Advertisement

ಮೀನು ಹಿಡಿಯಲು ಕೆರೆ ಏರಿ ಒಡೆದ ಭೂಪ!

02:38 PM Jul 19, 2022 | Team Udayavani |

ಕನಕಪುರ: ಮೀನು ಹಿಡಿಯಲು ವ್ಯಕ್ತಿಯೊಬ್ಬ ಏರಿ ಒಡೆದು ನೀರು ಪೋಲು ಮಾಡಿರುವ ಘಟನೆ ಉಯಂಬಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ತಾಲೂಕಿನ ಉಯಂಬಳ್ಳಿ ಗ್ರಾಮದ ಹೊರ ವಲಯದ ಬಸವನ ಕೆರೆಯ ಪೂರ್ವ ಭಾಗದಲ್ಲಿ ಗ್ರಾಮದ ಯು.ವಿ.ಶಿವಕುಮಾರ್‌ ಜೆಸಿಬಿ ಯಂತ್ರದ ಮೂಲಕ ಅನಧಿಕೃತವಾಗಿ ಏರಿ ಒಡೆದು ನೀರನ್ನು ಪೈಪ್‌ ಮೂಲಕ ಹೊರ ಬಿಟ್ಟು ಪೋಲು ಮಾಡಿದ್ದಾನೆ. ಸ್ವಾರ್ಥಕ್ಕೆ ಕೆರೆ ಏರಿ ಒಡೆದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಪಂನಿಂದ ಕೆರೆಯ ಮೀನು ಪಾಸುವಾರು ಹಕ್ಕನ್ನು ಹರಾಜು ಪ್ರಕ್ರಿಯೆ ಮೂಲಕ ನೀಡಲಾಗಿತ್ತು. ಇತ್ತೀಚಿಗೆ ಸುರಿದ ಮಳೆಯಿಂದ ಕೆರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿತ್ತು. ಇದರಿಂದ ಮೀನುಗಾರಿಕೆ ಮಾಡಲು ಅಡ್ಡಿಯಾಗಿದೆ ಎಂಬ ಕಾರಣಕ್ಕೆ ಏರಿಯನ್ನೇ ಒಡೆದು ಪೈಪ್‌ ಮೂಲಕ ನೀರನ್ನು ಹೊರ ಬಿಡಲಾಗಿದೆ ಎಂಬ ಆರೋಪ ರೈತ ಮುಖಂಡರಿಂದ ಕೇಳಿ ಬಂದಿದೆ.

ಮೂಲ ಸ್ವರೂಪಕ್ಕೆ ಧಕ್ಕೆ: ಜಲ ಮೂಲಗಳಿಗೆ ಕೊಂಡಿ ಆಗಿರುವ ಕೆರೆ, ಹಳ್ಳಗಳ ಮೂಲ ಸ್ವರೂಪಕ್ಕೆ ಧಕ್ಕೆ ತರುವುದು ಕ್ರಿಮಿನಲ್‌ ಅಪರಾಧ. ಕೆರೆ ಸಂರಕ್ಷಣೆ, ಅಭಿವೃದ್ಧಿಪಡಿಸಲು ಸರ್ಕಾರ ನರೇಗಾ ಯೋಜನೆ ಯಡಿ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡುತ್ತಿದೆ. ಅದಾಗಿಯೂ ಬೃಹದಾಕಾರವಾದ ಕೆರೆ ಏರಿ ಯಂತ್ರದ ಮೂಲಕ ಒಡೆದು ಹಾಕಿರುವುದು ಸಹಜವಾಗಿಯೇ ಜನಾಕ್ರೋಶಕ್ಕೆ ಕಾರಣವಾಗಿದೆ.

ಸರಿಯಾದ ಮಾಹಿತಿ ನೀಡಿಲ್ಲ: ಮೀನು ಪಾಸುವಾರು ಹಕ್ಕು ಹರಾಜು ಸಂದರ್ಭದಲ್ಲಿ ಕೆರೆಗಳ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಕೆರೆ ಸಂರಕ್ಷಣೆ ಮಾಡುವ ಬಗ್ಗೆ ಗ್ರಾಪಂ ಅಧಿಕಾರಿಗಳು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಿದೇ ಇರುವುದೇ ಇಂತಹಅವಘಡಗಳಿಗೆ ಕಾರಣ ಎಂಬ ಆರೋಪಗಳು ಸ್ಥಳೀಯರಿಂದ ಕೇಳಿ ಬರುತ್ತಿವೆ.

