿವಾಹ ಮಾಡಿದರು. ಮನೆಯಲ್ಲಿ ಪತಿ ಪತ್ನಿ ನಡುವೆ ಜಗಳವಾಗಿದ್ದನ್ನು ಅರಿತ ಮಾವ ಮಗಳನ್ನು ಮನೆಗೆ ಕರೆದುಕೊಂಡು ಹೋಗಿದ್ದ. ಇದರಿಂದ ಬೇಸತ್ತ ಆಂಥೋಣಿ ಮಾವನ ಮನೆಗೆ ಹೋಗಿ ಪತ್ನಿಯನ್ನು ಕಳುಹಿಸುವಂತೆ ಕೇಳಿದ್ದು ಮಾತಿಗೆ ಮಾತು ಬೆಳೆದು ಜಗಳಕ್ಕೆ ತಿರುಗಿ ಮಾವ ಆಳಿಯನನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಡಿವೈಎಸ್ಪಿ ನಾಗರಾಜು, ಸಿ.ಐ. ಶಿವರಾಜ ಆರ್.ಮುದುಹೊಳಲು, ಎಸ್ಐ ಮಂಜುನಾಥ ಭೇಟಿ ನೀಡಿ ಪರಿಶೀಲನೆಯ ಬಳಿಕ ಶವವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.