ಬೆಂಗಳೂರು: ಮದುವೆ ಆಗುವುದಾಗಿ ದೈಹಿಕ ಸಂಪರ್ಕ ಬೆಳೆಸಿ ಯುವತಿಗೆ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದ್ದು, ಅರೋಪಿ ವಿರುದ್ಧ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೈಹಿಕ ಸಂಪರ್ಕ ಬೆಳೆಸಿದ ಯುವತಿಗೆ ಪೊಲೀಸ್ ಭಯದಿಂದ ತಾಳಿ ಕಟ್ಟಿದ ಯುವಕನೊಬ್ಬ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ಆಗುವಂತೆ ಒತ್ತಾಯಿಸಿದಕ್ಕೆ ಏಕಾಏಕಿ ನಾಪತ್ತೆಯಾಗಿರುವ ಘಟನೆ ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸಂಬಂಧ 24 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ ಸಾಗರ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿದ್ದು, ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ನಗರದ ಖಾಸಗಿ ಲ್ಯಾಬ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ, ಅಲ್ಲಿಯೇ ಸಿಸ್ಟಮ್ ವರ್ಕ್ ಮಾಡುತ್ತಿದ್ದ ಸಾಗರ್‌ನನ್ನು ಪ್ರೀತಿಸುತ್ತಿದ್ದಳು. ಈ ವೇಳೆ ಆಕೆಯನ್ನು ಮದುವೆಯಾಗುವುದಾಗಿ ಆರೋಪಿ ಆಕೆ ಜತೆ ಹಲವಾರು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದನು. ಅದರಿಂದ ಯುವತಿ ಗರ್ಭಿಣಿಯಾಗಿದ್ದರು. ಈ ವಿಚಾರ ಕೇಳಿದ ಆರೋಪಿ, ಆಕೆಗೆ ಗರ್ಭಪಾತ ಮಾತ್ರೆ ನುಂಗಿಸಿ ಭ್ರೂಣ ಹತ್ಯೆ ಮಾಡಿಸಿದ್ದಾನೆ. ಈ ವಿಚಾರ ತಿಳಿದ ಸಂತ್ರಸ್ತೆಯ ಸಹೋದರಿ, ಆರೋಪಿಯನ್ನು ಪ್ರಶ್ನಿಸಿ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹೆದರಿದ ಆರೋಪಿ ಆಸ್ಪತ್ರೆಯಲ್ಲಿಯೇ ಹಿರಿಯರ ಸಮ್ಮುಖದಲ್ಲಿ ಸಂತ್ರಸ್ತೆಗೆ ತಾಳಿ ಕಟ್ಟಿದ್ದಾನೆ. ಬಳಿಕ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ಆಗಬೇಕು ಎಂದು ಸಾಗರ್ ಸೂಚಿಸಲಾಗಿತ್ತು. ಆದರೆ, ಇದೀಗ ಆರೋಪಿ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ.
ಈ ಸಂಬಂಧ ಸಾಗರ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.