Advertisement

ಕೆರೆ ತುಂಬಿಸುವ ಯೋಜನೆಯಲ್ಲಿ ಬಸವನ ಕೆರೆಗೆ ಈಗಾಗಲೇ ನೀರನ್ನು ಬಿಡಲಾಗಿದೆ. ಮುಂದೊಂದುಕೆರೆ ತುಂಬಿ ಕೋಡಿ ಹರಿದರೆ, ಈಗ ಕೆರೆ ಏರಿ ಒಡೆದಿರುವುದರಿಂದ ಅಪಾಯ ಸಂಭವಿಸಲಿದೆ ಎಂಬ ಆತಂಕ ಸ್ಥಳೀಯರಲ್ಲಿ ಮನೆ ಮಾಡಿದೆ.

ಸಾತನೂರು ಠಾಣೆಗೆ ದೂರು: ತಮ್ಮ ಜಮೀನಿಗೆ ನೀರು ಹಾಯಿಸಿಕೊಳ್ಳುವ ದುರುದ್ದೇಶದಿಂದ ಅನಧಿ ಕೃತವಾಗಿ ಕೆರೆಯ ಏರಿಯನ್ನು ಒಡೆದಿರುವ ಯು.ವಿ. ಶಿವಕುಮಾರ್‌ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಉಯ್ಯಂಬಳ್ಳಿ ಪಿಡಿಒಮುನಿಮಾರೇಗೌಡ ಸಾತನೂರು ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಸಾತನೂರು ಎಸ್‌ಎಚ್‌ಒ ಭೇಟಿನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಿಜೆಪಿ, ಕೈ ಮಧ್ಯೆ ಮಾತಿನ ಚಕಮಕಿ: ಕೆರೆ ಏರಿ ಒಡೆದ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಪಂ ಅಧಿಕಾರಿಗಳಿಗೆ ಬಿಜೆಪಿ ಮುಖಂಡರುಮನವಿ ಮಾಡಲು ಹೋದಾಗ ಕಾಂಗ್ರೆಸ್‌ ಮತ್ತುಬಿಜೆಪಿ ಮುಖಂಡರ ನಡುವೆ ಘರ್ಷಣೆ ನಡೆಯಿತು.

ಗ್ರಾಪಂ ವಿರುದ್ಧ ಆಕ್ರೋಶ: ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನಂದಿನಿ ಗೌಡ ಮತ್ತು ಕೆಲ ಮುಖಂಡರು ಕಾರ್ಯಕರ್ತರುಕೆರೆ ಏರಿ ಒಡೆದಿರುವ ಸ್ಥಳಕ್ಕೆ ಭೇಟಿ ನೀಡಿ ಉಯ್ಯಂಬಳ್ಳಿ ಗ್ರಾಪಂ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳನಿರ್ಲಕ್ಷದಿಂದಲೇ ಏರಿ ಒಡೆಯಲು ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೆಲವು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷಕ್ಕೆ ಧಿಕ್ಕಾರ ಕೂಗಿದರು. ಸ್ಥಳದಲ್ಲಿದ್ದ ಕೆಲವು ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿಗೆ ಧಿಕ್ಕಾರ ಕೂಗಿದರು. ಇದು ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆಗೆ ಕಾರಣವಾಯಿತು.

ಉಭಯ ಪಕ್ಷದ ಕಾರ್ಯಕರ್ತರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.  ಬಳಿಕ ಕೆರೆ ಏರಿ ಒಡೆದ ವ್ಯಕ್ತಿ ವಿರುದ್ಧ ಕ್ರಿಮಿನಲ್‌ ಕೇಸಿ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ನಂದಿನಿಗೌಡ ಅಧಿಕಾರಿಗಳಿಗೆ ಮನವಿ ಮಾಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next