ಹಾವೇರಿ: ಕೋವಿಡ್ ಸೋಂಕಿನಿಂದ ಮಹಿಳೆಯೊಬ್ಬಳು ಮೃತಪಟ್ಟಿದ್ದು, ಅಂತ್ಯಕ್ರಿಯೆ ನಡೆಸಲು ಆರೋಗ್ಯ ಇಲಾಖೆ ಸಿಬ್ಬಂದಿ ಆಗಮಿಸದ ಹಿನ್ನೆಲೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ ಘಟನೆ ಬುಧವಾರ ಹಾನಗಲ್ಲ ತಾಲೂಕಿನ ಮಲಗುಂದ ಗ್ರಾಮದಲ್ಲಿ ನಡೆದಿದೆ.
ಇತ್ತೀಚೆಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಡುವವರ ಸಂಖ್ಯೆ ಅಧಿಕಗೊಂಡಿದ್ದು, ನಿತ್ಯ ಸರಾಸರಿ 2-3 ಸೋಂಕಿತರು ಮೃತರಾಗುತ್ತಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಜ್ವರದಿಂದ ಬಳಲುತ್ತಿದ್ದ 50 ವರ್ಷದ ಮಹಿಳೆಯೋರ್ವಳು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ. ಕೋವಿಡ್ ನಿಯಮಾನುಸಾರ ಮೃತದೇಹವನ್ನು ಪ್ಯಾಕ್ ಮಾಡಿಕೊಂಡು ಆಂಬ್ಯುಲನ್ಸ್‌ನಲ್ಲಿ ಮಲಗುಂದ ಗ್ರಾಮಕ್ಕೆ ತರಲಾಗಿತ್ತು. ಆದರೆ ಕೋವಿಡ್ ಆತಂಕದಿಂದಾಗಿ ಸಂಬಂಧಿಕರು ಹಾಗೂ ಗ್ರಾಮಸ್ಥರು ಅಂತ್ಯಕ್ರಿಯೆ ಮಾಡಲು ಹಿಂದೇಟು ಹಾಕಿದ್ದರಿಂದ ಅಂಬ್ಯುಲೆನ್ಸ್ ಚಾಲಕ ಸುಮಾರು 2 ಗಂಟೆಗಳ ಕಾಲ ಮೃತದೇಹವನ್ನು ವಾಹನದಲ್ಲಿಯೇ ಇಟ್ಟುಕೊಂಡು ಕಾಲಕಳೆಯುವಂತಾಯಿತು.
ಇದನ್ನೂ ಓದಿ : ಕಾಳ್ಗಿಚ್ಚಿನಂತೆ ಹಬ್ಬಿದ ಕೋವಿಡ್ : ರಾಜ್ಯದಲ್ಲಿಂದು 39047 ಪ್ರಕರಣಗಳು ಪತ್ತೆ
ಅಲ್ಲದೇ ಮೃತದೇಹದ ಅಂತ್ಯಕ್ರಿಯೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿ, ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಯಾರೋಬ್ಬರು ಸಹ ಬಾರದ ಹಿನ್ನೆಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದರು. ಸ್ಥಳಕ್ಕೆ ಆಡೂರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೊದಲು ಮೃತ ಮಹಿಳೆಯ ಸಂಬಂಧಿಕರು ನಾವೇ ಅಂತ್ಯಸಂಸ್ಕಾರ ಮಾಡುತ್ತೇವೆ ಎಂದು ತಿಳಿಸಿದ್ದರಿಂದ ಪಿಪಿಇ ಕಿಟ್‌ಗಳೊಂದಿಗೆ ಅಂಬ್ಯುಲೆನ್ಸ್‌ನಲ್ಲಿ ಮೃತದೇಹವನ್ನು ಗ್ರಾಮಕ್ಕೆ ಕಳುಹಿಸಿ ಕೊಡಲಾಗಿತ್ತು. ಗ್ರಾಮಕ್ಕೆ ಹೋದ ನಂತರ ಸಂಬಂಧಿಕರು ಅಂತ್ಯಸಂಸ್ಕಾರಕ್ಕೆ ಹಿಂದೇಟು ಹಾಕಿದ್ದಾರೆ ಇದರಿಂದ ಸ್ವಲ್ಪ ಗೊಂದಲ ಉಂಟಾಯಿತು. ನಂತರ ತಾಲೂಕಾ ಆರೋಗ್ಯಾಧಿಕಾರಿಗಳ ಗಮನಕ್ಕೆ ತಂದು ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
-ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಡಿಎಚ್‌ಒ ಹಾವೇರಿ