ಬೆಂಗಳೂರು: ಕರಗ ನೋಡಲು ಸ್ನೇಹತರೊಂದಿಗೆ ಬಂದಿದ್ದ ಯುವಕನನ್ನು ಕ್ಷುಲಕ ಕಾರಣಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಶನಿವಾರ ರಾತ್ರಿ ಕೆಂಗೇರಿ ರೈಲ್ವೆ ನಿಲ್ದಾಣದ ಸಮೀಪದ ಹರ್ಷ ಲೇಔಟ್‌ನಲ್ಲಿ ನಡೆದಿದೆ.
ಇತ್ತೀಚೆಗೆ ಜೆಜೆನಗರದಲ್ಲಿ ಬೈಕ್ ತಾಗಿತೆಂದು ಕೋಪಗೊಂಡ ಯುವಕರ ಗುಂಪು ಚಂದ್ರು ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಮಾಸುವ ಮುನ್ನವೇ ಅಂತದ್ದೇ ಮತ್ತೂಂದು ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ತಂದಿದೆ. ರೈಲ್ವೆ ಟ್ರಾಕ್ ಬಳಿ ಎಂಟಿಎಸ್ ಲೇಔಟ್‌ನಿವಾಸಿ ಭರತ್ (20)ನನ್ನು ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಟವಿ ಶೋ ರೂಮ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಭರತ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಶನಿವಾರ ರಾತ್ರಿ ಕೆಂಗೇರಿಯ ಕರಗ ನಡೆಯುತ್ತಿರುವುದನ್ನು ನೋಡಲು ಬಂದಿದ್ದ. ಈ ವೇಳೆ ಡಿಯೋ ಸ್ಕೂಟರ್‌ನಲ್ಲಿ ಬಂದಿದ್ದ ಯುವಕನೊಬ್ಬ ಭರತ್ ಕೈಗೆ ತಗುಲಿಸಿದ್ದ. ಕೋಪಗೊಂಡ ಭರತ್ ಯುವಕನಿಗೆ ಸ್ಕೂಟರ್ ತಡೆದು ನೋಡಿಕೊಂಡು ಸ್ಕೂಟರ್ ಚಲಾಯಿಸುವಂತೆ ಬುದ್ದಿ ಹೇಳಿದ್ದು ಸ್ನೇಹಿತರು ಜೊತೆಗೂಡಿದ್ದರು.
ಈ ಸಂದರ್ಭದಲ್ಲಿ ಯುವಕ ಮತ್ತು ಭರತ್ ನಡುವೆ ಮಾತಿನ ಚಕಮಕಿ ನಡೆದಿದ್ದು ನಿನ್ನ ನೋಡಿಕೊಳ್ತೀನಿ ಎಂದು ಯುವಕ ಹೇಳಿ ಹೋಗಿದ್ದ. ಘಟನೆ ನಡೆದ ಕೆಲವೇ ನಿಮಿಷದಲ್ಲಿ 10ರಿಂದ 15 ಮಂದಿಯ ಗ್ಯಾಂಗ್‌ನ್ನು ಕರೆದುಕೊಂಡು ಬಂದ ಆರೋಪಿ ಮುಂಜಾನೆ 2 ಗಂಟೆ ಸುಮಾರಿನಲ್ಲಿ ಭರತನ ಜೊತೆ ಮತ್ತೆ ಜಗಳವಾಡಿದ್ದಾನೆ.
ನಂತರ ಈ ಗ್ಯಾಂಗ್‌ನವರು ರೈಲ್ವೆ ಹಳಿ ಬಳಿ ಕರೆದೊಯ್ದು ಚಾಕುವಿನಿಂದ ದೇಹದ 15 ಕಡೆ ಮನಬಂದಂತೆ ಇರಿದು ಕೊಲೆ ಮಾಡಿದ್ದಾರೆ. ಬಳಿಕ ಶವವನ್ನು ರೈಲ್ವೆ ಹಳಿ ಬಳಿ ಎಳೆದುಕೊಂಡು ಹೋಗುತ್ತಿದ್ದಾಗ ಅದನ್ನು ಗಮನಿಸಿದ ರೈಲ್ವೆ ಸಿಬ್ಬಂದಿ ಕೊಲೆಗಾರರ ಸಮೀಪ ಹೋಗುತ್ತಿದ್ದಂತೆ ಶವವನ್ನು ಸ್ಥಳದಲ್ಲೇ ಬಿಟ್ಟು ಆರೋಪಿಗಳು ಪರಾರಿಯಾಗಿದ್ದಾರೆ.
ಘಟನೆ ಅರಿತು ರೈಲ್ವೆ ಎಸ್‌ಪಿ ಸಿರಿಗೌರಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಟಿ ರೈಲ್ವೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.