ಕಾರವಾರ : ಜಾನುವಾರು ಮೇಯಿಸಲು ಹೋಗಿದ್ದ ವೃದ್ಧನೋರ್ವ ಕಾಳಿ ನದಿ ನೀರಿನ ಸೆಳವಿಗೆ ಸಿಕ್ಕಿ, ಮೂರು ದಿನ ಮರದ ಟೊಂಗೆ ಹಿಡಿದು ಸಾವನ್ನು ಗೆದ್ದು ಬಂದಿದ್ದಾರೆ.
ಮೂರು ದಿನಗಳ ಬಳಿಕ ಜೀವಂತವಾಗಿ , ಮನೆಯವರ ಹುಡುಕಾಟದಲ್ಲಿ ಪತ್ತೆಯಾಗಿದ್ದಾರೆ. ಕಾರವಾರ ತಾಲೂಕಿನ ಹಣಕೋಣ ಗ್ರಾಮದ ವೃದ್ಧ ವೆಂಕಟರಾಯ ಬದುಕಿ ಬಂದವರು.
ನೀರಿನಲ್ಲಿ ಸೆಳವಿಗೆ ಸಿಕ್ಕಿದ್ದ ವೃದ್ಧ 75 ವರ್ಷದ ವೆಂಕಟರಾಯ್ ಕೊಠಾರಕರ್ ಎಂಬುವವರು ಮರದ ಟೊಂಗೆ ಹಿಡಿದು ಬದುಕಿ ಬಂದಿದ್ದಾರೆ. ವೆಂಕಟರಾಯ ಅವರು ಮೇ 16ರಂದು ಮನೆಯ ಸಮೀಪದಲ್ಲೆ ಜಾನುವಾರುಗಳನ್ನು ಮೇಯಿಸಲು ಹೋಗಿದ್ದರು. ಈ ಸಂದರ್ಭದಲ್ಲಿ ಜೋರು ಗಾಳಿ ಮಳೆ ಇತ್ತು. ಆಕಸ್ಮಿಕವಾಗಿ ಕಾಳಿ ನದಿಯ ಹಿನ್ನೀರಿನಲ್ಲಿ ಸೆಳವಿಗೆ ಸಿಕ್ಕು ನಾಪತ್ತೆಯಾದರು.
ಇದನ್ನೂ ಓದಿ : ಕಾರವಾರ: ದೇವರ ಮುಂದೆ ಮಗುವಿನ ಶವ ಕೊಂಡೊಯ್ದ ಅಜ್ಜಿ ; ಬದುಕಿಸು ಎಂದು ಪ್ರಾರ್ಥಿಸಿದಳು
ಜಾನುವಾರು ಮೇಯಿಸಲು ಹೋದ ತಂದೆ ವಾಪಸ್ ಬಂದಿಲ್ಲ ಅಂತಾ ಅವರ ಮಕ್ಕಳು ಹಾಗೂ ಸಂಬಂಧಿಕರು ಕಳೆದ ಮೂರು ದಿನಗಳಿಂದ ಕಂಡ ಕಂಡಲ್ಲಿ ಹುಡುಕಾಟ ನಡೆಸಿದ್ದರು. ವೃದ್ಧ ವೆಂಕಟರಾಯ್ ಮಾತ್ರ ಎಲ್ಲಿಯೂ ಪತ್ತೆಯಾಗಿರಲಿಲ್ಲ. ತೌಕ್ತೆ ಚಂಡಮಾರುತ ಇರೋ ಹಿನ್ನಲೆಯಲ್ಲಿ ಅವರು ಚಂಡಮಾರುತಕ್ಕೆ ಸಿಲುಕಿ ಏನೋ ಅನಾಹುತ ನಡೆದು ಹೋಗಿದೆ ಅಂತಾ ಭಾವಿಸಿದರು.
ಆದರೂ ಹುಡುಕಾಟ ನಡೆಸುತ್ತಿದ್ದಾಗ ,ಜಾನುವಾರು ಮೇಯಿಸಲು ಹೋಗಿದ್ದ ಸ್ವಲ್ಪ ದೂರ ಪ್ರದೇಶದಲ್ಲಿ ವೆಂಕಟರಾಯ ಮರದ ಟೊಂಗೆ ಹಿಡಿದುಕೊಂಡು ಜೀವ ಉಳಿಸಿಕೊಂಡಿದ್ದರು. ಎರಡು ದಿನ ಸುರಿದ ಭಾರೀ ಮಳೆಯಲ್ಲಿಯೇ ಅವರು ದಿನಕಳೆದಿದ್ದರು . ಅಂತೂ ಅವರ ಸಂಬಂಧಿಕರು ಹಾಗೂ ಗ್ರಾಮಸ್ಥರು ವೃದ್ಧನನ್ನು ನೀರ ಮಧ್ಯದ ಮರದಿಂದ ಮೇಲೆತ್ತಿ ಮನೆಗೆ ಕರೆದು ತಂದರು. ವೆಂಕಟರಾಯ್ ಪ್ರಾಣಾಪಾಯದಿಂದ ಪಾರಾಗಿ ಮನೆಗೆ ಬಂದಿದ್ದು ಕುಟುಂಬಸ್ಥರಲ್ಲಿ ಸಂಭ್ರಮ ತಂದಿದೆ.