ಬೆಂಗಳೂರು: ಸ್ವಂತ ಅಕ್ಕನ ಮನೆಯಲ್ಲೇ ಕೈಚಳಕ ತೊರಿಸಿ, ಚಿನ್ನಾಭರಣ ಕಳವು ಮಾಡಿದ್ದ ತಂಗಿಯನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ನಗರದ ಲಗ್ಗೆರೆಯ ಚೌಡೇಶ್ವರಿ ನಗರದ ನಿವಾಸಿ ಶಶಿಕಲಾ(35) ಬಂಧಿತ ಆರೋಪಿ. ಮಹಿಳೆಯಿಂದ ಒಂಬತ್ತು ಲಕ್ಷ ರೂ. ಮೌಲ್ಯದ 220 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ದೂರುದಾರ ವಿಜಯ್‌ಕುಮಾರ್, ತಾಯಿ ಹಾಗೂ ಪತ್ನಿ ಮೀನಾ ಜತೆಗೆ ಲಗ್ಗೆರೆಯ ಚೌಡೇಶ್ವರಿನಗರದಲ್ಲಿ ವಾಸವಿದ್ದರು. ಆರೋಪಿ ಶಶಿಕಲಾ ಮನೆಯ ಮೊದಲನೇ ಮಹಡಿಯಲ್ಲಿವಾಸವಿದ್ದರು. ಮಾ.3ರಂದು ಯಾವುದೋ ಕಾರ್ಯನಿಮಿತ್ತ ಅಜ್ಜಿ ಮನೆಗೆ ತೆರಳಲುಸಿದ್ಧರಾಗಿದ್ದರು. ಈ ವೇಳೆ ಒಡವೆಗಳನ್ನು ಹಾಕಿಕೊಳ್ಳಲು ಬೀರುವನ್ನು ತೆಗೆದು ನೋಡಿದಾಗ, ಬೀರುವಿನಲ್ಲಿದ್ದ 220 ಗ್ರಾಂ ಚಿನ್ನಾಭರಣ ಕಾಣಲಿಲ್ಲ. ಹೀಗಾಗಿ, ಶಶಿಕಲಾ ಮೇಲೆ ಅನುಮಾನ ಪಟ್ಟು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ತನಿಖೆ ಚುರುಕುಗೊಳಿಸಿದ ಪೊಲೀಸರು, ಆರೋಪಿ ಶಶಿಕಲಾ(35)ಳನ್ನು ಬಂಧಿಸಿ, ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
“ಅಕ್ಕ ಮೀನಾ ರಾತ್ರಿ ವೇಳೆಯಲ್ಲಿ ಮಲಗುವಾಗ, ಬೀರುವಿನ ಕೀ ಅನ್ನು ತಲೆ ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುತ್ತಿದ್ದರು. ಇದನ್ನು ಗಮನಿಸಿದ್ದ ನಾನು, ಅಕ್ಕ ಒಬ್ಬರೇ ಮನೆಯಲ್ಲಿದ್ದಾಗಅವರಿಗೆ ತಿಳಿಯದ ರೀತಿಯಲ್ಲಿ ಬೀರುವಿನ ಕೀ ತೆಗೆದು ಚಿನ್ನಾಭರಣ ಕಳವು ಮಾಡಿದ್ದೆ’ಎಂದು ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.